ಲಿಚಿ ಬೆಳಗೆ ಯೋಗ್ಯವಾದ ಭಾರತದ ಪ್ರದೇಶದಲ್ಲಿ ಲಿಚಿ ಬೆಳೆಸಲು ಭಾರತೀಯ ಕೃಷಿ ವಿಶ್ವವಿದ್ಯಾಲಯ ಸಂಶೋಧನೆ ನಡೆಸುತ್ತಿದೆ ಎಂದು ಗಣ್ಯರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಲಿಚಿ ಹೆಚ್ಚಾಗಿ ಬೆಳೆಯುವ ಪ್ರದೇಶಗಳಿಂದ ಕೃಷಿಕರ ಬೇಡಿಕೆಗೆ ತಕ್ಕಂತೆ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಿಂದ ತಳಿಗಳನ್ನು ವಿತರಿಸಲಾಗುವುದು ಎಂದು ಬಿಹಾರ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಅಜಯ್ ಕುಮಾರ್ ಸಿಂಗ್ ಹೇಳಿದರು.ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮತ್ತು ಅಧಿಕ ಮೌಲ್ಯದ ಹಾಗೂ ವಿದೇಶಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಫ್ ಸಿಜನ್ ಲಿಚಿ ಹಣ್ಣು ಮೇಳದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಲಿಚಿ ಬೆಳೆಗೆ ಯೋಗ್ಯವಾದ ಭಾರತದ ಪ್ರದೇಶದಲ್ಲಿ ಲಿಚಿ ಬೆಳೆಸಲು ಭಾರತೀಯ ಕೃಷಿ ವಿಶ್ವ ವಿದ್ಯಾನಿಲಯ ಸಂಶೋಧನೆ ನಡೆಸುತ್ತಿದೆ. ಕೊಡಗಿನ ಆಫ್ ಸೀಜನ್ ಲಿಚಿ ಬಗ್ಗೆಯೂ ಸಂಶೋಧನೆಗಳಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಆಫ್ ಸೀಜನ್ ಲಿಚಿ ಬೆಳೆಯುತ್ತದೆ ಎಂದರೆ ಎಲ್ಲರೂ ಆಶ್ಚರ್ಯಪಡುತ್ತಾರೆ ಎಂದರು.ರಾಷ್ಟ್ರೀಯ ಲಿಚಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಬಿಕಾಸ್ ದಾಸ್ ಮಾತನಾಡಿ, ಬಿಹಾರ, ಒಡಿಸಾ, ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಲಿಚಿ ಬೆಳೆಯುತ್ತಿದ್ದು ಆಫ್ ಸೀಜನ್ ಲಿಚಿ ಎಲ್ಲೆಡೆ ಗಮನ ಸೆಳೆಯುವಂತಾಗಿದೆ. 5 ವರ್ಷಗಳ ಯೋಜನೆಯಡಿಯಲ್ಲಿ ಲಿಚಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.
ತೋಟಗಾರಿಕ ಬೆಳೆಗಳ ಅಭಿವೃದ್ಧಿ ಸಂಘದ ಗೌರವ ಕಾರ್ಯದರ್ಶಿಯೂ ಆಗಿರುವ ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಮಾತನಾಡಿ ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ಉತ್ತಮ ಕಾರ್ಯ ಮಾಡುತಿದೆ. ಕೃಷಿಕರಿಗೆ ಉತ್ತಮ ತಳಿ ಹಾಗೂ ಮಾರುಕಟ್ಟೆಯ ಕೊರತೆ ಇದೆ. ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ಸದಸ್ಯರಾಗುವ ಮೂಲಕ ಕೃಷಿಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುವುದು ಎಂದರು.ಭಾರತೀಯ ತೊಟಗಾರೀಕಾ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಟಿ.ಕೆ. ಬೆಹರಾ ಮಾತನಾಡಿ, ಪಶ್ಚಿಮ ಘಟ್ಟ ಪ್ರದೇಶದ ಪೈಕಿ ಕೊಡಗಿನಲ್ಲಿ ವಿವಿಧ ಹಣ್ಣು ತರಕಾರಿಗಳನ್ನು ಬೆಳೆಸಲು ಸೂಕ್ತ ಪ್ರದೇಶ ಇದೆ. ಇಲ್ಲಿ ಹೆಚ್ಚಿನ ವಿದ್ಯಾವಂತ ಕೃಷಿಕರು ಇದ್ದಾರೆ. ಲಿಚಿ ಹಾಗು ರಾಂಬೂಟಾನ್ ಹಣ್ಣಿನ ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಬೇಕಿದೆ. ಕೃಷಿಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥ ಡಾ. ಬಿ.ಎಂ. ಮುರಳೀಧರ್, ಹಣ್ಣುಗಳ ಯೋಜನಾ ಸಂಯೋಜಕ ಡಾ. ಪ್ರಕಾಶ್ ಪಾಟೀಲ್, ಕೀಟ ವಿಜ್ಞಾನಿ ಡಾ. ಎ.ಟಿ. ರಾಣಿ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ವೀರೇಂದ್ರಕುಮಾರ್, ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಮುಖ್ಯಸ್ಥ ಡಾ. ನಡಾಫ್, ವಿವಿಧ ಕೃಷಿ ಹಾಗು ತೋಟಗಾರಿಕಾ ಇಲಾಖೆಯ ತಜ್ಞ ರು ಹಾಗೂ ಸಿಬ್ಬಂದಿ, ಕೇರಳ, ಹಾಸನ, ಸಕಲೇಶಪುರ, ಮೈಸೂರು ಮತ್ತು ಕೊಡಗಿನ ಕೃಷಿಕರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಆಫ್ ಸೀಜನ್ ಲಿಚಿ ಬೆಳೆಯ ವೈಜ್ಞಾನಿಕ ಕೃಷಿ ಮತ್ತು ಲಿಚಿ ಬೆಳೆಯ ಸವಾಲುಗಳು ಹಾಗೂ ಅವುಗಳ ನಿರ್ವಹಣೆ ಎಂಬ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು ಕೊಡಗಿನಲ್ಲಿ ಅತಿ ಹೆಚ್ಚಿನ ಲಿಚಿ ಕೃಷಿಯನ್ನು ಅಭಿವೃದ್ಧಿಪಡಿಸಿರುವ ಪಾಲಿಬೆಟ್ಟದ ಟ್ಯಾಂಕ್ ಸೈಡ್ ಎಸ್ಟೇಟ್ ಮಾಲೀಕ ಅಚ್ಚಯ್ಯ ಮತ್ತು ಮಾದಾಪುರದ ಲಕ್ಷ್ಮೀಜಾಲ ಎಸ್ಟೇಟ್ ಮಾಲೀಕ ವಿನಲ್ ಸೋಮಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಲಿಚಿ ಬೆಳೆಯ ತಾಂತ್ರಿಕತೆ, ಮಾರುಕಟ್ಟೆ, ಸವಾಲುಗಳು, ರೋಗನಿರ್ವಹಣೆ, ಭವಿಷ್ಯದ ನಿರೀಕ್ಷೆ ಬಗ್ಗೆ ತಜ್ಞರು ಮತ್ತು ಕೃಷಿಕರ ಮಧ್ಯೆ ವಿಚಾರ ಮಂಥನ ನಡೆಯಿತು. ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಕೃಷಿಕರು ನೇರವಾಗಿ ಕೇಂದ್ರದಲ್ಲಿನ ಲಿಚಿ ಗಿಡಗಳ ಬಳಿ ತೆರಳಿ ಪ್ರಾಯೋಗಿಕವಾಗಿ ಮಾಹಿತಿ ಪಡೆದರು.