ಚನ್ನರಾಯಪಟ್ಟಣದಲ್ಲಿ ದಸರಾ ಅಂಗವಾಗಿ ನಾಡಿನ ಇತಿಹಾಸ, ಸಂಸ್ಕೃತಿ ಹೇಳುವ ಗೊಂಬೆಗಳ ಪ್ರದರ್ಶನ

| Published : Oct 13 2024, 01:03 AM IST

ಚನ್ನರಾಯಪಟ್ಟಣದಲ್ಲಿ ದಸರಾ ಅಂಗವಾಗಿ ನಾಡಿನ ಇತಿಹಾಸ, ಸಂಸ್ಕೃತಿ ಹೇಳುವ ಗೊಂಬೆಗಳ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನರಾಯಪಟ್ಟಣದಲ್ಲಿನ ಸುಜಾತ ಕಾಫಿ ವರ್ಕ್ಸ್ ಮಾಲೀಕ ಕುಮಾರಸ್ವಾಮಿ ಮನೆಯಲ್ಲಿ ಹಬ್ಬದ ಹತ್ತೂ ದಿನ ನೂರಾರು ವಿವಿಧ ಬಗೆಯ ಆತ್ಯಾಕರ್ಷಕ ಗೊಂಬೆಗಳನ್ನು ಕೂರಿಸಿ ಪೂಜೆ ಸಲ್ಲಿಸಿದ್ದಾರೆ.

ಶರನ್ನವರಾತ್ರಿ ಉತ್ಸವ । ಸುಜಾತ ಕಾಫಿ ವರ್ಕ್ಸ್‌ನ ಕುಮಾರಸ್ವಾಮಿ ಮನೆಯಲ್ಲಿ ಗೊಂಬೆ ಪೂಜೆ । ಒಂಬತ್ತು ದಿನ ದುರ್ಗೆಯ ಆರಾಧನೆ । ಮುತ್ತೈದೆಯರಿಗೆ ಬಾಗಿನ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಗೊಂಬೆಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ಇದ್ದು, ಪಟ್ಟಣದಲ್ಲಿನ ಸುಜಾತ ಕಾಫಿ ವರ್ಕ್ಸ್ ಮಾಲೀಕ ಕುಮಾರಸ್ವಾಮಿ ಮನೆಯಲ್ಲಿ ಹಬ್ಬದ ಹತ್ತೂ ದಿನ ನೂರಾರು ವಿವಿಧ ಬಗೆಯ ಆತ್ಯಾಕರ್ಷಕ ಗೊಂಬೆಗಳನ್ನು ಕೂರಿಸಿ ಪೂಜೆ ಸಲ್ಲಿಸಿದ್ದಾರೆ.

ವಿಜಯದಶಮಿ ಆಚರಣೆ ವೇಳೆ ಮೈಸೂರು ಅರಸರು ತಮ್ಮ ಅರಮನೆಯಲ್ಲಿ ಆರಂಭಿಸಿದ ಗೊಂಬೆ ಪ್ರತಿಷ್ಠಾಪನೆ ಇಂದು ವಿಜಯದ ಸಂಕೇತವಾಗಿ ನಾಡಿನೆಲ್ಲೆಡೆಹರಡಿದೆ. ಇದಕ್ಕೆ ಪೂರಕವಾಗಿ ಪಟ್ಟಣದಲ್ಲಿನ ಸುಜಾತ ಕಾಫಿ ವರ್ಕ್ಸ್ ಮಾಲೀಕ ಕುಮಾರಸ್ವಾಮಿಯವರ ಕುಟುಂಬ ಎರಡು ದಶಕಗಳಿಂದ ಗೊಂಬೆ ಕೂರಿಸಿ ಪೂಜಿಸುವ ಸಂಪ್ರದಾಯ ಬೆಳೆಸಿಕೊಂಡು ಬಂದಿದೆ.

ತಮ್ಮ ಮನೆಯಲ್ಲಿ ಕೂರಿಸಿರುವ ಗೊಂಬೆಗಳ ಪೈಕಿ ಪಟ್ಟದ ಗೊಂಬೆಯನ್ನು ಪ್ರಧಾನವಾಗಿಸಿ ಮುಂದುವರಿದು ಮನಷ್ಯ ಬೆಳೆದ ಬಂದ ಹಾದಿಯ ಪ್ರತಿರೂಪದ ಗೊಂಬೆಗಳು, ದಶಾವತಾರ, ಕೃಷ್ಣ ಲೀಲೆಗಳು, ಕೃಷ್ಣನ ಹುಟ್ಟಿನ ವೃತ್ತಾಂತ, ಆಸ್ಥಾನ ಮಂಟಪದಲ್ಲಿ ಪಟ್ಟದ ಗೊಂಬೆಗಳು, ಅಕ್ಕಪಕ್ಕ ಮಂತ್ರಿಗಳು, ಸೇವಕರ ಗೊಂಬೆಗಳು, ರಾಜರಾಣಿಯರ ದಿರಿಸು ತೊಟ್ಟ ಗೊಂಬೆಗಳು, ಕ್ರಿಕೆಟ್ ಆಟಗಾರರು, ಸ್ಕೂಲ್, ಕಾಡು, ಉದ್ಯಾನ, ನಾಡಿನ, ದೇಶದ ಸಂಸ್ಕೃತಿಯ ಪ್ರತಿರೂಪಕಗಳು, ಕೈಯಿಂದ ತಯಾರಿಸಿದ ವಿವಿಧ ಮಾದರಿಯ ಗೊಂಬೆಗಳು ಹಾಗೂ ರಾಮಾಯಣ, ಮಹಾಭಾರತ, ಭಾಗವತ ಸೇರಿದಂತೆ ದೇವಾನು ದೇವತೆಗಳು, ಆರಮನೆ, ಕೈಲಾಸ, ವೈಕುಂಠ, ದೇವಲೋಕ ಸೇರಿ ನೂರಾರು ಮಾದರಿಯ ೫೦೦ಕ್ಕೂ ಹೆಚ್ಚು ವಿವಿಧ ಗೊಂಬೆಗಳನ್ನು ಕೂರಿಸುವ ಮೂಲಕ ಹಿರಿಯರಿಂದ ಹಿಡಿದು ಪುಟಾಣಿಗಳವರೆಗಿನ ಎಲ್ಲ ವಯೋಮಾನದ ಜನರನ್ನು ಇವು ಆಕರ್ಷಿಸುತ್ತವೆ.

೯ ದಿನಗಳು ಬೆಳಿಗ್ಗೆ ಮತ್ತು ಸಂಜೆ ಅಕ್ಕಪಕ್ಕದ ಮಕ್ಕಳನ್ನೊಡಗೂಡಿ, ಮುತ್ತೈದೆಯರನ್ನು ಆಹ್ವಾನಿಸಿ ಪೂಜೆ ಸಲ್ಲಿಸಿ ಬಾಗಿಣ ಅರ್ಪಿಸುವುದು ನಡೆದು ಬಂದ ಪದ್ಧತಿ, ೯ ದಿನಗಳ ಪೂಜೆ ತರುವಾಯ ೧೦ನೇ ದಿವಸ ವಿಜಯದಶಮಿ ದಿನ ಹಬ್ಬದ ಸಂಭ್ರಮಚಾರಣೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಗೊಂಬೆ ಉತ್ಸವಕ್ಕೆ ತೆರೆ ಎಳೆಯುತ್ತಾರೆ.

ಗೊಂಬೆಗಳ ಪ್ರತಿಷ್ಠಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಕುಮಾರಸ್ವಾಮಿಯವರ ಸೊಸೆಯಂದಿರಾದ ಕವಿತಾ ಮತ್ತು ಆಶಾ ಮಾತನಾಡಿ ಗೊಂಬೆ ಕೂರಿಸುವ ನಿಟ್ಟಿನಲ್ಲಿ ಕಳೆದೊಂದು ವಾರದಿಂದ ತಯಾರಿ ನಡೆಸಿದ್ದು, ಹ್ಯಾಂಡ್ ಮೇಡ್ ಗೊಂಬೆಗಳೇ ಹೆಚ್ಚಾಗಿದ್ದು, ಚನ್ನಪಟ್ಟಣ, ಬೆಂಗಳೂರು, ಮೈಸೂರು ಸೇರಿ ಹಲವೆಡೆಗಳಿಂದ ಗೊಂಬೆಗಳನ್ನು ತಂದು ಕೂರಿಸಲಾಗಿದೆ. ಇದರೊಂದಿಗೆ ನಮ್ಮ ಪೂರ್ವಜರ ಕಾಲದಿಂದ ಜೋಪಾನವಾಗಿಟ್ಟ ಗೊಂಬೆಗಳಿವೆ. ಈ ಬಾರಿ ಹೊಸದಾಗಿ ಮದುವೆಯ ದಿಬ್ಬಣದ ಗೊಂಬೆಗಳನ್ನು ಕೂರಿಸಲಾಗಿದೆ. ೯ ದಿನಗಳು ಬೆಳಿಗ್ಗೆ, ಸಂಜೆ ಪೂಜೆ ನಡೆಸಿದ್ದೇವೆ. ಸರಸ್ವತಿ ಹಬ್ಬದಂದು ಕಲಿಕಾ ವಸ್ತುಗಳನ್ನಿಟ್ಟು ಪೂಜಿಸಿದೆವು. ದುರ್ಗಾಷ್ಠಮಿಯಂದು ಚಿಕ್ಕ ಹೆಣ್ಮಕ್ಕಳಿಗೆ ಕುಂಕುಮ ಕೊಟ್ಟು ಬಾಗಿಣ ಅರ್ಪಿಸಿದೆವು. ಮೊದಲ ಮೂರು ದಿನ ಲಕ್ಷ್ಮಿಗೆ, ನಂತರದ ಮೂರು ದಿನ ಸರಸ್ವತಿ, ಕಡೇ ಮೂರು ದಿನ ದುರ್ಗೆಗೆ ಮೀಸಲಿರಿಸಿ ಪೂಜೆ ಸಲ್ಲಿಸಲಾಗುತ್ತದೆ. ವಿಜಯದಶಮಿಯಂದು ಆಯುಧ, ಅಂಗಡಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಿಸುತ್ತೇವೆ ಎಂದು ತಿಳಿಸಿದರು.