ಶರಣಬಸವ ವಿವಿಯಲ್ಲಿ ವಿದ್ಯಾರ್ಥಿ ಯೋಜನೆಗಳ ಪದರ್ಶನ

| Published : Aug 09 2024, 12:36 AM IST / Updated: Aug 09 2024, 12:37 AM IST

ಸಾರಾಂಶ

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು (ಕೆಎಸ್‍ಸಿಎಸ್‍ಟಿ) ಇಲ್ಲಿನ ಶರಣಬಸವ ವಿವಿ ಸಹಯೋಗದಲ್ಲಿ ಇದೇ ಆ.9ರಿಂದ 2 ದಿನಗಳ ಕಾಲ ರಾಜ್ಯ ಮಟ್ಟದ 47ನೇ ಸರಣಿಯ ಪೋಸ್ಟರ್ ಪ್ರಸ್ತುತಿ ಮತ್ತು ವಿದ್ಯಾರ್ಥಿ ಯೋಜನೆಗಳ ಪ್ರದರ್ಶನ ಆಯೋಜಿಸುತ್ತಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು (ಕೆಎಸ್‍ಸಿಎಸ್‍ಟಿ) ಇಲ್ಲಿನ ಶರಣಬಸವ ವಿವಿ ಸಹಯೋಗದಲ್ಲಿ ಇದೇ ಆ.9ರಿಂದ 2 ದಿನಗಳ ಕಾಲ ರಾಜ್ಯ ಮಟ್ಟದ 47ನೇ ಸರಣಿಯ ಪೋಸ್ಟರ್ ಪ್ರಸ್ತುತಿ ಮತ್ತು ವಿದ್ಯಾರ್ಥಿ ಯೋಜನೆಗಳ ಪ್ರದರ್ಶನ ಆಯೋಜಿಸುತ್ತಿದೆ.

ಈ ಕುರಿತಂತೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಜೊತೆಗೂಡಿಕೊಂಡು ಕೆಎಸ್‍ಸಿಎಸ್‍ಟಿ ಕಾರ್ಯದರ್ಶಿ ಡಾ ಯುಟಿ ವಿಜಯ್ ಸುದ್ದಿಗೋಷ್ಠಿ ನಡೆಸಿದರು.

ಎರಡು ದಿನಗಳ 47ನೇ ಸರಣಿಯ ಪ್ರತಿಷ್ಠಿತ ಪೋಸ್ಟರ್ ಪ್ರಸ್ತುತಿ ಮತ್ತು ವಿದ್ಯಾರ್ಥಿ ಯೋಜನೆ (ಎಸ್‍ಪಿಪಿ) ಪ್ರದರ್ಶನವನ್ನು ಆ.9ರಂದು ವಿಜ್ಞಾನ ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಉದ್ಘಾಟಿಸಲಿದ್ದಾರೆ. ಗುವಿವಿ ಕುಲಪತಿ ದಯಾನಂದ ಅಗಸರ, ಕೆಎಸ್‍ಸಿಎಸ್‍ಟಿ ಕಾರ್ಯದರ್ಶಿ ಅಶೋಕ್ ಎಂ. ರಾಯಚೂರು, ಶರಣಬಸವ ವಿವಿ ಉಪಕುಲಪತಿ ಅನಿಲಕುಮಾರ ಬಿಡವೆ ಪಾಲ್ಗೊಳ್ಳುತ್ತಿದ್ದಾರೆ.

ಇಂಜಿನಿಯರಿಂಗ್‍ನ ಯುವ ಮನಸ್ಸುಗಳನ್ನು ಆವಿಷ್ಕಾರಗಳಿಂದ, ಆವಿಷ್ಕಾರಗಳತ್ತ ಸಾಗುವಂತೆ ಉತ್ತೇಜಿಸುವುದು ರಾಜ್ಯ ಮಟ್ಟದ ಎಸ್‍ಪಿಪಿಯ ಮುಖ್ಯ ಗುರಿಯಾಗಿದೆ, ರಾಜ್ಯದ 80 ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳ ಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಈ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆಂದು ವಿಜಯ್‌ ಹೇಳಿದ್ದರೆ.

ಈ ಸಮ್ಮೇಳನದಲ್ಲಿ ಆಯ್ದ 354 ಯೋಜನೆಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಈ ಯೋಜನೆಗಳನ್ನು ಐಐಎಸ್‌ಸಿ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್, ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್‍ಸ್ಟಿಟ್ಯೂಟ್, ಇತರೆ ಸಂಸ್ಥೆಗಳಿಂದ 22 ಪರಿಣಿತ ವಿಜ್ಞಾನಿಗಳು ಮತ್ತು ತಂತ್ರಜ್ಞರು ಮೌಲ್ಯಮಾಪನ ಮಾಡಲಿದ್ದಾರೆ.

ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿರುವ 354 ಪ್ರಾಜೆಕ್ಟ್‍ಗಳಲ್ಲಿ ಪರಿಣಿತ ತೀರ್ಪುಗಾರರು ಒಟ್ಟು 60 ಪ್ರಾಜೆಕ್ಟ್‍ಗಳನ್ನು ಆಯ್ಕೆ ಮಾಡುತ್ತಾರೆ, ಇವುಗಳನ್ನು ವರ್ಷದ ಅತ್ಯುತ್ತಮ ಪ್ರಾಜೆಕ್ಟಗಳು ಎಂದು ಗುರುತಿಸಲಾಗುತ್ತದೆ ಮತ್ತು ಉತ್ತಮ ಪ್ರದರ್ಶನ ನೀಡಿದ ಕಾಲೇಜುಗಳನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ವಿಜಯ್ ಹೇಳಿದರು.

ಎರಡು ದಿನಗಳ ಕಾರ್ಯಕ್ರಮದಲ್ಲಿ ಉದಯೋನ್ಮುಖ ಇಂಜಿನಿಯರ್‍ಗಳಿಗೆ ಹೆಚ್ಚು ಸಹಾಯಕವಾಗುವ ಎರಡು ತಾಂತ್ರಿಕ ಉಪನ್ಯಾಸಗಳು ನಡೆಯಲಿದ್ದು, ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ ಮುಖ್ಯ ವಿಜ್ಞಾನಿ ಡಾ. ಕೆ.ವೆಂಕಟೇಶ್ವರಲು ಅವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತಮ್ಮ ವೃತ್ತಿಜೀವನಕ್ಕಾಗಿ ಗ್ರಹಿಕೆ ಕುರಿತು ತಾಂತ್ರಿಕ ಉಪನ್ಯಾಸ ನೀಡಲಿದ್ದಾರೆ. ಮತ್ತು ಡಾ. ಹರಿಲಾಲ್ ಭಾಸ್ಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ರಾಷ್ಟ್ರೀಯ ಸಂಯೋಜಕರು, ಭಾರತೀಯ ವಿಜ್ಞಾನ, ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಸೌಲಭ್ಯಗಳ ನಕ್ಷೆ ಅವರು ಐಸ್ಟೆಮ್ ಪೋರ್ಟಲ್: ಪಾಲುದಾರ ಸಂಸ್ಥೆಗಳು ಮತ್ತು ಆರ್ & ಡಿ ಲ್ಯಾಬ್‍ಗಳು ಗ್ಲೋಬಲ್ ಪೋರ್ಟಲ್ ಆಫ್ ಪ್ರೈಡ್ ಫಾರ್ ಇಂಡಿಯಾ” ಕುರಿತು ಹಾಗೂ ಅದರ ವಿಕಾಸವನ್ನು ಹೇಗೆ ನಡೆಸುತ್ತವೆ ಎಂಬುದರ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ.

ಆ.10ರಂದು ಎಸ್‌ಪಿಪಿ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಈ. ಸುಧೀಂದ್ರ, ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಎಂ. ಅಶೋಕ್, ಕಲಬುರಗಿ ವಿಟಿಯು ಪ್ರಾದೇಶಿಕ ನಿರ್ದೇಶಕ ಡಾ. ಬಸವರಾಜ ಗದಗೆ, ಶರಣಬಸವ ವಿವಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಪಾಲ್ಗೊಳ್ಳುತ್ತಿದ್ದಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಶರಣಬಸವೇಶ್ವರ ವವಿ ಕುಲಸಚಿವ ಡಾ. ಎಸ್. ಜಿ. ಡೊಳ್ಳೆಗೌಡರ್ ಹಾಗೂ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಉಪಸ್ಥಿತರಿದ್ದರು.