ಅಧ್ಯಯನಶೀಲತೆ ಅಳವಡಿಸಿಕೊಂಡರೆ ನಿರೀಕ್ಷಿತ ಸಾಧನೆ ಸಾಧ್ಯ

| Published : Sep 01 2025, 01:03 AM IST

ಸಾರಾಂಶ

ರಾಮನಗರ: ಆಧುನಿಕ ಜಗತ್ತಿನ ವೈವಿಧ್ಯ ಆಕರ್ಷಣೆಗಳ ಸೆಳೆತದ ಸುಳಿಗೆ ಸಿಲುಕದೆ, ಅಧ್ಯಯನಶೀಲತೆಯನ್ನೇ ಉಸಿರಂತೆ ಅಳವಡಿಸಿಕೊಂಡರೆ ನಿಮ್ಮ ನಿರೀಕ್ಷಿತ ಸಾಧನೆಗಳನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ಕನಕಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದೊಡ್ಡಬೋರಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ರಾಮನಗರ: ಆಧುನಿಕ ಜಗತ್ತಿನ ವೈವಿಧ್ಯ ಆಕರ್ಷಣೆಗಳ ಸೆಳೆತದ ಸುಳಿಗೆ ಸಿಲುಕದೆ, ಅಧ್ಯಯನಶೀಲತೆಯನ್ನೇ ಉಸಿರಂತೆ ಅಳವಡಿಸಿಕೊಂಡರೆ ನಿಮ್ಮ ನಿರೀಕ್ಷಿತ ಸಾಧನೆಗಳನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ಕನಕಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದೊಡ್ಡಬೋರಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿದ ಅವರು, ಇಂದು ಯಾಂತ್ರಿಕತೆ ಮತ್ತು ತಾಂತ್ರಿಕತೆ ಅಗಾಧ ಪ್ರಮಾಣದಲ್ಲಿ ಬೆಳೆದು ನಿಂತಿದ್ದು, ಅವುಗಳ ವ್ಯಸನಕ್ಕೆ ಸಿಲುಕಿ ಅವಲಂಬನೆಗೆ ಒಳಗಾದರೆ ಬದುಕು ದುರಂತದತ್ತ ಸಾಗುತ್ತದೆ ಎಂದು ಎಚ್ಚರಿಸಿದರು.

ಪಠ್ಯಪುಸ್ತಕದ ಅಧ್ಯಯನ, ತರಗತಿಯಲ್ಲಿ ಏಕಾಗ್ರತೆಯಿಂದ ಪಾಠ ಕೇಳುವುದು, ಟಿಪ್ಪಣಿ ಬರೆಯುವುದು, ಸ್ವ-ಚಿಂತನೆಯನ್ನು ರೂಢಿಸಿಕೊಳ್ಳುವುದು, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ ಮತ್ತು ಸಮಯದ ಸದುಪಯೋಗ ಪಡಿಸಿಕೊಳ್ಳುವುದರಿಂದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಲು ಸಹಕಾರಿ ಆಗಲಿದೆ ಎಂದು ಹೇಳಿದರು.

ಪ್ರಾಂಶುಪಾಲ ಜಿ.ಶಿವಣ್ಣ ಮಾತನಾಡಿ, ಅಧ್ಯಾಪಕರ ಒಂದು ತರಗತಿಯಲ್ಲಿ ಹತ್ತಾರು ಹೊಸ ಪದಗಳು, ಮಾಹಿತಿಗಳು, ಕೌಶಲ್ಯಗಳು ಮತ್ತು ಬರವಣಿಗೆಯ ಶೈಲಿಯನ್ನು ಕಲಿಸಿಕೊಡುತ್ತಾರೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಅವುಗಳನ್ನು ಕಲಿತುಕೊಂಡರೆ ಗುರುವನ್ನು ಮೀರಿದ ಯಶಸ್ಸನ್ನು ಸಾಧಿಸಬಹುದು. ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಬೋಧಿಸುವ ಉಪನ್ಯಾಸಕರು ಒಬ್ಬರೇ ಆದರೂ ವಿದ್ಯಾರ್ಥಿಗಳು ಗಳಿಸುವ ಅಂಕಗಳು ಏರಿಳಿತವಾಗಿರುತ್ತವೆ. ಇದಕ್ಕೆ ವಿದ್ಯಾರ್ಥಿಗಳ ಗ್ರಹಣಾಶಕ್ತಿ ಮತ್ತು ಆಸಕ್ತಿ ಮುಖ್ಯವಾಗಿರುತ್ತದೆ. ತಪ್ಪಿದಲ್ಲಿ ಶ್ರೇಷ್ಠ ಉಪನ್ಯಾಸಕರು ಬೋಧಿಸಿದರೂ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಸಾಧ್ಯವಾಗದು ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ, ಪ್ರಥಮ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಆರು ಮಂದಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕನ್ನಡ ಮತ್ತು ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ನಾಯಕ್, ಪದವಿ ಕಾಲೇಜು ಪ್ರಾಂಶುಪಾಲೆ ವಿ.ಎಸ್.ಸರಸ್ವತಿ, ಉಪನ್ಯಾಸಕರಾದ ಪಿ.ಮಂಜುಳಾ, ಡಾ.ವೆಂಕಟಾಚಲಯ್ಯ, ಜಿ.ಎಂ.ವೀಣಾ, ಡಾ.ಶಾರದಾ ಬಡಿಗೇರ, ಎಚ್.ಎಂ.ಶಶಿಕಲಾ ಮತ್ತಿತರರು ಇದ್ದರು. ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಬಾಕ್ಸ್‌.............

ದಿನಪತ್ರಿಕೆ ಓದುವ ಹವ್ಯಾಸಿ ರೂಢಿಸಿಕೊಳ್ಳಿ:

ಪಠ್ಯಪುಸ್ತಕಗಳನ್ನು ಖರೀದಿಸಿ ಅಧ್ಯಯನ ಮಾಡದೆ ಅಪಚಾರ ಮಾಡಬೇಡಿ. ಪುಸ್ತಕಗಳನ್ನು ತೆರೆದು, ಅವುಗಳೊಂದಿಗೆ ಮಾತನಾಡಿ, ಪುಸ್ತಕ ಸ್ನೇಹಿತ್ವ ಬೆಳೆಸಿಕೊಳ್ಳಿ. ಮನೆಯಲ್ಲಿ ಕನಿಷ್ಠ 100 ಪುಸ್ತಕಗಳ ಗ್ರಂಥಾಲಯವನ್ನು ಸ್ಥಾಪಿಸಿಕೊಳ್ಳಿ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ವೃತ್ತ ಪತ್ರಿಕೆಗಳನ್ನು ತಪ್ಪದೇ ಒದಿ. ಒಂದು ಪತ್ರಿಕೆಯಲ್ಲಿ ಇಲ್ಲದ ವಿಶೇಷ ಮತ್ತೊಂದರಲ್ಲಿ ಇರುತ್ತದೆ. ಸ್ಥಳೀಯ ಪತ್ರಿಕೆಗಳನ್ನು ಕಡೆಗಣಿಸಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಶನಗಳಲ್ಲಿ ಸ್ಥಳೀಯ ವೈಶಿಷ್ಟತೆಗಳ ಬಗ್ಗೆ ಪ್ರಶ್ನೆಗಳಿರುತ್ತವೆ. ಅಗಾಧವಾದ ಕುತೂಹಲದಿಂದ ಸ್ಥಳೀಯ ವಿವರಗಳನ್ನು ತಿಳಿದುಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಉನ್ನತ ಉದ್ಯೋಗಾವಕಾಶ ಪಡೆಯಲು ಸಾಧ್ಯವಾಗುತ್ತದೆ ಎಂದು ಪ್ರಾಂಶುಪಾಲ ದೊಡ್ಡಬೋರಯ್ಯ ಹೇಳಿದರು.

ಸಾಧನೆಗೆ ಸಮಯಪಾಲನೆ ಬಹುಮುಖ್ಯ. ದಿನದ 24 ಗಂಟೆಯಲ್ಲಿ ಏನೇನು ಕೆಲಸ ಮಾಡಬೇಕೆಂಬುದರ ಬಗ್ಗೆ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಕನಿಷ್ಠ 10 ಗಂಟೆಯನ್ನು ಓದಲು ಮೀಸಲಿಡಬೇಕು. ಮದುವೆ, ನಿಶ್ಚಿತಾರ್ಥ, ತಿಥಿ, ಹಬ್ಬ ಇನ್ನಿತರೆ ಸಮಾರಂಭಗಳಲ್ಲಿ ಭಾಗವಹಿಸಿ ಸಮಯ ವ್ಯರ್ಥ ಮಾಡಬೇಡಿ. ಆಮಿಷಗಳಿಗೆ ಬಲಿಯಾಗಬೇಡಿ. ಬೇಜವಾಬ್ದಾರಿತನ ಬಿಟ್ಟು, ಗುರಿಯತ್ತ ಮುನ್ನಡೆದು ದೇಶದ ಋಣ ತೀರಿಸಲು ಶ್ರಮವಹಿಸಬೇಕು. ನಿಮ್ಮ ಗುರಿ ದೊಡ್ಡದಾಗಿರಲಿ, ಅಲ್ಪತೃಪ್ತರಾಗದೆ ಮಹತ್ತರವಾದುದನ್ನು ಸಾಧಿಸಿ ಎಂದು ಸಲಹೆ ನೀಡಿದರು.

31ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ವಾಗತ ಸಮಾರಂಭವನ್ನು ಕನಕಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದೊಡ್ಡಬೋರಯ್ಯ ಉದ್ಘಾಟಿಸಿದರು.