ಶಿಕ್ಷಣ ಸಚಿವರನ್ನು ಸಂಪುಟದಿಂದ ಉಚ್ಛಾಟಿಸಿ: ಸಿಎಂಗೆ ಕಾಗೇರಿ ಆಗ್ರಹ

| Published : May 24 2024, 12:51 AM IST

ಶಿಕ್ಷಣ ಸಚಿವರನ್ನು ಸಂಪುಟದಿಂದ ಉಚ್ಛಾಟಿಸಿ: ಸಿಎಂಗೆ ಕಾಗೇರಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಈ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯನ್ನು ಹದಗೆಡಿಸಲಾಗಿದೆ. ಮಧು ಬಂಗಾರಪ್ಪ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದ್ದೇ ತಪ್ಪು. ಖಾತೆಯ ಅಸಮರ್ಪಕ ನಿರ್ವಹಣೆಯ ಹಿನ್ನೆಲೆಯಲ್ಲಿ ಅವರನ್ನು ಮುಖ್ಯಮಂತ್ರಿಯವರು ಉಚ್ಚಾಟಿಸಬೇಕು ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಸಿ

ಈ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯನ್ನು ಹದಗೆಡಿಸಲಾಗಿದೆ. ಮಧು ಬಂಗಾರಪ್ಪ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದ್ದೇ ತಪ್ಪು. ಖಾತೆಯ ಅಸಮರ್ಪಕ ನಿರ್ವಹಣೆಯ ಹಿನ್ನೆಲೆಯಲ್ಲಿ ಅವರನ್ನು ಮುಖ್ಯಮಂತ್ರಿಯವರು ಉಚ್ಚಾಟಿಸಬೇಕು ಎಂದು ಮಾಜಿ ಸ್ಪೀಕರ್ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗ ನೀಡುತ್ತಿರುವ ಶಿಕ್ಷಣ ನೋಡಿದರೆ, ಮುಂದಿನ ಯುವ ಪೀಳಿಗೆಯ ಭವಿಷ್ಯ ಎಷ್ಟು ನಿರಾಶಾದಾಯಕವಾಗಿರುತ್ತದೆ ಎಂದು ಬೇಸರವಾಗುತ್ತದೆ ಎಂದರು. ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಶೂನ್ಯ. ಗ್ರೇಸ್ ಮಾರ್ಕ್ಸ್ ಕೊಟ್ಟರೂ ಉತ್ತೀರ್ಣವಾಗದ ಸರ್ಕಾರವಿದು ಎಂದು ವಾಗ್ದಾಳಿ ನಡೆಸಿದರು.

ಒಂದೇ ವರ್ಷದಲ್ಲಿ 20 ಗ್ರೇಸ್ ಮಾರ್ಕ್ಸ್ ಕೊಡುವ ಪರಿಸ್ಥಿತಿ ಬಂದಿದೆಯೆಂದರೆ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಏನು ಮಾಡುತ್ತಿದ್ದಾರೆ? ಮಧು ಬಂಗಾರಪ್ಪ ಬಗ್ಗೆ ಹೇಳುವುದೇ ತಪ್ಪು. ಅವರನ್ನು ಶಿಕ್ಷಣ ಮಂತ್ರಿ ಮಾಡಿದ್ದೇ ತಪ್ಪು. ಅಸಮರ್ಪಕ ನಿರ್ವಹಣೆಯ ಕಾರಣದಿಂದ ಮುಖ್ಯಮಂತ್ರಿಯವರು ಅವರನ್ನು ಸಂಪುಟದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು. ಸಂವಿಧಾನಬದ್ಧವಾಗಿ ಆಯ್ಕೆಯಾದ ಸರ್ಕಾರವೊಂದರ ಮೊದಲ ಜವಾಬ್ದಾರಿ ಜನರ ಜೀವ ರಕ್ಷಣೆ ಮತ್ತು ಆಸ್ತಿ ರಕ್ಷಣೆಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಇದರಲ್ಲೇ ವಿಫಲವಾಗಿದೆ. ಕಾನೂನು, ಶಾಂತಿ, ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಗೃಹಮಂತ್ರಿ, ಮುಖ್ಯಮಂತ್ರಿಗಳಿದ್ದಾರಾ ಎಂದು ಕೇಳುವ ಪರಿಸ್ಥಿತಿ ಬಂದಿದೆ. ಅಪರಾಧಿಗಳಿಗೆ ಕಾಂಗ್ರೆಸ್ ರಕ್ಷಣೆ ಕೊಡುವ ಕಾರಣಕ್ಕೆ ಈ ಪರಿಸ್ಥಿತಿ ಬಂದಿದೆ. ರಾಷ್ಟ್ರದ್ರೋಹಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಜೀವಕ್ಕೇ ಗ್ಯಾರಂಟಿ ಇಲ್ಲದ ಮೇಲೆ ಇನ್ಯಾವ ಗ್ಯಾರಂಟಿ ಕೊಟ್ಟೂ ಪ್ರಯೋಜನವಿಲ್ಲ. ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

ಹೆಬ್ಬಾರ ರಾಜೀನಾಮೆ ಕೊಡಲಿ:

ಅನಂತಕುಮಾರ ಹೆಗಡೆ ಆರು ಬಾರಿ ಸಂಸದರಾದವರು, ಮಂತ್ರಿಯಾದವರು. ಮೋದಿಯವರು ಬಂದಾಗ ಕಾರ್ಯಕ್ರಮಕ್ಕೆ ಅವರು ಬರಬೇಕಿತ್ತು ಎಂಬ ಅಭಿಪ್ರಾಯ ನಮ್ಮದು. ಇನ್ನು, ಶಿವರಾಮ ಹೆಬ್ಬಾರರಿಗೆ ಬಿಜೆಪಿ ಸರಿಹೊಂದುತ್ತಿಲ್ಲ ಎಂಬುದು ಗೊತ್ತಾಗಿದೆ. ಇಂಥ ಸಂದರ್ಭದಲ್ಲಿ ಅವರು ರಾಜೀನಾಮೆ ಕೊಡಬೇಕು. ಮುಂದೆ ಚುನಾವಣೆ ಎದುರಿಸಬೇಕು ಎಂದು ಕಾಗೇರಿ ಒತ್ತಾಯಿಸಿದರು.

ತಾಂತ್ರಿಕವಾಗಿ ಒಂದು ಪಕ್ಷದಲ್ಲಿದ್ದು ಆ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳದಿರುವುದು ಪ್ರಜಾಪ್ರಭುತ್ವದಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಶೋಭೆ ತರುವ ಸಂಗತಿ ಅಲ್ಲ. ಹೆಬ್ಬಾರರು ಗೊಂದಲದಲ್ಲಿದ್ದು, ಕ್ಷೇತ್ರದ ಜನರನ್ನೂ ಗೊಂದಲದಲ್ಲಿ ಇಡುವುದು ವ್ಯವಸ್ಥೆಯನ್ನು ಅಪಹಾಸ್ಯ ಮಾಡುವ ನಿಲುವಾಗಿದೆ ಎಂದು ಆರೋಪಿಸಿದರು.