ಸಾರಾಂಶ
ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಹಬ್ಬ2024-25 ಉಧ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಆರೋಗ್ಯಯುತ ಸಿರಿ ಧಾನ್ಯಗಳ ಮಹತ್ವ ತಿಳಿಸುವ ಮೂಲಕ ಯುವ ಪೀಳಿಗೆಗೆ ಇವುಗಳನ್ನು ಪ್ರಧಾನ ಬೆಳೆಯಾಗಿ ಬೆಳೆಯಲು ಪ್ರೋತ್ಸಾಹ ನೀಡಬೇಕಿದೆ ಎಂದು ಶಾಸಕ ಕೆ.ಎಸ್. ಆನಂದ್ ಅಭಿಪ್ರಾಯಪಟ್ಟರು.
ಮಂಗಳವಾರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಕೃಷಿ ಮತ್ತಿತರ ಇಲಾಖೆಗಳಿಂದ ನಡೆದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಹಬ್ಬ 2024-25 ಉಧ್ಘಾಟಿಸಿ ಮಾತನಾಡಿ, ಹಬ್ಬದಂತೆ ಇಂತಹ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಿರುವ ಕೃಷಿ ಅಧಿಕಾರಿಗಳಿಗೆ ಅಭಿನಂದಿಸುತ್ತೇನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಕೃಷಿ ಅವಲಂಬಿಸಿರುವುದು ಕಡೂರು ತಾಲೂಕು. ನಾನೂ ಕೂಡ ರೈತನ ಮಗನಾಗಿದ್ದು ಇಂತಹ ಕಾರ್ಯಕ್ರಮ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದರು.ಸ್ಟಾಲ್‌ಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ತಿನಿಸುಗಳು ಉತ್ತಮವಾಗಿವೆ. ಕೃಷಿ ಉಪಕರಣಗಳಾದ ಕುಂಟೆ, ಕೂರಿಗೆ, ನೆರೆಕೋಲು ಸೇರಿ ಎಲ್ಲವೂ ಪ್ರದರ್ಶನಕ್ಕೆ ಇಡಲಾಗಿದ್ದು, ಇದು ನಾವು 20 ವರ್ಷ ಹಿಂದಿನ ದಿನಗಳನ್ನು ನೆನಪಿಸುತ್ತಿವೆ. . ರೈತನ ಮಿತ್ರ ಎರೆಹುಳುಗಳು ಇಂದು ಜಮೀನುಗಳಲ್ಲಿ ಕಾಣುವುದಿಲ್ಲ. ರಾಸಾಯನಿಕಗಳ ಉಪಯೋಗದಿಂದ ಸತ್ವ ಇಲ್ಲದ ಬೆಳೆ ಬೆಳೆಯುತ್ತಿದ್ದು, ಸಾವಯವ ಕೃಷಿಗೆ ಮರಳಬೇಕು. ಆದರೆ ಯುವಕರು ಲಾಭದಾಯಕ ಬೆಳೆಗಳನ್ನು ನೋಡುತ್ತಿದ್ದು, ಇಂದಿನ ಯುವಕರಿಗೆ ಹಿಂದಿನ ಪೋಷಕಾಂಶದ ಕೃಷಿ ಪದ್ಧತಿ ಜಾಗೃತಿ ಮೂಡಿಸಬೇಕು ಎಂದರು.
ನಮ್ಮ ಬಯಲು ಪ್ರದೇಶದ ಶೇ.90ರಷ್ಟು ಜನ ಕೃಷಿ ಅವಲಂಬಿತರಾಗಿದ್ದಾರೆ. ಮಲೆನಾಡಿನಲ್ಲಿ ರೈತರು ಇಲ್ಲ ಕಾಫಿ ಪ್ಲಾಂಟರ್ಸ್ ಎಂದು ಕರೆಯುತ್ತೇವೆ. ಬಯಲು ಸೀಮೆ ರೈತ ಕಾರ್ಮಿಕರು ಅಲ್ಲಿಗೆ ಹೋಗಿ ಕೃಷಿ ಮಾಡಿ ಕೊಡುತ್ತಾರೆ.ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡರು ಸಿರಿಧಾನ್ಯ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರಗತಿ ಪರ ರೈತ ಮಂಜುನಾಥ್ ಸಿರಿಧಾನ್ಯ ಮಾರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.
ಸ್ವಾತಂತ್ರ್ಯಬಂದಾಗಿನಿಂದ ಇಲ್ಲಿವರೆಗೂ ಎಲ್ಲರಿಗೂ ಆಹಾರ ಸಿಗುವಂತೆ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದು ಅದರಂತೆ ಬದಲಾದ ಕಾಲಘಟ್ಟದಲ್ಲಿ ಪೌಷ್ಟಿಕ ಆಹಾರ ಭದ್ರತೆ ನೀಡಬೇಕಿದೆ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನ ಮಾತನಾಡಿ ನಾವು ಕೂಡ ರೈತರ ಮಕ್ಕಳು. ರಾಗಿ, ಸಿರಿ ಧಾನ್ಯಗಳನ್ನು ಬಿಟ್ಟರೆ ಅಕ್ಕಿ ಬಳಸುತ್ತಿರಲಿಲ್ಲ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಇಂದಿನ ಆಹಾರ ಪದ್ಧತಿಯಿಂದ ಚಿಕ್ಕ ವಯಸ್ಸಿಗೆ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಸಿರಿ ಧಾನ್ಯದಲ್ಲಿ ಎಲ್ಲ ರೀತಿ ಪೋಷಕಾಂಶಗಳು ಇವೆ. ಸ್ಟಾಲ್ ಗಳಲ್ಲಿರುವ ಸಿರಿಧಾನ್ಯದ ಉತ್ಪನ್ನಗಳನ್ನು ನೀವು ತಿಂದು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕೃಷಿಯನ್ನೆ ಮರೆಯುತ್ತಿರುವ ಇಂದಿನ ದಿನಗಳಲ್ಲಿ ರಸಗೊಬ್ಬರಗಳನ್ನು ಬಳಸಿಯೇ ಬೆಳೆ ಬೆಳೆಯುತ್ತಿರುವುದರಿಂದ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಹಾಗಾಗಿ ಶಾಲಾ ಹಂತದಲ್ಲಿ ಸಿರಿಧಾನ್ಯಗಳ ಮತ್ತು ಸಾವಯವ ಕೃಷಿ ರೀತಿ ಮಕ್ಕಳಿಗೆ ತೋರಿಸಿ ಪಠ್ಯ ಕ್ರಮದಲ್ಲೂ ಅಳವಡಿಸಿ ಎಂದು ಸಲಹೆ ನೀಡಿದರು.ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಸುಜಾತಾ ಮಾತನಾಡಿ ನ. 16ರಿಂದ ಸಿರಿಧಾನ್ಯದ ಕಡೆ ನಮ್ಮ ನಡೆ ಕಾರ್ಯಕ್ರಮ ಜಿಲ್ಲೆಯಲ್ಲಿ ಮಾಡಲಾಯಿತು. 60 ತರಹದ ಸಿರಿಧಾನ್ಯ ಖಾದ್ಯಗಳನ್ನು ಮಾಡಲಾಗಿದೆ. ಅಂತಿಮವಾಗಿ ಶಾಸಕರ ಆಸಕ್ತಿಯಂತೆ ಕಡೂರು ಪಟ್ಟಣದಲ್ಲಿ ಜಿಲ್ಲಾ ಮಟ್ಟದ ವೇದಿಕೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಧಾರವಾಡದ ಚನ್ನಯ್ಯನಗಿರಿ ಮಠದ ಶ್ರೀಗುರುಬಸವ ಮಹಾಮನೆಯ ಶ್ರೀಬಸವಾನಂದ ಸ್ವಾಮೀಜಿ ಮಾತನಾಡಿ, ಸಾವಯವ ಕೃಷಿ ಜೊತೆ ರಾಗಿ, ಅಕ್ಕಿ ಬಳಕೆ ಪರಿಣಾಮ, ಸಿರಿಧಾನ್ಯದ ಪ್ರಯೋಜನ ತಿಳಿಸಿದರು.ಸಾಗರ ತಾಲೂಕಿನ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿವಿ ಉಪಕುಲಪತಿ ಡಾ.ಆರ್.ಸಿ. ಜಗದೀಶ್, ಕಡೂರು ಕೃಷಿ ಸಹಾಯಕ ನಿರ್ದೇಶಕ ಅಶೋಕ್, ಕೃಷಿಕ ಸಮಾಜದ ನಿರ್ದೇಶಕ ರುದ್ರೇಗೌಡ, ವಿ.ಜಿ.ಅಶೋಕ್, ಈಶ್ವರಪ್ಪ, ರೇಣುಕಾರಾದ್ಯ, ಹೇಮಾವತಿ, ಹರೀಶ್, ಬಾಸೂರು ರವಿ, ಚಿದಾನಂದ ಹಾಜರಿದ್ದರು.
-- ಬಾಕ್ಸ್ -ಸಿರಿಧಾನ್ಯ ಎಂಬುದು ಈಗಿನ ಟ್ರೆಂಡ್. ಬಡವರ ಆಹಾರವಾಗಿದ್ದ ರಾಗಿ, ಜೋಳ, ಸಿರಿಧಾನ್ಯ ಇಂದು ಶ್ರೀಮಂತರ ಆಹಾರವಾಗಿದೆ. ಸಾವಕ್ಕಿ ಮತ್ತು ಸೊಸೈಟಿ ಅಕ್ಕಿ ತಂದು ಅಡುಗೆ ಮಾಡಲಾಗುತ್ತಿತ್ತು. ಆರೋಗ್ಯದ ದೃಷ್ಟಿಯಿಂದ ರೈತರು ನಮ್ಮ ಹಳೆಯ ಆಹಾರ ಪದ್ಧತಿಗೆ ವಾಲುತ್ತಿದ್ದು, ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಎರಡು ಸಿಗಬೇಕಿದೆ
- ಕೆ.ಎಸ್.ಆನಂದ್ ಶಾಸಕ 7ಕೆಕೆಡಿಯು1.ಕಡೂರು ಎಪಿಎಂಸಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಹಬ್ಬವನ್ನುಶಾಸಕ ಕೆ.ಎಸ್. ಆನಂದ್ ಉಧ್ಘಾಟಿಸಿದರು.
7ಕೆಕೆಡಿಯು1ಎ.ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಹಬ್ಬದ ವೇದಿಕೆ ಮುಂಭಾಗದಲ್ಲಿ ಸಾವಯವ ಧಾನ್ಯದಿಂದ ಬಿಡಿಸಿದ ಚಿತ್ರ ಗಮನ ಸೆಳೆಯಿತು.
7ಕೆಕೆಡಿಯು1ಬಿ.ಕಡೂರಿನಲ್ಲಿ ಕೃಷಿ ಮತ್ತಿತರ ಇಲಾಖೆಗಳಿಂದ ನಡೆದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಹಬ್ಬದ ವಸ್ತು ಪ್ರದರ್ಶನವನ್ನು ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೀರ್ತನಾ ವೀಕ್ಷಿಸಿದರು.