ಬೆಂಗಳೂರಿನಲ್ಲಿ ಸ್ಪೋಟ: ಎನ್‌ಐಎ ತನಿಖೆಗೆ ರವಿ ಆಗ್ರಹ

| Published : Mar 03 2024, 01:31 AM IST

ಸಾರಾಂಶ

ಬೆಂಗಳೂರಿನಲ್ಲಿ ನಡೆದಿರುವ ಸ್ಪೋಟದ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕೆಂದು ಮಾಜಿ ಸಚಿವ ಸಿ.ಟಿ. ರವಿ ಆಗ್ರಹಿಸಿದ್ದಾರೆ.

- ಭಯೋತ್ಪಾದಕರು ಕರ್ನಾಟಕವನ್ನ ಸ್ಲೀಪರ್ ಸೆಲ್ ಹಾಗೂ ಟ್ರೈನಿಂಗ್ ಸೆಂಟರ್ ಆಗಿ ಬಳಸಿಕೊಂಡಿರೋ ಮಾಹಿತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬೆಂಗಳೂರಿನಲ್ಲಿ ನಡೆದಿರುವ ಸ್ಪೋಟದ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕೆಂದು ಮಾಜಿ ಸಚಿವ ಸಿ.ಟಿ. ರವಿ ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರು ಕರ್ನಾಟಕವನ್ನ ಸ್ಲೀಪರ್ ಸೆಲ್ ಹಾಗೂ ಟ್ರೈನಿಂಗ್ ಸೆಂಟರ್ ಆಗಿ ಬಳಸಿಕೊಂಡಿರೋ ಮಾಹಿತಿ ಇದೆ ಎಂದರು.

ಈಗ ಉತ್ತರದಲ್ಲಿ ಬಾಂಬ್ ಸದ್ದು ಕ್ಷೀಣವಾಗಿದೆ. ದಕ್ಷಿಣದ ಕೇರಳ, ಕರ್ನಾಟಕದಲ್ಲಿ ಬಾಂಬ್ ಸದ್ದು ಕೇಳಿಸುತ್ತಿದೆ. ಬ್ರಾಂಡ್ ಬೆಂಗಳೂರಿಗೆ ಬಾಂಬ್ ಬೆದರಿಕೆ ಎದುರಾಗಿದೆ. ನಿನ್ನೆ ನಡೆದ ಘಟನೆ ಪರೀಕ್ಷಾರ್ಥ ಸ್ಫೋಟ ಮಾಡಿರುವ ಸಂಶಯ ಕಾಡುತ್ತಿದೆ. ಇದು ಸರಣಿ ಸ್ಫೋಟದ ಮುನ್ಸೂಚನೆ ಅನ್ಸತ್ತೆ. ಪರೀಕ್ಷಾರ್ಥ ಪ್ರಯೋಗವಾಗಿ ಸ್ಫೋಟ ಮಾಡಿರಬಹುದೆಂಬ ಸಂಶಯ ಇದೆ ಎಂದು ಹೇಳಿದರು.

ಸರ್ಕಾರವನ್ನ ಅಭದ್ರಗೊಳಿಸಲು ಒಬ್ಬ ಶಾಸಕನಿಗೆ 50 ಕೋಟಿ ರು. ಆಮಿಷ ನೀಡಲಾಗುತ್ತಿದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಈ ರೀತಿ ಆಪಾದನೆ ಮಾಡುತ್ತಲೇ ಇರ್ತಾರೆ, ಇದು ಹುರುಳಿಲ್ಲದ ಆಪಾದನೆ. ಸಿದ್ದುವಿನ ವೈ.ಎಸ್.ಟಿ. ಟ್ಯಾಕ್ಸ್, ಡಿಕೆಶಿ ಕನಕಪುರ ರಿಪಬ್ಲಿಕ್ ಟ್ಯಾಕ್ಸ್. ಈ ಟ್ಯಾಕ್ಸ್ ನಲ್ಲಿ ಶಾಸಕರಿಗೂ ಪಾಲು ಕೊಟ್ಟು ಚೆನ್ನಾಗಿ ಇಟ್ಟು ಕೊಂಡಿದ್ದಾರೆ. ನಮ್ಮ ಚಿಕ್ಕಮಗಳೂರು ಜಿಲ್ಲೆ ಎಲ್ಲಾ ಶಾಸಕರಿಗೂ ಪಾಲು ಬಂದಿದೆ ಎಂದು ಹೇಳಿದರು.

ತಾನು ಕಳ್ಳ, ಪರರ ನಂಬ ಗಾದೆ ಇವರಿಗೆ ಅನ್ವಯವಾಗುತ್ತೆ. ಈ ಟ್ಯಾಕ್ಸ್ ಕಲೆಕ್ಟ್ ಮಾಡಿ ಯಾರ ಮೂಲಕ ಕೊಡ್ತಿದ್ದಾರೆ ಗೊತ್ತಿದೆ. ಇಂಟಲಿಜೆನ್ಸ್ ಎಡಿಜಿಪಿಯವರೇ, ನೀವು ಭಯೋತ್ಪಾದಕರ ಹಿಂದೆ ಹೋಗಿ, ಸಿ.ಟಿ. ರವಿ ಹಿಂದೇ ಹೋದ್ರೆ ನಿನಗೆ ಏನೂ ಸಿಗಲ್ಲ. ಅವರು ಭಯೋತ್ಪಾದಕರ ಹಿಂದೆ ಹೋಗಿದ್ರೆ ಬಾಂಬ್ ಬ್ಲಾಸ್ಟ್ ತಡೆಯಬಹುದಿತ್ತು. ಅವರು ಯಾರದ್ದು, ಏನೂ ಸಿಗುತ್ತೆ ಅಂತ ರಾಜಕೀಯ ನಾಯಕರ ಹಿಂದೆ ಹೋಗಿದ್ದಾರೆ. ಸಿಎಂ‌ ಅಣತಿಯೋ ಯಾರದ್ದೋ ಗೊತ್ತಿಲ್ಲ, ಅವ್ರು ನಮ್ಮ ಹಿಂದೆ ಬಿದ್ದಿದ್ದಾರೆ. ಇಂಟಲಿಜೆನ್ಸ್ ಭಯೋತ್ಪಾದಕರ ಭೇದಿಸುವಲ್ಲಿ ಬಳಕೆಯಾಗಲಿ ಎಂದರು.