ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಾಜ್ಯದಲ್ಲಿರುವ ನೂರಾರು ಎಕರೆ ಜಮೀನು ಇದೀಗ ವಕ್ಫ್ ಹಾಗೂ ಖಬರಸ್ತಾನ್ ಎಂದು ನಮೂದಿಸಿ ರೈತರ ಜಮೀನು, ದೇವಾಲಯ ಹಾಗೂ ಶಾಲೆಗಳ ಜಾಗವನ್ನು ಕಾಂಗ್ರೆಸ್ ಸರ್ಕಾರ ಕಬಳಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಮಹದೇವಪುರ ಗ್ರಾಮದ ದೇವಾಲಯ ವಕ್ಫ್ ಆಸ್ತಿ ಹಾಗೂ ಚಂದಗಾಲು ಗ್ರಾಮದ ಶಾಲೆಯನ್ನು ಖಬರಸ್ತಾನ್ ಎಂದು ನಮೂದಿಸಿರುವ ಹಿನ್ನೆಲೆಯಲ್ಲಿ ಎರಡು ಗ್ರಾಮಗಳಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಚರ್ಚೆ ನಡೆಸಿದರು.
ಕೂಡಲೇ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿಯನ್ನು ರದ್ದುಪಡಿಸಿ ವಕ್ಫ್ ಖಾತೆಗೆ ನೋಂದಾಯಿಸಿರುವ ಎಲ್ಲಾ ಪ್ರಕರಣಗಳನ್ನು ಕೈ ಬಿಟ್ಟು ತಿದ್ದುಪಡಿ ಮಾಡಿ ಆದೇಶಿಸಬೇಕು. ವಕ್ಫ್ ಆಸ್ತಿ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರಲ್ಲದೇ, ರಾಜ್ಯದಾದ್ಯಂತ ದೇವಸ್ಥಾನ, ಶಾಲೆ, ಮಠ ಸೇರಿದಂತೆ ಇತರೆ ಸ್ಥಳಗಳನ್ನು ಪಹಣಿಯಲ್ಲಿ ವಕ್ಫ್ ಆಸ್ತಿ, ಖಬರಸ್ತಾನ್ ಎಂದು ನೋಂದಾಯಿಸಿರುವ ಸರ್ಕಾರ ಹಾಗೂ ಕಂದಾಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಚಂದಗಾಲು ಗ್ರಾಮದ ಶಾಲಾ ಆವರಣದಲ್ಲಿ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ಎಕರೆ ಜಮೀನುಗಳನ್ನು ವಕ್ಫ್ ಖಾತೆಗೆ ವರ್ಗಾವಣೆ ಮಾಡಿರುವ ಸಿದ್ದರಾಮಯ್ಯ ಸರ್ಕಾರದ ಕ್ರಮವನ್ನು ಖಂಡಿಸಿದ ಅವರು, ಮಂಡ್ಯ ಜಿಲ್ಲೆಯ ನಾಗಮಂಗಲ, ಶ್ರೀರಂಗಪಟ್ಟಣದಲ್ಲಿ ಕಳೆದ ೫೦-೬೦ ವರ್ಷಗಳಿಂದ ಇರುವ ಸರ್ಕಾರಿ ಶಾಲೆಗಳು ಇದೀಗ ೨೦೧೪ರಲ್ಲಿ ಖಬರಸ್ತಾನ್ ಎಂದು ನಮೂದಿಸಲಾಗಿದೆ. ೪೦೦ ವರ್ಷಗಳ ಇತಿಹಾಸವಿರುವ ಸರ್ಕಾರಿ ಜಾಗದಲ್ಲಿನ ದೇವಾಲಯ ಇದೀಗ ವಕ್ಫ್ ಆಸ್ತಿ ಎಂದು ತಿದ್ದುಪಡಿ ಮಾಡಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ವಕ್ಫ್ ಖಾತೆ ವಹಿಸಿಕೊಂಡಿರುವ ಸಚಿವ ಜಮೀರ್ ಖಾನ್ ಸರ್ಕಾರದ ಯಾವುದೇ ದಾಖಲೆ ಇದ್ದರೂ ವರ್ಗಾವಣೆ ಮಾಡಿ ವಕ್ಫ್ ಮಂಡಳಿಗೆ ಸೇರಿಸುತ್ತಾ ಬಂದಿರುವುದು ಇದೀಗ ರಾಜ್ಯದಲ್ಲಿ ಎಲ್ಲವೂ ಬಯಲಿಗೆ ಬಂದಿದೆ ಎಂದು ಟೀಕಿಸಿದರು.
ದೇಶದಲ್ಲಿ ರಕ್ಷಣಾ ಖಾತೆಯಲ್ಲಿ ಹೆಚ್ಚಿನ ಜಾಗವಿದ್ದು, ಎರಡನೇ ಸ್ಥಾನದಲ್ಲಿ ವಕ್ಫ್‌ನ ಆಸ್ತಿಗಳಿವೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅಶೋಕ್, ಸರ್ಕಾರದ ಆಸ್ತಿಗಳು ಇದೀಗ ವಕ್ಫ್ ಖಾತೆಗೆ ಹೇಗೆ ಬರುತ್ತಿವೆ. ಅಲ್ಲದೇ, ರೈತರ ಜಮೀನು ಜೊತೆಗೆ ಇತರೆ ಸರ್ಕಾರದ ಆಸ್ತಿಗೂ ಕಂಟಕ ತಂದಿರುವುದು ಕಾಂಗ್ರೆಸ್‌ನ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ರಾಜ್ಯಾದ್ಯಂತ ಹೋರಾಟ ಆರಂಭವಾಗಿದೆ. ಸರ್ಕಾರ ಕೂಡಲೇ ಸಾರ್ವಜನಿಕರಿಗೆ ನೀಡುತ್ತಿರುವ ನೋಟಿಸ್‌ನ್ನು ಹಿಂಪಡೆದು, ವಕ್ಫ್ ಮಂಡಳಿಗೆ ಸೇರಿದ್ದು ಎನ್ನುವುದನ್ನು ತೆಗೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಮಹದೇವಪುರ, ಚಂದಗಾಲು ಮಾತ್ರವಲ್ಲದೇ, ಇತರೆ ಗ್ರಾಮಸ್ಥರೊಂದಿಗೆ ನಾವಿದ್ದೇವೆ. ನಾವು ಬರುವುದು ಗೊತ್ತಾಗಿ ಮಹದೇವಪುರ ದೇವಾಲಯ ವಕ್ಫ್ ಖಾತೆ ಆಸ್ತಿ ಎಂದು ನಮೂದಾಗಿದ್ದ ಪಹಣಿಯಿಂದ ಸರ್ಕಾರ ಬೇರ್ಪಡಿಸಿದ್ದು, ಇದೇ ರೀತಿ ವಕ್ಫ್ ಖಾತೆ ಎಂದಿರುವುದನ್ನು ಪಹಣಿಯಿಂದ ತೆಗೆದು ತಿದ್ದುಪಡಿ ಮಾಡಬೇಕು. ಈಗಾಗಲೇ ರೈತರು ನಿಮ್ಮ ಜಮೀನುಗಳ ದಾಖಲೆ ಪರೀಕ್ಷಿಸಿಕೊಂಡು ಹೋರಾಟಕ್ಕೆ ನಮ್ಮ ಜೊತೆ ಕೈ ಜೋಡಿಸಿ ನಿಮ್ಮ ಜೊತೆ ನಾವಿದ್ದೇವೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಮೈಸೂರು-ಕೊಡಗು ಸಂಸದ ಯದುವೀರ ಶ್ರೀ ಕೃಷ್ಣದತ್ತ ಜಯಚಾಮ ರಾಜೇಂದ್ರ ಒಡೆಯರ್ ಮಾತನಾಡಿ, ತಮ್ಮ ತಾತಂದಿರು ರೈತರಿಗೆ ನೀಡಿರುವ ಜಮೀನು, ದೇವಾಲಯಗಳ ನಿರ್ಮಾಣ ಸೇರಿದಂತೆ ಇತರ ದಾನ ನೀಡಿರುವುದರ ಕುರಿತು ಮಾತನಾಡಿದರು.ಈ ವೇಳೆ ಮಾಜಿ ಸಚಿವ ನಾರಾಯಣಗೌಡ, ಬಿಜೆಪಿ ಮುಖಂಡ ಸಚ್ಚಿದಾನಂದ, ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ತಾಲೂಕು ಬಿಜೆಪಿ ಅಧ್ಯಕ್ಷ ರಮೇಶ್ ಪೀಹಳ್ಳಿ ಟಿ.ಶ್ರೀಧರ್ ಸೇರಿದಂತೆ ಇತರರಿದ್ದರು.
ಬಿಜೆಪಿ-ಕಾಂಗ್ರೆಸ್ ನಡುವ ವಾಗ್ವಾದ:ಇದಕ್ಕೂ ಮುನ್ನ ಚಂದಗಾಲು ಗ್ರಾಮದ ಶಾಲಾ ಆವರಣದಲ್ಲಿ ಯಾವುದೇ ಸಭೆ ಸಮಾರಂಭ ಮಾಡಬಾರದು ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶ ಮಾಡಿ ಸಮಾಧಾನ ಪಡಿಸಿದರು.
ಗ್ರಾಮಕ್ಕೆ ಏಕೆ ಭೇಟಿ ನೀಡಬಾರದು, ನಾನು ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದು, ಎಲ್ಲಿಗಾದರೂ ಹೋಗಿ ಬರುವ ಹಕ್ಕಿದೆ. ನಮ್ಮ ಜನರ ಸಂಕಷ್ಟಗಳನ್ನು ಕೇಳಲು ಹೋಗಿ ಬರಬೇಡವೇ. ಇದೆಲ್ಲವೂ ಸರ್ಕಾರದ ಹುನ್ನಾರ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರೈತರ ಪರವಾಗಿ ಇಂತಹ ಸಮಸ್ಯೆಗಳು ಬಂದರೆ ಒಂದಲ್ಲಾ, ಎಷ್ಟು ಬಾರಿಯಾದರೂ ಬರುತ್ತೇವೆ. ನಮ್ಮನ್ನು ಕೇಳುವವರಾರು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.ತಾಲೂಕಿನ ಮಹದೇವಪುರ ಹಾಗೂ ಚಂದಗಾಲು ಗ್ರಾಮದಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಡಿಆರ್ ತುಕ್ಕಡಿಯೊಂದಿಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಮಾಡಲಾಗಿತ್ತು.