ಕುಡಿವ ನೀರು ಪೂರೈಕೆಗೆ ವ್ಯಾಪಕ ಕ್ರಮ

| Published : Mar 26 2024, 01:01 AM IST

ಸಾರಾಂಶ

ಇದೇ ಮಾ.26ರಂದು ನಡೆಯುವ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿವ ನೀರು ವಿತರಣೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಎಚ್.ಗಂಗಾಧರಪ್ಪ ತಿಳಿಸಿದರು.

ನಾಯಕನಹಟ್ಟಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಗಂಗಾಧರಪ್ಪ ಮಾಹಿತಿ

ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ

ಇದೇ ಮಾ.26ರಂದು ನಡೆಯುವ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿವ ನೀರು ವಿತರಣೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಎಚ್.ಗಂಗಾಧರಪ್ಪ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ದೇವಸ್ಥಾನದಲ್ಲಿ ಮಾತನಾಡಿದ ಅವರು, ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು ಕಡು ಬೇಸಗೆ ಇರುವುದರಿಂದ ಭಕ್ತರಿಗೆ ಕುಡಿವ ನೀರು ಸರಬರಾಜಿಗೆ ಗಂಭೀರ ಪ್ರಯತ್ನ ಮಾಡಲಾಗಿದೆ. ನಾಯಕನಹಟ್ಟಿ ಪಟ್ಟಣದಲ್ಲಿ ಹೊಸದಾಗಿ 12 ನೀರು ಪೂರೈಕೆ ಕೇಂದ್ರ ಗುರುತಿಸಲಾಗಿದೆ. ಇಲ್ಲಿಂದ ಪಟ್ಟಣದ ವಿವಿಧ ಭಾಗಗಳಿಗೆ 70ಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ ನಿರಂತರವಾಗಿ ಸರಬರಾಜು ಮಾಡಲಾಗುವುದು. ವಿವಿಧ ಇಲಾಖೆಗಳ ನೀರಿನ ಟ್ಯಾಂಕರ್ ಜೊತೆಗೆ ಹಾಲಿನ ಟ್ಯಾಂಕರ್ ಗಳನ್ನು ಹೆಚ್ಚುವರಿಯಾಗಿ ಬಳಕೆ ಮಾಡಲಾಗುತ್ತದೆ. ಜಾನುವಾರುಗಳಿಗೆ ಆಯ ಕಟ್ಟಿನ ಸ್ಥಳದಲ್ಲಿ ನೀರಿನ ತೊಟ್ಟಿ ನಿರ್ಮಿಸಲಾಗಿದೆ ಹಾಗೂ ಐದು ಕಡೆ ನೀರಿನ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ದೇವಸ್ಥಾನ ಪ್ರಾಂಗಣ ಹಾಗೂ ಸರತಿಯಲ್ಲಿ ನಿಲ್ಲುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಶ್ರೀ ತಿಪ್ಪೇಶನ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಭದ್ರತೆ ದೃಷ್ಠಿಯಿಂದ ಸುಮಾರು 60 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸ್ ಇಲಾಖೆ ಭದ್ರತೆ ವ್ಯವಸ್ಥೆ ನಿರ್ವಹಿಸಲಿದೆ. ಜಾತ್ರಾ ಸಂದರ್ಭದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೇವಸ್ಥಾನ ಪ್ರಾಂಗಣ, ದೇವಸ್ಥಾನ ಸಂಬಂಧಿಸಿ ಸ್ಥಳದಲ್ಲಿ ಪ್ರಾಣಿ ಬಲಿ ಕಟ್ಟುನಿಟ್ಟಾಗಿ ನಿಷೇದಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಜಾತ್ರಾ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿ ಇರುತ್ತದೆ. ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಜಾತ್ರೆ ಎಲ್ಲಾ ಕಾರ್ಯಕ್ರಮ ಪಾಲನೆ ಮಾಡಲಾಗುತ್ತಿದೆ ಎಂದು ಎಚ್.ಗಂಗಾಧರಪ್ಪ ಹೇಳಿದರು.