ಪೊಲೀಸ್‌ ಸಮವಸ್ತ್ರ ಧರಿಸಿ ಹಣ ಸುಲಿಗೆ..!

| Published : Apr 03 2024, 01:34 AM IST

ಸಾರಾಂಶ

ಚಿನ್ನದ ವ್ಯಾಪಾರಿಯಿಂದ ಸುಲಿಗೆ ಮಾಡಿದ್ದ ಹೈದ್ರಾಬಾದ್‌ ಮೂಲದವರು. ಹೈದ್ರಾಬಾದ್‌ನಿಂದ ಮುಂಬೈಗೆ ತೆರಳುತ್ತಿದ್ದ ವ್ಯಾಪಾರಿಯಿಂದ ವಿದೇಶಿ ಕರೆನ್ಸಿ ಸೇರಿ ₹21 ಲಕ್ಷ ಸುಲಿಗೆ ಮಾಡಿದ್ದ ಮೂವರ ಬಂಧನ.

ಕನ್ನಡಪ್ರಭ ವಾರ್ತೆ ಬೀದರ್‌

ಹೈದ್ರಾಬಾದ್‌ನಿಂದ ಮುಂಬೈಗೆ ಚಿನ್ನದ ಆಭರಣ ಖರೀದಿಸಲು ಸುಮಾರು 21 ಲಕ್ಷ ರು. ಮೌಲ್ಯದ ವಿದೇಶಿ ಕರೆನ್ಸಿಗಳನ್ನಿಟ್ಟುಕೊಂಡು ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಾಪಾರಿಯನ್ನು ಮಾರ್ಗ ಮಧ್ಯ ಸುಲಿಗೆ ಮಾಡಿದ್ದ ಸಮವಸ್ತ್ರಧಾರಿ ನಕಲಿ ಪೊಲೀಸರನ್ನು ಬಸವಕಲ್ಯಾಣದ ಅಸಲಿ ಪೊಲೀಸರು 72 ಗಂಟೆಯಲ್ಲಿ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.

ಈ ಕುರಿತಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಅವರು ಮಂಗಳವಾರ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಹೈದ್ರಾಬಾದ್‌ನಿಂದ ಜಾಗ್ವಾರ್‌ ಟ್ರಾವೆಲ್ಸ್‌ನಲ್ಲಿ ಮುಂಬೈಗೆ ಚಿನ್ನದ ಆಭರಣಗಳನ್ನು ಖರೀದಿಸಲೆಂದು ಯುಎಸ್‌ಎ ಡಾಲರ್‌, ಅರಬ್‌ ಎಮಿರೇಟ್ಸ್‌ ಮತ್ತು ಸೌದಿ ದೇಶಗಳ ಕರೆನ್ಸಿಗಳು ಸೇರಿದಂತೆ ಒಟ್ಟು ಸುಮಾರು 21ಲಕ್ಷ ರು.ಗಳನ್ನು ಇಟ್ಟುಕೊಂಡು ತೆರಳುತ್ತಿದ್ದಾಗ ಮಾರ್ಗ ಮಧ್ಯ ಮಾ.29ರ ನಡುರಾತ್ರಿ ಇಬ್ಬರು ಪೊಲೀಸ್‌ ಸಮವಸ್ತ್ರದಲ್ಲಿ ರಸ್ತೆಯ ಪಕ್ಕದಲ್ಲಿ ನಿಂತು ಬಸ್‌ ನಿಲ್ಲಿಸುವಂತೆ ಸೂಚಿಸಿದ್ದಾರೆ. ಬಸ್‌ ನಿಲ್ಲಿಸುತ್ತಿದ್ದಂತೆ ವಾಕಿಟಾಕಿ ಸಹಿತ ಒಳಬಂದ ನಕಲಿ ಪೊಲೀಸರು ಪೀರ್ಯಾದಿ ವಂಗಟಿ ರಾಮರೆಡ್ಡಿ ಎಂಬಾತನನ್ನು ಬಸ್‌ನಿಂದ ಕೆಳಗಿಳಿಸಿ ತಪಾಸಣೆ ಮಾಡಿದ್ದು, ಆತನ ಬಳಿಯಿದ್ದ ಎಲ್ಲ ವಿದೇಶಿ ಕರೆನ್ಸಿಗಳನ್ನು ಸುಲಿಗೆ ಮಾಡಿದ್ದಾರೆ. ನಾವು ದೂರು ದಾಖಲಿಸಿಕೊಂಡಿದ್ದೆಯಾದಲ್ಲಿ ಚುನಾವಣೆಯ ಈ ಸಂದರ್ಭದಲ್ಲಿ ಇಷ್ಟೊಂದು ಹಣ ಸಾಗಿಸಲು ಯಾವುದೇ ಪರವಾನಗಿ ಹೊಂದದ ನಿನಗೆ 20ವರ್ಷಕ್ಕೂ ಹೆಚ್ಚು ಕಾಲ ಸಜೆಯಾಗುತ್ತದೆ. ಹೀಗಾಗಿ ಯಾರಿಗೂ ಹೇಳದಂತೆ ಹೆದರಿಸಿ ಸುಲಿಗೆ ಮಾಡಿ ಹೊರಟು ಹೋಗಿದ್ದಾರೆ.

ಬಳಿಕ ವಂಗಟಿ ರಾಮರೆಡ್ಡಿಯವರು ನಕಲಿ ಪೊಲೀಸರು ಇರಬಹುದೆಂದು ಅನುಮಾನಗೊಂಡು ಬಸವಕಲ್ಯಾಣ ಪೊಲೀಸ್‌ ಠಾಣೆಗೆ ಹಾಜರಾಗಿ ಮಾ.30ರಂದು ದೂರು ದಾಖಲಿಸುತ್ತಿದ್ದಂತೆ ಬಸವಕಲ್ಯಾಣ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಅವರ ಮಾರ್ಗದರ್ಶನದಲ್ಲಿ ಡಿಎಸ್‌ಪಿ ನ್ಯಾಮನಗೌಡರ ನೇತೃದಲ್ಲಿ ಬತ್ವಸವಕಲ್ಯಾಣ ಸಿಪಿಐ ಅಲಿಸಾಬ್‌ ಹಾಗೂ ಪಿಎಸ್‌ಐ ಅಂಬರೀಶ ವಾಗ್ಮೋರೆ ಹಾಗೂ ತಂಡದವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆಗೆ ಇಳಿದಿದ್ದು 72 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿನ್ನದ ವ್ಯಾಪಾರಿಯಾಗಿದ್ದ ಹೈದ್ರಾಬಾದ್‌ ಮೂಲದ ಮಹೇಶ ಎಂಬುವವರಿಗೆ ಸೇರಿದ್ದ ಹಣ ಇದಾಗಿದೆ. ಅಂಗಡಿಯ ಕೆಲಸಗಾರ ರಾಮಾರೆಡ್ಡಿ ಮುಂಬೈಗೆ ವಿದೇಶಿ ಕರೆನ್ಸಿಗಳೊಂದಿಗೆ ತೆರಳುತ್ತಿದ್ದಾಗ ನಡೆದ ಈ ಘಟನೆಯಲ್ಲಿ ಈ ಹಿಂದೆ ಗಡಿಯಲ್ಲಿ ಕೆಲಸ ಮಾಡಿ ಬಿಟ್ಟಿದ್ದ ವೆಂಕಟೇಶ ಎಂಬಾತನ ಸಂಬಂಧಿ ಎ. ಬಾಲಕೃಷ್ಣ ಈ ಕೃತ್ಯದ ಮುಖ್ಯ ಪಾತ್ರದಾರಿಯಾಗಿದ್ದು, ವ್ಯಾಪಾರ ವಹಿವಾಟಿನ ಮಾಹಿತಿ ಪಡೆದ ಈತ ಹೈದ್ರಾಬಾದ್‌ ಸಿದ್ದಿರಾಮುಲು ಎಂಬಾತನ ಜೊತೆಗೂಡಿ ಊಬರ್‌ ಕಾರ್‌ ಬಾಡಿಗೆಗೆ ಪಡೆದು ದೃಷ್ಕೃತ್ಯಕ್ಕೆ ಬಳಸಿದ್ದು, ಕಾರು ಚಾಲಕ ನವೀನನನ್ನೂ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೋರ್ವ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಪ್ರಕರಣದಲ್ಲಿ ಭಾಗಿಯಾದ ಆರೋಪಿಯ ಪೈಕಿ ಒಬ್ಬ ಆರೋಪಿಯ ಪತ್ನಿ ಹೈದ್ರಾಬಾದ್‌ ಪೊಲೀಸ್‌ಗೆ ನೇಮಕವಾಗಿದ್ದು ತರಬೇತಿ ಪಡೆಯುತ್ತಿದ್ದು ಈತನಿಗೆ ಸಮವಸ್ತ್ರ, ವಾಕಿ ಟಾಕಿ ಕುರಿತು ಮಾಹಿತಿ ಇದ್ದು ಈ ಕೃತ್ಯದಲ್ಲಿ ತನ್ನ ಚಾಣಾಕ್ಷತೆ ಮೆರೆಯಲು ಹೋಗಿ ಕಂಬಿ ಎಣಿಸುವಂತಾಗಿದ್ದಾನೆ. ಆರೋಪಿಗಳಿಂದ ಸುಮಾರು 21ಲಕ್ಷ ರು.ಗಳ ಮೌಲ್ಯದ ವಿದೇಶಿ ಕರೆನ್ಸಿಗಳು, ಒಂದು ಕಾರು, ಎರಡು ಜೊತೆ ಸಮವಸ್ತ್ರಗಳು, 2 ವಾಕಿ ಟಾಕಿಯನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.