ಸಂಡೂರು: ಪೊಲೀಸ್‌ ಇನ್ಸ್‌ಪೆಕ್ಟರ್‌ರಿಂದ ತೇಜೋವಧೆ ಆರೋಪ

| Published : Jan 06 2024, 02:00 AM IST / Updated: Jan 06 2024, 03:55 PM IST

ಸಂಡೂರು: ಪೊಲೀಸ್‌ ಇನ್ಸ್‌ಪೆಕ್ಟರ್‌ರಿಂದ ತೇಜೋವಧೆ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಇನ್‌ಸ್ಪೆಕ್ಟರ್ ಮಹೇಶ್‌ಗೌಡ ಅವರು ತಮ್ಮ ವ್ಯಾಪ್ತಿಗೆ ಬರದ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ರೈಲ್ವೆ ಯಾರ್ಡ್ ಬಳಿ ನಡೆದ ಘಟನೆಗೆ ಸಂಬಂಧಿಸಿದ ಕೆಲವರನ್ನು ಕರೆಸಿ, ಅವರ ಮುಂದೆ ನನ್ನ ಅಂಗವೈಕಲ್ಯತೆ ಕುರಿತು ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ

ಸಂಡೂರು: ಪೊಲೀಸ್‌ ಇನ್‌ಸ್ಪೆಕ್ಟರ್ ಮಹೇಶ್‌ಗೌಡ ಅವರು ಪದೇ ಪದೇ ನನ್ನ ಅಂಗವೈಕಲ್ಯತೆ ಕುರಿತು ಅಪಹಾಸ್ಯ ಹಾಗೂ ತೇಜೋವಧೆ ಮಾಡುತ್ತಿದ್ದಾರೆ. ಅವರು ಸಾರ್ವಜನಿಕರ ಸೇವಕರು. ಅವರು ಹಿಟ್ಲರ್‌ನಂತೆ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಜಿ.ಟಿ. ಪಂಪಾಪತಿ ಅವರು ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಅಳಲಯ ತೋಡಿಕೊಂಡ ಅವರು, ಕೆಲ ದಿನಗಳ ಹಿಂದೆ ತಾಲೂಕಿನ ಬನ್ನಿಹಟ್ಟಿ ಗ್ರಾಮದ ಬಳಿಯ ರೈಲು ಲೋಡಿಂಗ್ ಪಾಯಿಂಟ್ ಬಳಿ ರೈಲು ಗಾಡಿಗೆ ಅದಿರು ಲೋಡ್ ಮಾಡುವ ಕುರಿತಂತೆ ಗ್ರಾಮದ ಕೆಲವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅದರಲ್ಲಿ ನನ್ನ ಪಾತ್ರವೇನೂ ಇಲ್ಲ. ಅಲ್ಲಿ ಲೋಡಿಂಗ್ ಮಾಡುವವರು ಹಾಗೂ ಲೋಡಿಂಗ್ ನಿಲ್ಲಿಸಿದವರು ಕಾಂಗ್ರೆಸ್ ಪಕ್ಷದವರೇ. ಅಂದಿನ ಪ್ರಕರಣವನ್ನು ರೈಲ್ವೆ ಪೊಲೀಸರು ಬಗೆಹರಿಸಿದ್ದಾರೆ ಎಂದರು. 

ಹೀಗಿದ್ದಾಗ್ಯೂ, ಇನ್‌ಸ್ಪೆಕ್ಟರ್ ಮಹೇಶ್‌ಗೌಡ ಅವರು ತಮ್ಮ ವ್ಯಾಪ್ತಿಗೆ ಬರದ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ರೈಲ್ವೆ ಯಾರ್ಡ್ ಬಳಿ ನಡೆದ ಘಟನೆಗೆ ಸಂಬಂಧಿಸಿದ ಕೆಲವರನ್ನು ಕರೆಸಿ, ಅವರ ಮುಂದೆ ನನ್ನ ಅಂಗವೈಕಲ್ಯತೆ ಕುರಿತು ಮಾತನಾಡಿದ್ದಾರೆ ಎಂದರು. ವಾಡಾ ಮಾಜಿ ಅಧ್ಯಕ್ಷ ಕರಡಿ ಯರಿಸ್ವಾಮಿ ಮಾತನಾಡಿದರು. 

ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಓಬಳೇಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶರಣಗೌಡ, ಒಬಿಸಿ ಮೋರ್ಚಾ ಅಧ್ಯಕ್ಷ ಬಸವರಾಜ, ಪ್ರಧಾನ ಕಾರ್ಯದರ್ಶಿ ರಮೇಶ್, ಎಸ್‌ಸಿ ಮೋರ್ಚಾ ಅಧ್ಯಕ್ಷ ಸತೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಶಂಕರಪ್ಪ, ಅಂಜಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೂರಸ್ವಾಮಿ ಲಿಂಗದಹಳ್ಳಿ, ಮುಖಂಡರಾದ ಅಂಜಿನಿ, ಪರಶುರಾಮ್, ಹೊನ್ನೂರಸ್ವಾಮಿ, ಆನಂದಪ್ಪ ಮುಂತಾದವರು ಇದ್ದರು.