ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಅಂತಸ್ತು ನಿರ್ಮಾಣ: ಮಸೂದೆ ಪಾಸ್‌

| Published : Feb 21 2024, 02:01 AM IST

ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಅಂತಸ್ತು ನಿರ್ಮಾಣ: ಮಸೂದೆ ಪಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾರ್ಗಸೂಚಿ ದರದ ಶೇ.40ರಷ್ಟು ಶುಲ್ಕ ಕಟ್ಟಿದರೆ ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಅಂತಸ್ತು ನಿರ್ಮಿಸಲು ಸದನ ಅನುಮತಿ ನೀಡಿದೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಲು ಮಾರ್ಗಸೂಚಿ ದರದ ಶೇ.40ರಷ್ಟು ಶುಲ್ಕ ಪಡೆದು ಅವಕಾಶ ಕಲ್ಪಿಸುವ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕವನ್ನು ಸದನವು ಅಂಗೀಕರಿಸಿತು.ಮಂಗಳವಾರ ವಕೀಲರ ಪ್ರತಿಭಟನೆ ವಿಚಾರವಾಗಿ ಬಿಜೆಪಿ-ಜೆಡಿಎಸ್‌ ಬಾವಿಗಿಳಿದು ಧರಣಿ ನಡೆಸಿ ಗದ್ದಲದ ಮಾಡಿದ ನಡುವೆಯೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಪರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಧೇಯಕಕ್ಕೆ ಅಂಗೀಕಾರ ಕೋರಿದರು. ಸಭಾಧ್ಯಕ್ಷ ಯು.ಟಿ.ಖಾದರ್‌ ಧ್ವನಿಮತದ ಮೂಲಕ ಅಂಗೀಕರಿಸಿದರು.ವಿಧೇಯಕ ಕುರಿತು ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕಟ್ಟಡ ನಿರ್ಮಿಸುವವರು ಪ್ರೀಮಿಯಂ ನೆಲ ವಿಸ್ತೀರ್ಣ ಅನುಪಾತವನ್ನು (ಎಫ್ಎಆರ್) ನಿವೇಶನದ ಅಳತೆಗೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಾಣ ಮಾಡಬಹುದಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರದ ಮೂಲಕವೇ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.ವಿಧೇಯಕಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಲ್ಡರ್‌ಗಳಿಗೆ ಲಾಭ ಮಾಡಿಕೊಡಲು ವಿಧೇಯಕವನ್ನು ತಂದಿದೆ. ಸರ್ಕಾರವು ಶ್ರೀಮಂತ ಬಿಲ್ಡರ್‌ಗಳ ಪರವಾಗಿದೆ ಎಂದು ಟೀಕಿಸಿದರು.ಇದೇ ವೇಳೆ ಬಿಜೆಪಿಯ ಧರಣಿಯ ನಡುವೆಯೇ ಕರ್ನಾಟಕ ಪೊಲೀಸ್‌ (ತಿದ್ದುಪಡಿ) ವಿಧೇಯಕ, ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು) (ತಿದ್ದುಪಡಿ) ವಿಧೇಯಕ, ಅಂತರ್‌ ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ, ಕರ್ನಾಟಕ ನೋಂದಣಿ (ತಿದ್ದುಪಡಿ) ವಿಧೇಯಕ ಮಂಡಿಸಲಾಯಿತು.