ಸಂಸ್ಕರಿಸಿದ ನೀರು ಬಳಕೆಗೆ ತೀವ್ರ ನಿರ್ಲಕ್ಷ್ಯ!

| Published : Mar 11 2024, 01:18 AM IST

ಸಾರಾಂಶ

ನಗರದಲ್ಲಿ ಸೃಷ್ಟಿಯಾಗಿರುವ ನೀರಿನ ಹಾಹಾಕಾರ ಪರಿಹಾರವಾಗಲು ಸಂಸ್ಕರಿಸಿದ ನೀರಿನ ಸದ್ಬಳಕೆಯೂ ಉತ್ತಮ ಉಪಾಯ ಎಂದೇ ಜಲ ತಜ್ಞರು ಅಭಿಪ್ರಾಯಪಡುತ್ತಾರೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಸೃಷ್ಟಿಯಾಗಿರುವ ನೀರಿನ ಹಾಹಾಕಾರ ಪರಿಹಾರವಾಗಲು ಸಂಸ್ಕರಿಸಿದ ನೀರಿನ ಸದ್ಬಳಕೆಯೂ ಉತ್ತಮ ಉಪಾಯ ಎಂದೇ ಜಲ ತಜ್ಞರು ಅಭಿಪ್ರಾಯಪಡುತ್ತಾರೆ.

ನಗರಕ್ಕೆ ಸುಮಾರು 100 ಕಿ.ಮೀ. ದೂರದಿಂದ ಪ್ರತಿ ನಿತ್ಯ 1,450 ಎಂಎಲ್‌ಸಿ ಕಾವೇರಿ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಜತೆಗೆ ಕೊಳವೆ ಬಾವಿಗಳಿಗೆ ಸುಮಾರು 400 ಎಂಎಲ್‌ಡಿ ನೀರನ್ನು ಮೇಲೆತ್ತಿ ಬಳಸಲಾಗುತ್ತಿದೆ. ಈ ಪೈಕಿ ಶೇಕಡ 80ರಷ್ಟು ಅಂದರೆ 1,440 ಎಂಎಲ್‌ಡಿ ನೀರು ತ್ಯಾಜ್ಯವಾಗಿ ಹರಿದು ಹೋಗುತ್ತಿದೆ. ಈ ನೀರನ್ನು ಬೆಂಗಳೂರು ಜಲಮಂಡಳಿಯು ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಸಂಸ್ಕರಣೆ ಮಾಡುತ್ತಿದೆ. ಆದರೆ, ಈ ಸಂಸ್ಕರಿಸಿದ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಿಲ್ಲ.

ಸಂಸ್ಕರಿಸಿದ ನೀರು ರಾಜಕಾಲುವೆಗೆ:

ನಗರದಲ್ಲಿ 33 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿದ್ದು, ಪ್ರತಿ ದಿನ 1,212 ಎಂಎಲ್‌ಡಿ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಈ ಪೈಕಿ 550 ಎಂಎಲ್‌ಡಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಅನೇಕಲ್‌ ಭಾಗದ ಕೆರೆಗಳಿಗೆ ಹರಿಸಲಾಗುತ್ತಿದೆ. ಸುಮಾರು 10 ರಿಂದ 15 ಎಂಎಲ್‌ಡಿ ನೀರನ್ನು ವಿಧಾನಸೌಧ, ವಿಕಾಸ ಸೌಧ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್, ಬಿಇಎಲ್‌, ಐಎಎಫ್‌, ಐಟಿಸಿ ಸೇರಿದಂತೆ ಮಾದಲಾವರಿಗೆ ವಿತರಣೆ ಮಾಡುತ್ತಿದೆ. ಉಳಿದಂತೆ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ರಾಜಕಾಲುವೆಗಳಿಗೆ ಹರಿಸಲಾಗುತ್ತಿದೆ. ಈ ನೀರು ಪುನಃ ಕಾವೇರಿ ಒಡಲು ಸೇರುತ್ತಿದೆ. ಈ ನೀರಿನ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸದಿರುವುದು, ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸಂಸ್ಕರಿಸಿದ ನೀರು ಬಳಕೆ ಬಗ್ಗೆ ಜಾಗೃತಿಯೇ ಇಲ್ಲ:

ವಾಹನ ಸ್ವಚ್ಛಗೊಳಿಸುವುದಕ್ಕೆ, ಕಾರ್ಖಾನೆ, ಉದ್ಯಾನವನಕ್ಕೆ, ಶೌಚಾಲಯಕ್ಕೆ ಸೇರಿದಂತೆ ಕುಡಿಯುವುದಕ್ಕೆ, ಸ್ನಾನಕ್ಕೆ ಮಾನವ ಬಳಕೆ ಹೊರತು ಪಡಿಸಿ ಉಳಿದ ಎಲ್ಲ ಕಾರ್ಯಗಳಿಗೆ ಸಂಸ್ಕರಿಸಿದ ನೀರನ್ನು ಬಳಕೆ ಮಾಡಬಹುದಾಗಿದೆ. ಈ ಬಗ್ಗೆ ಜಲ ಮಂಡಳಿ ಅಧಿಕಾರಿಗಳು ಜನರಿಗೆ ಜಾಗೃತಿ ಮೂಡಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಜಾಗೃತಿ ಮೂಡಿಸಿದರೆ, ಕಾವೇರಿ ನೀರಿನ ಪೂರೈಕೆ ಮೇಲೆ ಒತ್ತಡ ಕಡಿಮೆ ಮಾಡಬಹುದಾಗಿದೆ.

ಇದೀಗ ಎಚ್ಚೆತ್ತುಕೊಂಡ ಮಂಡಳಿ:

ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡ ಬಳಿಕ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇದೀಗ ಸಂಸ್ಕರಿಸಿದ ನೀರನ್ನು ನಗರದಲ್ಲಿರುವ ಕೆರೆಗಳಿಗೆ ಹರಿಸುವುದಕ್ಕೆ ಯೋಜನೆ ಸಿದ್ಧಪಡಿಸುವುದಕ್ಕೆ ಮುಂದಾಗಿದ್ದಾರೆ. ಶೇ.20ರಿಂದ 30ರಷ್ಟು ಮಾತ್ರ ಸಂಸ್ಕರಿಸಿ ನೀರನ್ನು ಕೆರೆ ತುಂಬಿಸುವುದಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಆರು ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಂತ ಹಂತವಾಗಿ ಇಷ್ಟು ಕೆರೆಗಳನ್ನು ತ್ಯಾಜ್ಯ ನೀರಿನಿಂದ ತುಂಬಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

ಕೇವಲ ₹360ಕ್ಕೆ 6 ಸಾವಿರ ಲೀ. ನೀರು!:

ನಗರದಲ್ಲಿ ಬೆಂಗಳೂರು ಜಲಮಂಡಳಿಯ 33 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿವೆ. ಈ ಎಲ್ಲಾ ಘಟಕದಲ್ಲಿ ತ್ಯಾಜ್ಯ ನೀರು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. 6 ಸಾವಿರ ಲೀಟರ್‌ ನೀರಿಗೆ ₹360 ದರ ನಿಗದಿ ಪಡಿಸಲಾಗಿದೆ. ಜಲ ಮಂಡಳಿಯ ಟ್ಯಾಂಕರ್‌ಗಳಿಗೆ 5 ಕಿ.ಮೀ. ವ್ಯಾಪ್ತಿಯಲ್ಲಿ ಸರಬರಾಜು ಮಾಡಲಿವೆ. ಗ್ರಾಹಕರು ತಮ್ಮದೇ ಟ್ಯಾಂಕರ್‌ ಮೂಲಕವೂ ಸಂಸ್ಕರಿಸಿದ ನೀರನ್ನು ತುಂಬಿಕೊಂಡು ಹೋಗಬಹುದಾಗಿದೆ. ಪ್ರತಿ ಸಾವಿರ ಲೀಟರ್‌ಗೆ ₹15 ದರ ನಿಗದಿ ಪಡಿಸಲಾಗಿದೆ.ಸಂಸ್ಕರಿಸಿದ ನೀರು ಬೇಕಾ?

ಸಂಸ್ಕರಿಸಿ ನೀರು ಬೇಕಾದ ಗ್ರಾಹಕರು ಬೆಂಗಳೂರು ಜಲ ಮಂಡಳಿಯ ಸಹಾಯವಾಣಿ 1916ಕ್ಕೆ ಕರೆ ಮಾಡಿ ಟ್ಯಾಂಕರ್‌ ಮೂಲಕ ನೀರು ಪಡೆಯಬಹುದು.

ಸಂಸ್ಕರಿಸಿದ ನೀರನ್ನು ಬೆಂಗಳೂರಿನ ನೆರೆಯ ಜಿಲ್ಲೆಗಳಿಗೆ ನೀಡಲಾಗುತ್ತಿದೆ. ಮುಂದಿನ ದಿನದಲ್ಲಿ ಬೆಂಗಳೂರಿಗೆ ಪೂರ್ಣ ಪ್ರಮಾಣದಲ್ಲಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಈ ರೀತಿ ಸಂಕಷ್ಟದ ಸಂದರ್ಭದಲ್ಲಿ ಸಹಕಾರಿಯಾಗಲಿದೆ.

-ಗಂಗಾಧರ್‌, ಮುಖ್ಯ ಎಂಜಿನಿಯರ್‌, ತ್ಯಾಜ್ಯ ನೀರು ಸಂಸ್ಕರಣಾ ವಿಭಾಗ.