ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರಸ್ತುತ ಜಿಲ್ಲೆಯಲ್ಲಿ ಅತೀ ಹೆಚ್ಚು ತಾಪಮಾನ ಪರಿಣಾಮವನ್ನು ಕಡಿಮೆ ಮಾಡಲು ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದ್ದು, ಎಲ್ಲಾ ಗ್ರಾಪಂ, ರೈತ ಸಂಪರ್ಕ ಕೇಂದ್ರಗಳು, ಕೃಷಿ ಉತ್ಪನ್ನ ಮಾರುಕಟ್ಟೆಗಳು, ಜಾನುವಾರು ಸಂತೆಗಳಲ್ಲಿ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಬಿಸಿಲಿನ ಅತೀ ಹೆಚ್ಚು ತಾಪಮಾನದಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟಲು ಸಾಮಾನ್ಯ ನಿಯಮಗಳನ್ನು ಅನುಸರಿಸುವಂತೆ ಜಿಲ್ಲಾಡಳಿತ ತಿಳಿಸಿದೆ. ಸಾಧ್ಯವಾದಷ್ಟು ಮಟ್ಟಿಗೆ ವಿಶೇಷವಾಗಿ ಗರಿಷ್ಠ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. (ಮಧ್ಯಾಹ್ನ ೧೨ ರಿಂದ ೩ ರವರೆಗೆ) ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯಬೇಕು. ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕ, ಛತ್ರಿ, ಟೋಪಿ, ಪಾದರಕ್ಷೆ ಅಥವಾ ಚಪ್ಪಲಿಗಳನ್ನು ಬಳಸಬೇಕು. ಹೊರಗಿನ ಉಷ್ಣತೆಯು ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು. (ಮಧ್ಯಾಹ್ನ ೧೨ ರಿಂದ ೩ ಗಂಟೆಯವರೆಗೆ) ಪ್ರಯಾಣಿಸುವಾಗ ನೀರನ್ನು ಜೊತೆಯಲ್ಲಿ ಒಯ್ಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ನಿಂಬೆ ನೀರು, ಮಜ್ಜಿಗೆ ಇತ್ಯಾದಿ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಒಆರ್‌ಎಸ್ ಅನ್ನು ಬಳಸಬೇಕು.ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು. ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್ ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು ಹಾಗೂ ಆಗಿಂದ್ದಾಗ್ಗೆ ತಣ್ಣೀರು ಸ್ನಾನ ಮಾಡಬೇಕು. ಹೊರಗೆ ಹೋಗುವಾಗ ನೀರಿನ ಬಾಟಲ್, ಛತ್ರಿ, ಟೋಪಿ ಅಥವಾ ಕ್ಯಾಪ್, ಹೆಡ್‌ಕವರ್, ಹ್ಯಾಂಡ್ವವಲ್, ಹ್ಯಾಂಡ್ರಾನ್, ಎಲೆಕ್ಟೋಲೈಟ್, ಗ್ಲೋಕೋಸ್, ಒಆರ್‌ಎಸ್ ಅನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು ತಡೆಗಟ್ಟುವ ಕಿಟ್‌ಗಳನ್ನು ಒಯ್ಯಲು ನಾಗರಿಕರನ್ನು ಪ್ರೋತ್ಸಾಹಿಸಬೇಕು.
ಅತೀ ಹೆಚ್ಚು ತಾಪಮಾನದಿಂದ ಸಾಮಾನ್ಯವಾಗಿ ನಿರ್ಜಲೀಕರಣ, ಶಾಖ ಸೆಳೆತ, ಶಾಖದ ಬಳಲಿಕೆ ಮತ್ತು ಶಾಖದ ಅಘಾತದಂತಹ (ಸನ್‌ಸ್ಟ್ರೋಕ್) ಆರೋಗ್ಯದ ದುಪ್ಟರಿಣಾಮಗಳು ಉಂಟಾಗುವ ಸಾಧ್ಯತೆ ಇದ್ದು, ಅವುಗಳ ರೋಗ ಲಕ್ಷಣಗಳಾದ ಶಾಖ ಸೆಳೆತಗಳು (ಊತ) ಮತ್ತು ಮೂರ್ಛೆ, ಸಾಮಾನ್ಯವಾಗಿ ೩೯ ಡಿಗ್ರಿ ಸೆಲ್ಸಿಯಸ್ ಅಂದರೆ ೧೦೨ ಡಿಗ್ರಿಗಿಂತ ಕಡಿಮೆ ಜ್ವರದಿಂದ ಕೂಡಿರುತ್ತದೆ. ಶಾಖದ ಬಳಲಿಕೆ, ಆಯಾಸ, ದೌರ್ಬಲ್ಯ, ತಲೆ ತಿರುಗುವಿಕೆ, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಮತ್ತು ಬೆವರುವುದು. ಶಾಖಾಘಾತ (ಸನ್‌ಸ್ಟ್ರೋಕ್) ದೇಹದ ಉಷ್ಣತೆಯು ೪೦ ಡಿಗ್ರಿ ಸೆಲ್ಸಿಯಸ್ ಅಂದರೆ ೧೦೪ ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಾಗುವುದು ಹಾಗೂ ಉಸಿರಾಟದಲ್ಲಿ ವ್ಯತ್ಯಯ ಮತ್ತು ಪ್ರಜ್ಞೆ ತಪ್ಪುವುದು.ಅತೀ ಹೆಚ್ಚು ತಾಪಮಾನದಿಂದ ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆಯಾದ ಬಟ್ಟೆಯಿಂದ ಮೈ ಒರಸಬೇಕು. ತಂಪಾದ ಒದ್ದೆ ಬಟ್ಟೆಯನ್ನು ಹಾಕಬೇಕು.ದೇಹದ ಉಷ್ಣತೆ ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕಬೇಕು. ನೀರು ಅಥವಾ ಪುನರ್ಜಲೀಕರಣ ಪಾನೀಯಗಳಾದ ಓಆರ್‌ಎಸ್, ನಿಂಬೆ ಪಾನಕ ನೀಡಬೇಕು. (ವ್ಯಕ್ತಿ ಇನ್ನೂ ಪ್ರಜ್ಞೆ ಹೊಂದಿದ್ದರೆ) ವ್ಯಕ್ತಿಗೆ ತಂಪಾದ ಗಾಳಿಯ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಗಾಗಿ ಬಟ್ಟೆಗಳನ್ನು ಸಡಿಲಗೊಳಿಸಬೇಕು. ರೋಗ ಲಕ್ಷಣಗಳು ಉಲ್ಬಣಗೊಂಡರೆ ಅಥವಾ ದೀರ್ಘಕಾಲದವರೆಗೆ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು. ಮದ್ಯಪಾನ, ಕಾಫಿ, ಶೇಖರಿಸಿದ ಪಾನೀಯ ನೀಡಬಾರದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಡಿಸಿ ಶಿಲ್ಪಾನಾಗ್ ತಿಳಿಸಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಟೈ, ಕೋಟು ತಾತ್ಕಾಲಿಕ ನಿಷೇಧ:ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ತಾಪಮಾನ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ, ಶಾಲಾ ಕಾಲೇಜುಗಳಲ್ಲಿ ಅಗತ್ಯ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಶಾಲಾ ಸಮವಸ್ತ್ರದಲ್ಲಿ ಟೈ ಹಾಗೂ ಕೋಟು ಧರಿಸುವುದರಿಂದ ಮಕ್ಕಳ ಆರೋಗ್ಯದ ಪ್ರತಿಕೂಲ ಪರಿಣಾಮ ಬೀರುವುದರಿಂದ ಟೈ ಹಾಗೂ ಕೋಟು ಧರಿಸುವುದನ್ನು ತಾತ್ಕಾಲಿಕವಾಗಿ ಬೇಸಿಗೆ ಸಮಯ ಮುಗಿಯುವವರೆಗೆ ಕಡ್ಡಾಯಗೊಳಿಸುವ ನಿಯಮವನ್ನು ಸಡಿಲಗೊಳಿಸಬೇಕು. ಬೆಳಗಿನ ಪ್ರಾರ್ಥನೆಯನ್ನು ಹೊರಾಂಗಣದಲ್ಲಿ ನಡೆಸುವುದರ ಬದಲು ಶಾಲಾ ಕೊಠಡಿಯೊಳಗೆ ನಡೆಸಬೇಕು. ಶಾಲೆ, ಕಾಲೇಜುಗಳ ಕೊಠಡಿಯಲ್ಲಿ ಕಡ್ಡಾಯವಾಗಿ ಫ್ಯಾನ್ ಅಳವಡಿಸಬೇಕು. ಮಕ್ಕಳಿಗೆ ಶೌಚಾಲಯಕ್ಕೆ ತೆರಳಿದ ನಂತರ ಹಾಗೂ ಊಟಕ್ಕೂ ಮುಂಚೆ ಕೈಗಳನ್ನು ಸ್ವಚ್ಛಗೊಳಿಸುವಂತೆ ತಿಳುವಳಿಕೆ ನೀಡಬೇಕು. ಶಾಲೆ, ಕಾಲೇಜುಗಳಲ್ಲಿ ಬಳಸುವ ನೀರಿನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಬೇಕು ಹಾಗೂ ಬಳಸಲಾಗುವ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಅಗತ್ಯ ಕ್ರಮವಹಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಔಷಧ ವ್ಯವಸ್ಥೆಯನ್ನು ಕಲ್ಪಿಸಬೇಕು. ಪ್ರಥಮ ಚಿಕಿತ್ಸೆಗೆ ಅವಶ್ಯಕವಿರುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಶಾಲೆ, ಕಾಲೇಜುಗಳಲ್ಲಿ ಮಕ್ಕಳನ್ನು ಬಿಲಿಸಿನ ಸಮಯದಲ್ಲಿ ಆಟದ ಮೈದಾನಕ್ಕೆ ತೆರಳದಂತೆ ನೋಡಿಕೊಳ್ಳಬೇಕು ಎಂದರು.