ಸಾರಾಂಶ
ಕನ್ನಡಪ್ರಭ ವಾರ್ತೆ ಸಾಲಿಗ್ರಾಮಪವಿತ್ರ ಕಾವೇರಿ ನದಿಯಲ್ಲಿ ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶ್ರೀಕೋದಂಡರಾಮನ ತೆಪ್ಪೋತ್ಸವ ನೆರವೇರಿತು.ಇತಿಹಾಸ ಪುರಾಣ ಪ್ರಸಿದ್ಧ ಚುಂಚನಕಟ್ಟೆ ಜಾತ್ರೆ ಮಹೋತ್ಸವ ಹಾಗೂ ಪ್ರಮುಖ ಕೇಂದ್ರಬಿಂದಾಗಿದ್ದ ಶ್ರೀ ಕೋದಂಡರಾಮನ ಬ್ರಹ್ಮರಥೋತ್ಸವ ಮುಗಿದ ಬಳಿಕ ತೆಪ್ಪೋತ್ಸವದ ಹಿನ್ನೆಲೆ ಬೆಳಗ್ಗೆ ಶ್ರೀರಾಮ ಲಕ್ಷ್ಮಣ ಹಾಗೂ ಸೀತೆ ಉತ್ಸವ ಮೂರ್ತಿಗಳಿಗೆ ಪವಿತ್ರ ಕಾವೇರಿ ನದಿಯ ತೀರ್ಥ ದಡದಲ್ಲಿ ಕಾವೇರಿ ನೀರಿನ ಮಜ್ಜನ ಮಾಡಿಸಿ, ವಿಧಿ-ವಿಧಾನಗಳ ಸಕಲ ಧಾರ್ಮಿಕ ಕೈಂ ಕಾರ್ಯಗಳನ್ನು ನಡೆಸಿದ ಅರ್ಚಕ ವೃಂದದವರು ಮೂರ್ತಿಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಮೂರ್ತಿಗಳನ್ನು ದೇಗುಲಕ್ಕೆ ತರಲಾಯಿತು. ತಡರಾತ್ರಿ ದೇವಾಲಯದಲ್ಲಿ ಚಿನ್ನಾಭರಣಗಳಿಂದ ಶೃಂಗಾರಗೊಂಡಿದ್ದ ಉತ್ಸವ ಮೂರ್ತಿಗಳನ್ನು ಮಂಗಳಕರ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಕಾವೇರಿ ನದಿಯ ತೀರ್ಥ ತಡಕ್ಕೆ ತರಲಾಯಿತು. ವಿವಿಧ ಪುಷ್ಪಗಳೊಂದಿಗೆ ಹಾಗೂ ಮ್ಯೂಸಿಕಲ್ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡು ನಳನಳಿಸುತ್ತಿದ್ದ ತೆಪ್ಪದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿ, ಕಾವೇರಿ ನದಿಯ ಮಧ್ಯ ಭಾಗದಲ್ಲಿ ಮೂರು ಸುತ್ತು ಪ್ರದಕ್ಷಿಣೆಯೊಂದಿಗೆ ದೇವರಿಗೆ ಮಹಾ ಮಂಗಳಾರತಿ ಮಾಡುವಾಗ ನೆರೆದಿದ್ದ ಭಕ್ತ ಮಹಾಷೆಯರು ಭಕ್ತಿ ಮೆರೆದು ಜೈ ಶ್ರೀರಾಮ್, ಗೋವಿಂದ.., ಗೋಪಾಲ… ಎಂಬ ಜಯಘೋಷಣೆ ಮೇಳೈಸಿತು. ಗ್ರಾಮ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಆ ದೃಶ್ಯವನ್ನು ಕಂಡು ಕಣ್ತುಂಬಿಕೊಂಡು ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗಾಗಿ ಚಿತ್ತದಲ್ಲೇ ಪ್ರಾರ್ಥಿಸಿದರು, ತಹಸೀಲ್ದಾರ್ ಎನ್.ಎಸ್. ನರಗುಂದ, ಉಪ ತಹಸೀಲ್ದಾರ್ ಶರತ್ ಕುಮಾರ್, ಪಿಡಿಒ ರಾಜೇಶ್, ದೇವಾಲಯದ ಇಒ ರಘು, ಅಗ್ನಿಶಾಮಕ ಅಧಿಕಾರಿಗಳು, ಪಾರುಪತ್ತೆದಾರು ಯತಿರಾಜು, ಪವನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಪುನೀತ್, ಕೃಷ್ಣ, ಮಣಿ, ಹರ್ಷಿತ್, ಭರತ್, ಮನೋಜ್, ರಘು, ಸಿಬ್ಬಂದಿಗಳಾದ ಶಿವಣ್ಣ, ತಿಮ್ಮಣ್ಣ, ಚಂದ್ರಣ್ಣ, ಮನೋಜ್, ಮಣಿ, ಹರೀಶ, ಕಮಲ ಕೃಷ್ಣ, ಅರ್ಚಕ ವೃಂದ, ಭಕ್ತರು ಆಗಮಿಸಿದ್ದರು.