ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಳಿವಿನ ಅಂಚಿನಲ್ಲಿದ್ದ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಮರುಮುದ್ರಣಗೊಳಿಸಿ ಅವುಗಳಿಗೆ ಮರುಜೀವ ಕೊಟ್ಟವರು ಡಾ. ಫ.ಗು. ಹಳಕಟ್ಟಿ ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಂ. ಹೇಳಿದರು.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಫ.ಗು. ಹಳಕಟ್ಟಿ ಜನ್ಮದಿನದ ನಿಮಿತ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಚನ ಸಾಹಿತ್ಯ ಕ್ಷೇತ್ರದಲ್ಲಿ ಕೇವಲ 50 ಜನ ಇದ್ದರು. 250 ವಚನಕಾರರನ್ನು ಗುರುತಿಸಿ ಅವರೆಲ್ಲರ ವಚನಗಳನ್ನು ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ ಮಾತನಾಡಿ, ಹಳಕಟ್ಟಿಯವರು ಕೇವಲ ವಚನ ಸಾಹಿತ್ಯ ಸಂಗ್ರಹಿಸುವ ಕಾರ್ಯವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ. ಬಡತನದ ಜೀವನದಲ್ಲಿಯೇ 10 ಸಾವಿರ ವಚನಗಳನ್ನು ಮರುಮುದ್ರಣ ಮಾಡಿದ ಕೀರ್ತಿ ಅವರದ್ದಾಗಿದೆ. ಮಕ್ಕಳು ಮೊಬೈಲ್‌ಗಳ ದಾಸರಾಗದೇ ಹಳಕಟ್ಟಿಯವರು ಸಂಗ್ರಹಿಸಿದ ವಚನ ಸಾಹಿತ್ಯದ ಪುಸ್ತಕಗಳನ್ನು ಓದುವ ಮೂಲಕ ದೇಶದ ಭವಿಷ್ಯ ರೂಪಿಸುವಂತವರಾಗಬೇಕು ಎಂದು ತಿಳಿಸಿದರು.ಸಮುದಾಯದ ಮುಖಂಡರಾದ ಡಾ.ಎಂ.ಎಸ್. ದಡ್ಡೇನವರ ಮಾತನಾಡಿ, ಫ.ಗು. ಹಳಕಟ್ಟಿಯವರು ಬಡತನದಲ್ಲಿದ್ದರೂ ಅಂದಿನ ಕಾಲದಲ್ಲಿ ವಕೀಲರಾಗಿದ್ದರು. ಮುದ್ರಣ ರಂಗ, ಪತ್ರಿಕಾರಂಗ, ಸಹಕಾರಿ ರಂಗ ಹಾಗೂ ಸಾಹಿತ್ಯ ರಂಗಗಳಲ್ಲದೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದರ ಫಲವಾಗಿ ಇಂದು ವಿಜಯಪುರ ಬಿ.ಎಲ್.ಡಿ.ಇ ಹಾಗೂ ಭೂತನಾಳ ಕೆರೆ, ಸಿದ್ದೇಶ್ವರ ಬ್ಯಾಂಕ್ ತಲೆ ಬೃಹದಾಕಾರವಾಗಿ ಬೆಳೆದು ನಿಂತಿವೆ ಎಂದರು. ಮುಖಂಡರಾದ ಶ್ರೀನಿವಾಸ ಬಳ್ಳಾರಿ ಅವರು ಹಳಕಟ್ಟಿಯವರು ಸಮಾಜಕ್ಕೆ ನೀಡಿದ ಆದರ್ಶ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಮಹಾದೇವ ಬಸರಕೋಡ ಮಾತನಾಡಿ, ಸಾಮಾನ್ಯ ಮನೆತನದಿಂದ ಬಂದ ವ್ಯಕ್ತಿ ಬಹುದೊಡ್ಡ ಶಕ್ತಿಯಾಗಿ ಬೆಳೆಯಲು ವಚನ ಸಾಹಿತ್ಯವನ್ನು ಹೊರ ತೆಗೆದು ಪ್ರಚಲಿತಗೊಳಿಸುವಲ್ಲಿ ಅಪರೂಪದ ಕಾಯಕ ಮಾಡಿದವರ ಹಳಕಟ್ಟಿಯವರು. ವಚನ ಸಾಹಿತ್ಯ ರಕ್ಷಿಸುವ ಕಾರ್ಯ ಮಾಡದೇ ಇದ್ದಲ್ಲಿ ಇಂದು ನಾವು ಯಾವ ವಚನಗಳನ್ನು ಕಾಣುತ್ತಿರಲಿಲ್ಲ. ವಚನದ ಸಾಹಿತ್ಯ ಬೇರೆ ಬೇರೆ ರಾಷ್ಟ್ರಗಳಲ್ಲಿ ಪ್ರಸಿದ್ದಿಗೊಂಡಿದ್ದನ್ನು ನೋಡಿದಾಗ ಇದಕ್ಕೆ ಪ್ರೇರಣೆಯಾದ ವ್ಯಕ್ತಿ ಹಳಕಟ್ಟಿ ಎಂದು ಅಭಿಪ್ರಾಯಪಟ್ಟರು.ಡಾ.ಫ.ಗು. ಹಳಕಟ್ಟಿ ಅವರ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪ ಪ್ರಾಚಾರ್ಯ ಗಿರಿಹಾ ನಡುವಿನಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಜಯಪುರದಲ್ಲಿ ನೆಲೆ ಊರಿದ ಹಳಕಟ್ಟಿಯವರು ನಶಿಸಿ ಹೋಗುತ್ತಿರುವ ವಚನ ಸಾಹಿತ್ಯಕ್ಕೆ ಮರುಜೀವ ತುಂಬುವ ನಿಟ್ಟಿನಲ್ಲಿ ತಮ್ಮ ಆಸ್ತಿ ಮಾರಿ ಸ್ವಂತ ಮುದ್ರಣಾಲಯ ಪ್ರಾರಂಭಿಸಿದರು. ಪ್ರಥಮ ಕನ್ನಡ ಶಾಲೆ ಹಾಗೂ ಮಹಿಳೆಯರಿಗಾಗಿಯೇ ಪ್ರತ್ಯೇಕ ಶಾಲೆ ಪ್ರಾರಂಭಿಸಲು ಕಾರಣೀಭೂತರಾದವರು. ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆ, ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದರು.ಬೂತನಾಳ ಕೆರೆ ಸಹ ನಿರ್ಮಾಣ ಮಾಡಿದವರು ಹಳಕಟ್ಟಿಯವರು.
- ಸಂಗಪ್ಪ ಎಂ. ಜಿಲ್ಲಾಧಿಕಾರಿ