ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕನ್ನಡ ಸಾಹಿತ್ಯ ಪರಂಪರೆಗೆ ದೊಡ್ಡ ಕೊಡುಗೆಯಾದ ವಚನಗಳನ್ನು ಸಂರಕ್ಷಿಸುವ ಜೊತೆಗೆ ಕನ್ನಡ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ಡಾ.ಫ.ಗು.ಹಳಕಟ್ಟಿಯವರ ಮೌಲ್ಯಗಳನ್ನು ನಾವು ಅಳವಡಿಸಿಕೊಂಡಲ್ಲಿ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಶಿವಮೊಗ್ಗ ಬಸವ ಕೇಂದ್ರ ಡಾ.ಶ್ರೀ ಬಸವ ಮರಳಸಿದ್ದ ಸ್ವಾಮೀಜಿ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿರವರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಸಂರಕ್ಷಣೆ ಮೂಲಕ ಕನ್ನಡದ ಅಸ್ಮಿತೆ ಕಾಪಾಡಿರುವ ಹಳಕಟ್ಟಿಯವರು ಅತ್ಯಂತ ಮೌಲಿಕವಾದ ಜೀವನ ನಡೆಸಿದ್ದಾರೆ. ಮಹಾಕಾವ್ಯಗಳು, ರಗಳೆ ಚಂಪೂ ಕಾವ್ಯ, ಇತರೆ ವಿವಿಧ ಪ್ರಾಕಾರದ ಕಾವ್ಯಗಳಿಗೆ ಸೀಮಿತವಾಗಿದ್ದ ಸಮಯದಲ್ಲಿ ಸಾಮಾನ್ಯ ಜನತೆಗೆ ಅರ್ಥವಾಗುವಂತೆ ರಚಿಸಲಾದ ವಚನಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ತಿರುವನ್ನು ನೀಡಿತು. ಇಂತಹ ವಚನ ಸಾಹಿತ್ಯವನ್ನು ಸಂರಕ್ಷಿಸುವ ಕೆಲಸವನ್ನು ಮಾಡುವಲ್ಲಿ ನಾಲ್ಕನೇ ಕಾಲಘಟ್ಟಕ್ಕೆ ಸೇರಿದ ಫ.ಗು.ಹಳಕಟ್ಟಿಯವರ ಪಾತ್ರ ಮತ್ತು ಸಾಧನೆ ಅಸಾಧಾರಣವಾಗಿದೆ ಎಂದರು.ಅವರು ಆರಂಭಿಸಿದ ಶಿವಾನುಭವ ಪತ್ರಿಕೆ ಬಹಳ ದೊಡ್ಡ ವಿದ್ವಾಂಸರಿಗೆ ಸಂಶೋಧನೆಗೆ ವೇದಿಕೆ ಕಲ್ಪಿಸಿಕೊಟ್ಟಿತು. ಕನ್ನಡಿಗರನ್ನು ಸಂಘಟಿಸಲು, ಕರ್ನಾಟಕ ಏಕೀಕರಣಕ್ಕಾಗಿ ನವ ಕರ್ನಾಟಕ ವಾರಪತ್ರಿಕೆ ಆರಂಭಿಸಿ, ನಾಡು ಕಟ್ಟುವ ಮತ್ತು ಕನ್ನಡ ಭಾಷಾ ಸಂಸ್ಕೃತಿ ಉಳಿಸುವ ಎರಡೂ ಕೆಲಸಗಳನ್ನು ಮಾಡುತ್ತಾರೆ. ಪ್ರತಿಭಾವಂತ ವಕೀಲರಾಗಿದ್ದ ಹಳಕಟ್ಟಿಯವರು ದೂರದೃಷ್ಟಿವುಳ್ಳವರಾಗಿದ್ದರು. ಅವರ ಸೇವೆಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತದೆ. ರಾವ್ ಬಹದ್ದೂರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಬಿಎಲ್‌ಡಿಇಎ ಸಂಸ್ಥೆ ಇವರ ಅಧ್ಯಯನ ಪೀಠ, ಸಂಗ್ರಹಾಲಯ, ಮತ್ತು ಇವರ ಸಮಗ್ರ ಸಾಹಿತ್ಯ ಪ್ರಕಟಿಸಿದೆ ಎಂದು ತಿಳಿಸಿದರು.
ಈ ಹಿಂದೆ ಸರ್ಕಾರ 22 ಸಾವಿರ ವಚನಗಳನ್ನು 15 ಸಂಪುಟಗಳಲ್ಲಿ ಮುದ್ರಿಸಿತ್ತು. ನಂತರ ಕೇವಲ 2 ಸಂಪುಟಗಳಲ್ಲಿ ಮುದ್ರಿಸಿ ಕಡಿಮೆ ಬೆಲೆಯಲ್ಲಿ ನೀಡಿದೆ. ಅಪರೂಪದ ಸಾಹಿತ್ಯವಾದ ವಚನಗಳನ್ನು ನಾವೆಲ್ಲ ಓದಿ, ಅಳವಡಿಸಿಕೊಂಡು ಉಳಿಸಿಕೊಂಡು ಹೋಗಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಮಾತನಾಡಿ, ಡಾ.ಫ.ಗು.ಹಳಕಟ್ಟಿರವರು ಕಷ್ಟಪಟ್ಟು ವಚನಗಳನ್ನು ಸಂಗ್ರಹಿಸಿದ್ದರಿಂದ ಇಷ್ಟೊಂದು ವಚನಗಳು ನಮಗೆ ಓದಲು, ಅಧ್ಯಯನ ಮಾಡಲು ಲಭ್ಯವಿದೆ. ಇಂತಹ ಮಹಾನ್ ಸಾಧನೆ ಮಾಡಿದ ಮಹನೀಯರ ಜನ್ಮ ದಿನಾಚರಣೆಯನ್ನು ನಾವೆಲ್ಲ ಅರ್ಥಪೂರ್ಣವಾಗಿ ಆಚರಿಸಿ ಅವರ ಹಾದಿಯಲ್ಲಿ ನಡೆಯೋಣವೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಮಾತನಾಡಿದರು.ಹೊಸನಗರ ತಾಲೂಕಿನ ಮೂಲಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಉಮೇಶ್, ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಹಾಜರಿದ್ದರು.
ಅಂದಿನ ಕಾಲದಲ್ಲಿ ವಚನ ಸಾಹಿತ್ಯ ಸಂಗ್ರಹ ಕಾರ್ಯ ಸುಲಭದ್ದಾಗಿರಲಿಲ್ಲ. ತಾಳೆಗರಿಯಲ್ಲಿನ ವಚನಗಳನ್ನು ಮನೆ ಮನೆಗಳಿಗೆ ತೆರಳಿ ಸಂಗ್ರಹಿಸುತ್ತಿದ್ದರು. ಕಾಲಾನುಕ್ರಮದಲ್ಲಿ ಜನರು ಇವನ್ನು ದೇವರ ಕೋಣೆಯಲ್ಲಿರಿಸಿ ಪೂಜೆ ಮಾಡಲು ಶುರು ಮಾಡಿದ್ದರು. ಮೌಢ್ಯತೆಯೆಡೆಗೆ ತಿರುಗಿ ಜ್ಞಾನಭಂಡಾರ ವಿನಾಶದ ಕಡೆ ಹೋಗುವ ಸಂದರ್ಭದಲ್ಲಿ ಚದುರಿ ಹೋಗಿದ್ದ ವಚನಗಳನ್ನು ರಕ್ಷಣೆ ಮಾಡಲು ಡಾ.ಫ.ಗು.ಹಳಕಟ್ಟಿಯವರು ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಡಾ.ಶ್ರೀ ಬಸವ ಮರಳಸಿದ್ದ ಸ್ವಾಮೀಜಿ ತಿಳಿಸಿದರು.ಹಿಂದೆ ಪ್ರಿಂಟಿಂಗ್ ಪ್ರೆಸ್ ವ್ಯವಸ್ಥೆ ತೀರಾ ವಿರಳವಾಗಿದ್ದು, ಮಂಗಳೂರಿನಲ್ಲಿದ್ದ ಬಾಸೆಲ್ ಮಿಷನ್‌ನವರು ವಚನಗಳನ್ನು ಮುದ್ರಿಸದೇ ಇದ್ದಾಗ ತಮ್ಮ ಮನೆಯನ್ನು ಮಾರಾಟ ಮಾಡಿ ‘ಹಿತ ಚಿಂತಕ’ ಮುದ್ರಣಾಲಯ ಸ್ಥಾಪಿಸಿ ಸಂಪುಟಗಳನ್ನು ಮುದ್ರಿಸುತ್ತಾರೆ.
ಸಂಗ್ರಹ, ಮುದ್ರಣಕ್ಕೂ ಮುನ್ನ ಕೇವಲ 50 ರಿಂದ 60 ವಚನಗಳು ಮಾತ್ರ ಲಭ್ಯವಿದ್ದು, ವಚನ ಸಂಗ್ರಹ ಸಾರ ಸಂಪುಟಗಳಲ್ಲಿ 22 ಸಾವಿರಕ್ಕೂ ಹೆಚ್ಚು ವಚನಗಳನ್ನು ಮುದ್ರಿಸಿದರು. ಹಿಂದೆ ಹಲವಾರು ವಿರಕ್ತರು ಮಾಡಿದ ಕೆಲಸವನ್ನು ಇವರೊಬ್ಬರೇ ಮಾಡುತ್ತಾರೆ. ಸಮುದ್ರಕ್ಕಿರುವ ಶಕ್ತಿ ಅವರೊಬ್ಬರಲ್ಲಿತ್ತು ಎಂದರು.