ತಡವಾಗಿಯಾದರೂ ಮಾಲಿನ್ಯ ಮಾಡುತ್ತಿರುವ ಕಾರ್ಖಾನೆ ಮುಚ್ಚುತ್ತಿರುವದನ್ನು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಸ್ವಾಗತಿಸುತ್ತದೆ

ಕೊಪ್ಪಳ: ಎರಡು ಕಾರ್ಖಾನೆ ಮುಚ್ಚಿದ್ದು ಸ್ವಾಗತರ್ಹವಾದರೂ ಇದು ತೋರಿಕೆಗೆ ಆಗದೆ ಇತರೆ ಕಾರ್ಖಾನೆಗಳ ಮೇಲೂ ಕ್ರಮವಾಗಬೇಕು ಎಂದು ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರಸಭೆ ಆವರಣದಲ್ಲಿ ಬಲ್ಡೋಟ್‌ ತೊಲಗಿಸಿ, ಕೊಪ್ಪಳ-ಭಾಗ್ಯನಗರ ಉಳಿಸಿ 203ನೇ ದಿನದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಕಾರ್ಖಾನೆ ಮಾಲಿನ್ಯದಿಂದ ಬಾಧಿತವಾದ ಹಿರೇಬಗನಾಳ ಗ್ರಾಮದಲ್ಲಿ ಸಂತ್ರಸ್ತರ ಬಹಿರಂಗ ಸಭೆ ನಡೆಸಿ ಮಾಲಿನ್ಯ ನಿಯಂತ್ರಣ ಮಾಡದ ಸ್ಪಾಂಜ್ ಐರನ್ ಘಟಕಗಳ ಮೇಲೆ ಪರಿಶೋಧನಾ ವರದಿ ಮಾಡಿಸಿದ್ದೇನೆ.ಐದು ಕಾರ್ಖಾನೆಗಳಿಗೆ ಎನ್.ಪಿ.ಡಿ ಸೂಚನಾ ಪತ್ರ ಕೊಡಲಾಗಿದೆ. ಆ ಕಾರ್ಖಾನೆ ಎಂತಹದ್ದೇ ದೊಡ್ಡ ವ್ಯಕ್ತಿಗಳದ್ದಾದರೂ ಅದರ ಮೇಲೆ ಕ್ರಮ ಜರುಗಿಸುತ್ತೇನೆ ಎಂದಿದ್ದರು. ಈಗ ತಡವಾಗಿಯಾದರೂ ಮಾಲಿನ್ಯ ಮಾಡುತ್ತಿರುವ ಕಾರ್ಖಾನೆ ಮುಚ್ಚುತ್ತಿರುವದನ್ನು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಸ್ವಾಗತಿಸುತ್ತದೆ. ಆದರೆ ಅವರು ಅಂದುಕೊಂಡ ಐದರಲ್ಲಿ ಹೊಸಪೇಟೆ ಇಸ್ಪಾತ್ ಮೂರು ವರ್ಷಗಳ ಮುಂಚೆಯೇ ತನ್ನ ಕಾರ್ಯಾಚರಣೆ ನಿಲ್ಲಿಸಿದೆ. ಇಷ್ಟು ತಡವಾಗಿ ಮುಚ್ಚುವ ಆದೇಶ ಮಾಡಿದ್ದು, ಯಾಕೆಂದು ಗೊತ್ತಾಗಿಲ್ಲ. ಇಂದು ಬೀಗಮುದ್ರೆ ಮಾಡಿದ ಪಿಬಿಎಸ್ ಪವರ್ ಆಂಡ್ ಸ್ಟೀಲ್ ಕಾರ್ಖಾನೆ ಜತೆಗೆ ಹೊಸಪೇಟೆ ಶಾಸಕ ಎಚ್.ಆರ್.ಗವಿಯಪ್ಪ ಮಾಲಿಕತ್ವದ ಎಚ್.ಆರ್.ಜಿ.ಅಲಾಯ್ಸ್, ವನ್ಯಾ ಸ್ಟೀಲ್ ಅಷ್ಟೇ ಅಲ್ಲ, ತನುಷ್, ಠಾಕೂರ್, ಐಎಲ್ಸಿ, ಎಸ್.ಕೆ.ಸೂಪರ್ ಸ್ಟೀಲ್, ಕೆಪಿಆರ್ ಆಗ್ರೋ ಕೆಮ್, ಭದ್ರಶ್ರೀ ಸ್ಟೀಲ್, ಬಾಬಾ ಅಖಿಲ್ ಸಾಯಿಜ್ಯೋತಿ, ಎಕ್ಸಿಂಡಿಯಾ ಮತ್ತು ಕೊಪ್ಪಳ ಶೇ.40 ಭಾಗ ಮಾಲಿನ್ಯ ಮಾಡುತ್ತಿರುವ ಬಲ್ಡೋಟ ಎಂ.ಎಸ್.ಪಿ.ಎಲ್ ಪೆಲ್ಲೆಟ್ ಘಟಕ, ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ಕೂಡ ಶಾಶ್ವತವಾಗಿ ಬಂದ್ ಆಗಬೇಕಿದೆ. ಅಂದಾಗ ಮಾತ್ರ ಇಲ್ಲಿನ ಜನರ ಆರೋಗ್ಯ, ಜೀವ ಉಳಿಯುತ್ತದೆ. ಇಲ್ಲದೆ ಇದ್ದರೆ ನಿತ್ಯದ ಗೋಳು ಈ ಜನರಿಗೆ ತಪ್ಪುವುದಿಲ್ಲ ಎಂದರು.

ಧರಣಿಯಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಮುಖಂಡ ವೆಂಕಟೇಶ ನಾಯಕ ಅಸ್ಕಿಹಾಳ, ಸಂಚಾಲಕ ಮಲ್ಲಿಕಾರ್ಜುನ ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ನಾಗೇಶ ನಾಯಕ ಉಂಡ್ರಾಳದೊಡ್ಡಿ, ರಮೇಶ ಡಂಬ್ರಳ್ಳಿ ಕುಣಿಕೇರಿ, ಸುದರ್ಶನ ಬಾಪೂರ, ಗಣೇಶ ನಾಯಕ, ಮಹಾಂತೇಶ ಕೊತಬಾಳ, ಮಹಾದೇವಪ್ಪ ಮಾವಿನಮಡು, ಡಾ. ಬಸವರಾಜ ಪೂಜಾರ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಬಾವಿ, ಶಿವಾನಂದಯ್ಯ ಬೀಳಗಿಮಠ, ಈರಪ್ಪ ಮೇಟಿ, ರೇಣುಕಮ್ಮ ಹೊಸಮನಿ, ಕಲ್ಲಮ್ಮ ಗೌಡ್ರ, ಭರಮಗೌಡ ಗದ್ದಿಗೌಡ್ರ, ವೈ,ಸತ್ಯನಾರಾಯಣ, ಶಿವಪ್ಪ ಜಲ್ಲಿ, ಮಖಬೂಲ್ ರಾಯಚೂರು ಮುಂತಾದವರು ಇದ್ದರು.