ಸಾರಾಂಶ
ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಯಿಂದ ಸುಮಾರು 12ರಿಂದ 14 ಲಕ್ಷ ಮಂದಿ ಬರುವ ನಿರೀಕ್ಷೆ ಇದ್ದು, ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ನಗರದೆಲ್ಲೆಡೆ 14 ಚೆಕ್ ಪೋಸ್ಟ್ ಗಳ ಹಾಕಲಾಗಿದ್ದು, ನಗರದಲ್ಲಿ ಅವಶ್ಯಕತೆ ಇರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಸಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಜಾತ್ರೆ ನಡೆಯಲಿದೆ. ದೇವಸ್ಥಾನ ಸುತ್ತಮುತ್ತ ಪ್ರಾಣಿ ಬಲಿ ನಿಷೇಧಿಸಲಾಗಿದ್ದು, ಯಾವುದೇ ಅಹಿತರ ಘಟನೆ ನಡೆದರೆ ಕ್ರಮ ಕೈಗೊಳ್ಳಲು ಪೊಲೀಸರ ಬಂದೋಬಸ್ತ್ ಒದಗಿಸಲಾಗಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಧ್ಯ ಕರ್ನಾಟಕದ ದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿಯಾದ ಶ್ರೀ ದುರ್ಗಾಂಬಿಕಾ ಜಾತ್ರಾ ಮಹೋತ್ಸವ ಹಿನ್ನೆಲೆ ದೇವಸ್ಥಾನಕ್ಕೆ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ಭದ್ರತೆ ಕುರಿತು ಪರಿಶೀಲನೆ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಯಿಂದ ಸುಮಾರು 12ರಿಂದ 14 ಲಕ್ಷ ಮಂದಿ ಬರುವ ನಿರೀಕ್ಷೆ ಇದ್ದು, ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ನಗರದೆಲ್ಲೆಡೆ 14 ಚೆಕ್ ಪೋಸ್ಟ್ ಗಳ ಹಾಕಲಾಗಿದ್ದು, ನಗರದಲ್ಲಿ ಅವಶ್ಯಕತೆ ಇರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಸಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಜಾತ್ರೆ ನಡೆಯಲಿದೆ. ದೇವಸ್ಥಾನ ಸುತ್ತಮುತ್ತ ಪ್ರಾಣಿ ಬಲಿ ನಿಷೇಧಿಸಲಾಗಿದ್ದು, ಯಾವುದೇ ಅಹಿತರ ಘಟನೆ ನಡೆದರೆ ಕ್ರಮ ಕೈಗೊಳ್ಳಲು ಪೊಲೀಸರ ಬಂದೋಬಸ್ತ್ ಒದಗಿಸಲಾಗಿದೆ ಎಂದರು.
ಟ್ರಾಫಿಕ್ ಕುರಿತು ನಿಗದಿತ ಸ್ಥಳಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು, ಕೆಲವು ರಸ್ತೆಗಳನ್ನು ಒನ್ ವೇ ಮಾಡಲಾಗಿದೆ, ಇನ್ನು ಕೆಲವು ರಸ್ತೆಗಳಲ್ಲಿ ಸಂಚರಿಸುವುದು ನಿರ್ಬಂಧಿಸಲಾಗಿದೆ. ಮೂಢ ನಂಬಿಕೆಗಳಿಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಅರೆಬೆತ್ತಲೆ ಸೇವೆ ದೇವಸ್ಥಾನ ಸುತ್ತ ಮುತ್ತ ನಿಷೇಧಿಸಲಾಗಿದೆ ಎಂದರು.ದೇವಸ್ಥಾನ ಧರ್ಮದರ್ಶಿ ಗೌಡರ ಚನ್ನಬಸಪ್ಪ ಮಾತನಾಡಿ, ಸಾರು ಹಾಕುವ ಕಾರ್ಯಕ್ರಮ ಮುಗಿದಿದ್ದು, ಮಾ. 19 ಮತ್ತು 20ರಂದು ಹಬ್ಬ ವಿಜೃಂಭಣೆಯಿಂದ ನಡೆಯಲಿದೆ. ಬಂದಂತಹ ಭಕ್ತಾಧಿಗಳಿಗೆ ದರ್ಶನ ವ್ಯವಸ್ಥೆ, ನೀರಿನ ವ್ಯವಸ್ಥೆ ಸೇರಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.