ಫೇಕ್ ಕರೆ ಮಾಡ್ಸಿ ಪ್ರಿಯಾಂಕ್‌ ನಾಟಕ: ರೇಣುಕಾಚಾರ್ಯ

| Published : Oct 15 2025, 02:06 AM IST

ಸಾರಾಂಶ

ಆರೆಸ್ಸೆಸ್‌ ಬಗ್ಗೆ ಮಾತನಾಡಿದ್ದಕ್ಕೆ ಬೆದರಿಕೆ ಕರೆ ಬರುತ್ತಿವೆಯೆಂದು ನಿಮಗೆ ನೀವೇ ಫೇಕ್‌ ಕರೆಗಳನ್ನು ಮಾಡಿಸಿ, ಪೋಸ್ಟ್‌ಗಳನ್ನು ಹಾಕಿಸಿಕೊಂಡು ಕಪಟ ನಾಟಕ ಮಾಡಬೇಡಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಆರೆಸ್ಸೆಸ್‌ ಬಗ್ಗೆ ಮಾತನಾಡಿದ್ದಕ್ಕೆ ಬೆದರಿಕೆ ಕರೆ ಬರುತ್ತಿವೆಯೆಂದು ನಿಮಗೆ ನೀವೇ ಫೇಕ್‌ ಕರೆಗಳನ್ನು ಮಾಡಿಸಿ, ಪೋಸ್ಟ್‌ಗಳನ್ನು ಹಾಕಿಸಿಕೊಂಡು ಕಪಟ ನಾಟಕ ಮಾಡಬೇಡಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಪ್ರಿಯಾಂಕ್‌ ಖರ್ಗೆಗೆ ಯಾವುದೇ ಬೆದರಿಕೆ ಕರೆಗಳೂ ಬರುತ್ತಿಲ್ಲ. ಗುಲ್ಬರ್ಗಾದಲ್ಲಿ ಯಾವ ವ್ಯಕ್ತಿಗಳ ಮೇಲೆ ಕೇಸ್, ಏನೇನೆಲ್ಲಾ ಹಾಕಿದ್ದೀರೋ ನಮಗೂ ಗೊತ್ತಿದೆ ಎಂದರು.

ನಿಮ್ಮದು ಗೂಂಡಾಗಾರಿ ಸಂಸ್ಕೃತಿ. ಗೂಂಡಾ ರಾಜ್ಯ ನಿಮ್ಮದು. ಒಂದು ರೀತಿ ಗುಲ್ಬರ್ಗಾ ಭಾಗವೆಂದರೆ ಗೂಂಡಾ ರಾಜ್ ಮಾಡಲು ಹೊರಟಿದ್ದೀರಿ. ಇದೆಲ್ಲಾ ನಡೆಯುವುದಿಲ್ಲ. ಇದರ ಬದಲಿಗೆ ನಿಮಗೆ ಕೊಟ್ಟ ಇಲಾಖೆ ಕೆಲಸ ಮಾಡಿ, ರಾಜ್ಯದಲ್ಲಿ ಅಭಿವೃದ್ಧಿ ಮಾಡಿ ತೋರಿಸಿ ಎಂದು ಸಲಹೆ ನೀಡಿದರು.

ಅನಗತ್ಯವಾಗಿ ಸಂಘ ಪರಿವಾರದ ಬಗ್ಗೆ ಮಾತನಾಡಬೇಡಿ. ಸಂಘ ಪರಿವಾರ ದೇಶಭಕ್ತ ಸಂಸ್ಥೆಯಾಗಿದ್ದು, ಸಾಮರಸ್ಯವೂ ಗೊತ್ತು, ಸಂಘರ್ಷವೂ ಗೊತ್ತು. ಸಂಘ ಯಾರಿ ಗೂ ಅವಮಾನಿಸುವುದಿಲ್ಲ. ಸಂಘದ ಬಗ್ಗೆ ಹಗುರು ಹೇಳಿಕೆ ನೀಡಿದರೆ ಸಹಿಸುವುದಿಲ್ಲ. ಸಂಘದ ಬಗ್ಗೆ ಹೇಳಿಕೆ ನೀಡುತ್ತಿರುವವರಿಗೆ ಇದು ಎಚ್ಚರಿಕೆಯಾಗಿದೆ. ಸಂಘದಡಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಎಬಿವಿಪಿ ಹೀಗೆ ಅನೇಕ ಅಂಗ ಸಂಸ್ಥೆಗಳಿವೆ. ಸಂಘವು ಯಾವತ್ತೂ ಒಬ್ಬ ವ್ಯಕ್ತಿ ಪರ ನಿಲ್ಲುವುದಿಲ್ಲ. ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಡುತ್ತ ಬಂದ ಸಂಸ್ಥೆ ಎಂದು ಹೇಳಿದರು.

ಸಂಘದ ವಿರುದ್ಧ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೀರಾ? ನಿಮಗೆ ಅಧಿಕಾರವಿದ್ದರೆ ಸಂಘವನ್ನೇ ಬ್ಯಾನ್ ಮಾಡುತ್ತಿದ್ದೆ ಅಂತೀರಾ. ಹಿರಿಯ ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್‌ ಸಂಘವನ್ನು ತಾಲಿಬಾನ್ ಸಂಸ್ಕೃತಿಗೆ ಹೋಲಿಸಿದ್ದಾರೆ. ನಾಚಿಕೆ ಆಗುವುದಿಲ್ಲವಾ ನಿಮಗೆಲ್ಲಾ? ದಿನೇಶ್‌ ಗುಂಡೂರಾವ್, ಸಂತೋಷ್‌ ಲಾಡ್ ಸಹ ಇಂತಹವರಿಗೆ ಧ್ವನಿಗೂಡಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಹಗುರ ಮಾತನಾಡುತ್ತಾರೆ ಎಂದು ಹರಿಹಾಯ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಒಬ್ಬ ಅಲ್ಪಸಂಖ್ಯಾತನು ಶಾಲೆಯನ್ನೇ ತನ್ನ ಮನೆಯಾಗಿ ಮಾಡಿಕೊಂಡಿದ್ದಾನೆ. ಮಚ್ಚು, ತಲವಾರ್‌, ಚಾಕು, ಚೂರಿ, ಚೈನ್ ಸಂಸ್ಕೃತಿಯ ಕೆಲ ದೇಶದ್ರೋಹಿಗಳಿದ್ದಾರೆ. ಹುಬ್ಬಳ್ಳಿಯ ಠಾಣೆ, ಚನ್ನಗಿರಿ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ, ದಾಳಿ ಮಾಡಿದ್ದು, ಮೈಸೂರು ಉದಯಗಿರೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ ದುಷ್ಕರ್ಮಿಗಳ ಮೇಲಿನ ಕೇಸ್ ಹಿಂಪಡೆಯುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತದೆ ಎಂದು ಆರೋಪಿಸಿದರು.

ಸಿದ್ದುಗೆ ಓವರ್ ಟೇಕ್‌, ಪ್ರಿಯಾಂಕ್ ಸೂಪರ್ ಸಿಎಂ!

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಪುತ್ರನೆಂಬ ಕಾರಣಕ್ಕೆ ಪ್ರಭಾವಿ ಖಾತೆ ಸಚಿವರಾದ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಓವರ್ ಟೇಕ್ ಮಾಡಿ, ಎಲ್ಲಾ ಇಲಾಖೆಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಂಘ ಪರಿವಾರ, ಪ್ರಧಾನಿ ನರೇಂದ್ರ ಮೋದಿಗೆ ಟೀಕಿಸುವುದೇ ಪ್ರಿಯಾಂಕ ಖರ್ಗೆ ಕಾಯಕವಾಗಿದೆ. ಯಡಿಯೂರಪ್ಪ ಹಿಂದೆ ಸಿಎಂ ಆಗಿದ್ದಾಗ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಯೋಜನೆ, ಅನುದಾನ ನೀಡಿದ್ದರು. ಪ್ರಿಯಾಂಕ್‌ ಖರ್ಗೆ ಮೊದಲು ಆ ಭಾಗದಲ್ಲಿ ಶಾಲಾ-ಕಾಲೇಜು-ಆಸ್ಪತ್ರೆಗಳಿಗೆ ಕಾಯಕಲ್ಪ ನೀಡಲು ಗಮನ ಹರಿಸಲಿ ಎಂದು ರೇಣುಕಾಚಾರ್ಯ ಅಣಕವಾಡಿದರು.

ನ.26ಕ್ಕೆ ಕಾಂಗ್ರೆಸ್‌ನಲ್ಲಿ ಕ್ರಾಂತಿ, ಮತ್ತೆ ಭ‍ವಿಷ್ಯ

ಈಗಾಗಲೇ ಸಿಎಂ ನೀಡಿದ ಡಿನ್ನರ್ ಪಾರ್ಟಿಯಲ್ಲೇ ಕೆಲವರ ಮುಹೂರ್ತ ಫಿಕ್ಸ್ ಆಗಿದ್ದು, ಅದನ್ನು ಡೈವರ್ಟ್ ಮಾಡಲು ಸಂಘದ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ನ.26 ಎಂಬುದನ್ನು ಬರೆದಿಟ್ಟುಕೊಳ್ಳಿ. ಅಲ್ಲಿರವರೆಗೆ ಮಾತ್ರ ಕಾಂಗ್ರೆಸ್ ಸರ್ಕಾರ ಇರುತ್ತದೆ. ನಂತರ ಕಾಂಗ್ರೆಸ್ಸಿನಲ್ಲಿ ಕ್ರಾಂತಿಯಾಗಲಿದೆ. ಶಾಸಕರ ಬಲಾಬಲ, ಹೈಕಮಾಂಡ್ ಆಶೀರ್ವಾದ ಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೈಕಮಾಂಡ್ ಬಲವಿದ್ದರಷ್ಟೇ ಸಾಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ನ.26ಕ್ಕೆ ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ, ನ.26ಕ್ಕೆ ಕ್ರಾಂತಿಯಾಗುವುದೂ ಅಷ್ಟೇ ಸತ್ಯ ಎಂದು ರೇಣುಕಾಚಾರ್ಯ ಹೇಳಿದರು.