ಪರಶುರಾಮ ಥೀಮ್ ಪಾರ್ಕ್ ಕುರಿತು ಸುಳ್ಳು ಸುದ್ದಿ: ಕಾನೂನು ಕ್ರಮಕ್ಕೆ ಬಿಜೆಪಿ ಒತ್ತಾಯ

| Published : Jul 17 2025, 12:33 AM IST

ಪರಶುರಾಮ ಥೀಮ್ ಪಾರ್ಕ್ ಕುರಿತು ಸುಳ್ಳು ಸುದ್ದಿ: ಕಾನೂನು ಕ್ರಮಕ್ಕೆ ಬಿಜೆಪಿ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಕುರಿತು ಅಪಪ್ರಚಾರ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾರ್ಕಳದ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಕುರಿತು ಅಪಪ್ರಚಾರ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾರ್ಕಳದ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.ಶಾಸಕ ವಿ. ಸುನಿಲ್ ಕುಮಾರ್ ಅವರ ದೃಷ್ಟಿಕೋನದಲ್ಲಿ ಅಭಿವೃದ್ಧಿಗೊಂಡ ಈ ಥೀಮ್ ಪಾರ್ಕ್, ಪ್ರವಾಸೋದ್ಯಮ ಉತ್ತೇಜನದ ಕನಸಿನ ಯೋಜನೆಯಾಗಿದ್ದು, ದೇಶಾದ್ಯಂತದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಲು ಯಶಸ್ವಿಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 500 ಅಡಿ ಎತ್ತರದಲ್ಲಿರುವ ಈ ಪಾರ್ಕ್‌ನ ಪರಶುರಾಮ ಮೂರ್ತಿಯನ್ನು ಪುನರ್ ವಿನ್ಯಾಸಗೊಳಿಸುವ ಉದ್ದೇಶದಿಂದ, ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಸ್ಥಳಾಂತರಿಸಲಾಗಿತ್ತು.

ಆದರೆ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹಾಗೂ ಅವರ ಬೆಂಬಲಿಗರು ಈ ಕುರಿತಂತೆ ಪತ್ರಿಕಾ ಸಮಾರಂಭಗಳು, ಸಭೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಸುಳ್ಳು ಮಾಹಿತಿ ಹರಡಿದ್ದಾರೆ. ಮೂರ್ತಿಯ ಕಳವು, ಮೂರ್ತಿಯ ಶ್ರೇಣಿಗೆ ಸಂಬಂಧಪಟ್ಟ ನಕಲಿ ಹೇಳಿಕೆಗಳು ಸಾರ್ವಜನಿಕದಲ್ಲಿ ಗೊಂದಲ ಮೂಡಿಸಿದ್ದವು. ಜಿಲ್ಲೆಯ ಪ್ರಾಧಿಕಾರಗಳು ಮತ್ತು ಶಾಸಕರು ಸ್ಪಷ್ಟನೆ ನೀಡಿದರೂ ಈ ಅಪಪ್ರಚಾರ ಮುಂದುವರಿದಿತ್ತು.

ಇತ್ತೀಚೆಗೆ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಯ ವರದಿಯಂತೆ ಮೂರ್ತಿಯನ್ನು ಫೈಬರ್‌ನಿಂದ ಮಾಡಲಾಗಿಲ್ಲ ಎಂಬುದು ದೃಢವಾಗಿದೆ. ನ್ಯಾಯಾಲಯದಲ್ಲೂ ಈ ಬಗ್ಗೆ ವರದಿ ಸಲ್ಲಿಸಲಾಗಿದೆ. ಇದರಿಂದಾಗಿ ಈ ಅಪಪ್ರಚಾರಕ್ಕೆ ತಕ್ಕ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಕಾರ್ಕಳದ ಘನತೆ ಮತ್ತು ಪ್ರವಾಸೋದ್ಯಮ ದೃಷ್ಟಿಕೋನದಲ್ಲಿ ಈ ರೀತಿ ನಿರಂತರ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಗಂಭೀರ ಕ್ರಮ ಅಗತ್ಯವೆಂದು ಕಾರ್ಕಳ ಬಿಜೆಪಿ ಧ್ವನಿ ಎತ್ತಿದ್ದು, ಈಗ ಪೊಲೀಸರು ಸ್ವಯಂ ಪ್ರೇರಿತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವರಿಗೂ ಮನವಿ ಸಲ್ಲಿಸಲಾಗಿದೆ.