ನಕಲಿ ಸಹಿ: ಪಕ್ಷೇತರ ಅಭ್ಯರ್ಥಿ ಸಿದ್ದಪ್ಪ ಪೂಜಾರ ವಿರುದ್ಧ ಎಫ್‌ಐಆರ್

| Published : Apr 21 2024, 02:19 AM IST

ನಕಲಿ ಸಹಿ: ಪಕ್ಷೇತರ ಅಭ್ಯರ್ಥಿ ಸಿದ್ದಪ್ಪ ಪೂಜಾರ ವಿರುದ್ಧ ಎಫ್‌ಐಆರ್
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯ ಸಿದ್ದಪ್ಪ ಕಲ್ಲಪ್ಪ ಪೂಜಾರ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರದೊಂದಿಗೆ ಸುಳ್ಳು ಸೂಚಕರ ಪ್ರಮಾಣಪತ್ರ ಸಲ್ಲಿಸಿದ ಆರೋಪಿ.

ಕನ್ನಡಪ್ರಭ ವಾರ್ತೆ ಹಾವೇರಿ

ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಸೂಚಕರ ನಕಲಿ ಸಹಿ ಮಾಡಿಸಿ, ಸುಳ್ಳು ಸೂಚಕರ ಪ್ರಮಾಣಪತ್ರವನ್ನು ಸಲ್ಲಿಸಿರುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಅವರು ಹಾವೇರಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯ ಸಿದ್ದಪ್ಪ ಕಲ್ಲಪ್ಪ ಪೂಜಾರ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರದೊಂದಿಗೆ ಸುಳ್ಳು ಸೂಚಕರ ಪ್ರಮಾಣಪತ್ರ ಸಲ್ಲಿಸಿದ ಆರೋಪಿ.

ನಾಮಪತ್ರವನ್ನು ಪರಿಶೀಲನೆ ಮಾಡಿದಾಗ ಸೂಚಕರ ವಿವರಗಳು ಮತ್ತು ಅವರ ಸಹಿಯ ಬಗ್ಗೆ ಸಂಶಯ ಮೂಡಿದ್ದರಿಂದ ಸೂಚಕರ ಸಹಿಯನ್ನು ಖಚಿತಪಡಿಸಿಕೊಳ್ಳಲು, ಸೂಚಕರ ಮನೆಗೆ ಹೋಗಿ ಪರಿಶೀಲನೆ ಮಾಡುವಂತೆ ಹಾನಗಲ್ಲ ತಾಲೂಕಿನ ತಹಸೀಲ್ದಾರ್‌ ಆರ್‌.ಎನ್‌. ಕೊರವರ ಮತ್ತು ಹಾನಗಲ್ಲ ಪೊಲೀಸ್‌ ಠಾಣೆಯ ಸಿಪಿಐ ವೀರೇಶ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ಸೂಚನೆ ನೀಡಿದ್ದರು.

ಅಭ್ಯರ್ಥಿ ಸಹಿ ಮಾಡಿಸಿದ ನಮೂನೆ ಕ್ರಮ ಸಂಖ್ಯೆ 2,3,4,5,6,8ನೇ ಸೂಚಕರನ್ನು ಖುದ್ದಾಗಿ ಭೇಟಿ ಮಾಡಿ ವಿಚಾರಿಸಿದಾಗ, ಇದು ನಮ್ಮ ಸಹಿಯಲ್ಲ, ನಾವು ನಾಮಪತ್ರದ ನಮೂನೆಗೆ ಸಹಿ ಹಾಕಿಲ್ಲ ಎಂದು ತಿಳಿಸಿ, ನಿಜವಾದ ಸಹಿಗಳನ್ನು ತಂಡದ ಅಧಿಕಾರಿಗಳ ಮುಂದೆ ಮಾಡಿಕೊಟ್ಟಿದ್ದಾರೆ. ಇದು ಚುನಾವಣಾ ನಿಯಮದ ಸ್ಪಷ್ಟ ಉಲ್ಲಂಘನೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ, ಸಿದ್ದಪ್ಪ ಪೂಜಾರ ವಿರುದ್ಧ ವಿಚಾರಣೆ ಮಾಡಿ ಎಂದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.

ಆಯೋಗದ ಮಾಗ೯ಸೂಚಿಯಂತೆ ಪಕ್ಷೇತರ ಅಭ್ಯಥಿ೯ಯಾಗಿ ನಾಮಪತ್ರ ಸಲ್ಲಿಸಲು 10 ಜನ ಸೂಚಕರ ಸಹಿ ಬೇಕು. ಈ ಕ್ಷೇತ್ರದವರಾಗಿರಬೇಕು. ನಾಮಪತ್ರದಲ್ಲಿ ಸೂಚಕರ ಮತದಾರ ಪಟ್ಟಿಯ ಭಾಗಸಂಖ್ಯೆ, ಕ್ರಮಸಂಖ್ಯೆ ಕ್ರಮಬದ್ಧವಾಗಿ ನಮೂದಿಸಿ ಖುದ್ದಾಗಿ ಸೂಚಕರೇ ಸಹಿ ಮಾಡಿರಬೇಕು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.