1.36 ಕೋಟಿ ಮೌಲ್ಯದ ನಕಲಿ ಕ್ರಿಮಿನಾಶಕ ವಶ

| Published : Sep 15 2025, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಖೋಟಾ ನೋಟು, ನಕಲಿ ಮದ್ಯದ ಮಧ್ಯೆ ಇದೀಗ ನಕಲಿ ಕ್ರಿಮಿನಾಶಕದ ಹಾವಳಿ ಶುರುವಾಗಿದೆ. ಅತೀವೃಷ್ಠಿ ಅದಿಲ್ಲದಿದ್ದರೆ ಅನಾವೃಷ್ಠಿ ಸಮಸ್ಯೆಯಲ್ಲಿ ಮೊದಲೇ ರೈತರು ಬೆಳೆ ಬೆಳೆದು ಅದನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಕೆಲ ರೈತರು ಮಾಡಿದ ಸಾಲ ತೀರಿಸಲಾಗದೆ ಸಾಲಭಾದೆಯಿಂದ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೆಲ್ಲದರ ಮಧ್ಯೆ ಬೆಳೆಗಳಿಗೆ ಸಿಂಪಡಿಸೋಣ ಎಂದುಕೊಳ್ಳುವ ರೈತರಿಗೆ ಇದೀಗ ನಕಲಿ ಔಷಧಿಗಳು ಶಾಕ್ ನೀಡಿವೆ. ಈ ಹಿಂದೆ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ರಸಗೊಬ್ಬರ ಪತ್ತೆಯಾಗಿದ್ದು, ಇದೀಗ ಕೋಟ್ಯಾಂತರ ಮೌಲ್ಯದ ನಕಲಿ ಕ್ರಿಮಿನಾಶಕ ಪತ್ತೆಯಾಗಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಖೋಟಾ ನೋಟು, ನಕಲಿ ಮದ್ಯದ ಮಧ್ಯೆ ಇದೀಗ ನಕಲಿ ಕ್ರಿಮಿನಾಶಕದ ಹಾವಳಿ ಶುರುವಾಗಿದೆ. ಅತೀವೃಷ್ಠಿ ಅದಿಲ್ಲದಿದ್ದರೆ ಅನಾವೃಷ್ಠಿ ಸಮಸ್ಯೆಯಲ್ಲಿ ಮೊದಲೇ ರೈತರು ಬೆಳೆ ಬೆಳೆದು ಅದನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಕೆಲ ರೈತರು ಮಾಡಿದ ಸಾಲ ತೀರಿಸಲಾಗದೆ ಸಾಲಭಾದೆಯಿಂದ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೆಲ್ಲದರ ಮಧ್ಯೆ ಬೆಳೆಗಳಿಗೆ ಸಿಂಪಡಿಸೋಣ ಎಂದುಕೊಳ್ಳುವ ರೈತರಿಗೆ ಇದೀಗ ನಕಲಿ ಔಷಧಿಗಳು ಶಾಕ್ ನೀಡಿವೆ. ಈ ಹಿಂದೆ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ರಸಗೊಬ್ಬರ ಪತ್ತೆಯಾಗಿದ್ದು, ಇದೀಗ ಕೋಟ್ಯಾಂತರ ಮೌಲ್ಯದ ನಕಲಿ ಕ್ರಿಮಿನಾಶಕ ಪತ್ತೆಯಾಗಿದೆ.

ಕೋಟಿ ಕೋಟಿ ಕ್ರಿಮಿನಾಶಕ ಜಪ್ತಿ

ನಗರದ ಕೆಐಎಡಿಬಿ (ಕೈಗಾರಿಕಾ ಪ್ರದೇಶ)ದಲ್ಲಿನ ಸರ್ವೆ ನಂ 1051/ಎ1/ಎ, ಪ್ಲಾಟ್ ನಂ 279ರಲ್ಲಿನ ಉಗ್ರಾಣವೊಂದಕ್ಕೆ ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೋಟೆಕ್ಷನ್ ಎಂಬ ಕಂಪನಿಯ ಬೋರ್ಡ್ ಹಾಕಿಕೊಂಡು ಲೈಪ್ ಅಗ್ರೋ ಕೆಮಿಕಲ್ ಕಂಪನಿಯ ಹೆಸರಿನಲ್ಲಿ ನಕಲಿ ಕ್ರಿಮಿನಾಶಕ ತಯಾರಿಸಲಾಗುತ್ತಿತ್ತು. ತಾವೇ ತಯಾರಿಸಿದ ನಕಲಿ ಕ್ರಿಮಿನಾಶಕ ಔಷಧಗಳಿಗೆ ಲೈಫ್‌ ಅಗ್ರೋ ಕೆಮಿಕಲ್ ಕಂಪನಿಯ ಲೇಬಲ್‌ಗಳನ್ನು ಅಂಟಿಸಿ, ಅನಧಿಕೃತವಾಗಿ ಗೋಡೌನ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ ಅಧಿಕಾರಿಗಳು ಬರೋಬ್ಬರಿ ₹ 1.36 ಕೋಟಿ ಮೌಲ್ಯದ ಲೈಪ್ ಅಗ್ರೋ ಕೆಮಿಕಲ್ ಹೆಸರಿನಲ್ಲಿರುವ ನಕಲಿ ಕ್ರಿಮಿನಾಶಕ ಔಷಧಗಳನ್ನು ಜಪ್ತಿ ಮಾಡಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿನ ಉಗ್ರಾಣದಲ್ಲಿ ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೋಟೆಕ್ಷನ್ ಕಂಪನಿ ಹೆಸರಿನಲ್ಲಿ ನಕಲಿ ಔಷಧಿ ತಯಾರಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಾದ ಕೊಂಡಗೂಳಿಯ ವಿದ್ಯಾಸಾಗರ ಮಲ್ಲಾಬಾದಿ ಹಾಗೂ ಆಳಂದ ತಾಲೂಕಿನ ಬೋಳನಿ ಗ್ರಾಮದ ಅಮರ ರೆಡ್ಡಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಪಿಎಮ್‌ಸಿ ಠಾಣೆ ಪಿಎಸ್‌ಐ ಬಸವರಾಜ ತಿಪರಡ್ಡಿ ಹಾಗೂ ಸಿಬ್ಬಂದಿಗಳು ಮತ್ತು ಜಂಟಿ ಕೃಷಿ ನಿರ್ದೇಶಕರ ಇಲಾಖೆಯ ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕರಾದ ಅಮಗೊಂಡ ಬಿರಾದಾರ, ರೇಷ್ಮಾ ಸುತಾರ ಭಾಗವಹಿಸಿದ್ದರು. ಎಪಿಎಮ್‌ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಂಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಕಲಿ ಕ್ರಿಮಿನಾಶಕ ಔಷಧಿಯನ್ನು ಜಪ್ತಿಪಡಿಸಿಕೊಳ್ಳುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯಕ್ಕೆ ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಸಿಪಿಐ ಮಲ್ಲಯ್ಯ ಮಠಪತಿ ಶ್ಲಾಘಿಸಿದ್ದಾರೆ.ಕೋಟ್:ನಗರದ ಹೊರವಲಯದಲ್ಲಿರುವ ಇಂಡಸ್ಟ್ರೀಯಲ್‌ ಏರಿಯಾದಲ್ಲಿನ ಗೋಡೌನ್‌ನಲ್ಲಿ ನಕಲಿ ಔಷಧಿ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಈ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ನಕಲಿ ಕ್ರಿಮಿನಾಶಕಗಳನ್ನು ವಶಪಡಿಸಿಕೊಳ್ಳಲಾಗಿದೆ.ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ

ಬಾಕ್ಸ್‌ಅಸಲಿಯಾವುದು? ನಕಲಿಯಾವುದು?ಬೇರೆ ಬೇರೆ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕಗಳ ಡೂಪ್ಲಿಕೇಟ್ ಔಷಧಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ರಸಗೊಬ್ಬರ ಹಾಗೂ ಕ್ರಿಮಿನಾಶಕ ಔಷಧಿಗಳಲ್ಲಿ ಅಸಲಿ ಯಾವುದು, ನಕಲಿ ಯಾವುದು ಎಂಬುದೇ ತಿಳಿಯದಂತಾಗಿದೆ. ನಾನಾ ತರಹದ ಕಂಪನಿಗಳ ಬ್ರ್ಯಾಂಡ್‌ನೇಮ್ ಬಳಸಿ ವಿವಿಧ ಹೆಸರುಗಳಲ್ಲಿ ನಕಲಿ ಕ್ರಿಮಿನಾಶಕ ಔಷಧಗಳು ರೈತರ ಕೈ ಸೇರುತ್ತಿವೆ. ಉದಾಹರಣೆಗೆ ಮೋಂಡ್‌ಗಾರ್ಡ್‌, ಪ್ರೋಕಲೈಫ್, ಮೋನೋಲೈಫ್, ಲೈಫ್‌ಕ್ರಾನ್, ಶಾರ್ಕ್‌ಲೈಫ್, ಲೇಸರ್‌ಲೈಫ್ ಸೇರಿದಂತೆ 12 ವಿವಿಧ ಹೆಸರುಗಳಲ್ಲಿ ನಕಲಿ ಕ್ರಿಮಿನಾಶಕ ತಯಾರಿಸಲಾಗುತ್ತಿದೆ. ಇವುಗಳನ್ನು ಅಸಲಿ ಯಾವುದು ನಕಲಿ ಯಾವುದು ಎಂದು ಗುರುತಿಸುವುದೇ ಕಷ್ಟ. ಥೇಟ್‌ ಅಸಲಿಯಂತೆ ನಕಲಿ ಕ್ರಿಮಿನಾಶಕದ ಡಬ್ಬಿಗಳನ್ನು ತಯಾರಿಸಿ ಕೊಳ್ಳುವವರಿಗೆ ವಂಚನೆ ಮಾಡಲಾಗುತ್ತಿದೆ. ಈಗ ಕ್ರಿಮಿನಾಶಕವನ್ನು ಕೊಳ್ಳುವವರು ಹುಷಾರಾಗಿ ಕೊಂಡುಕೊಳ್ಳಬೇಕಿದೆ.