ಸಾರಾಂಶ
ಹವಾಮಾನ ಕೈ ಹಿಡಿದಾಗ ಬೆಳೆದ ಬೆಳೆಗಳಿಗೆ ಬೆಲೆ ಸಿಗುವುದಿಲ್ಲ. ಉತ್ತಮ ಬೆಲೆ ಇದ್ದಾಗ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿ. ಒಟ್ಟಾರೆ, ರೈತರು ಆರ್ಥಿಕವಾಗಿ ಸುಧಾರಿಸಲಾಗದ ಸ್ಥಿತಿ ಉಂಟಾಗುತ್ತಿದೆ.
ವಿಶೇಷ ವರದಿ
ಧಾರವಾಡದೀಪಾವಳಿ ಸಮೀಪಿಸುತ್ತಿದ್ದು ಸಾಮಾನ್ಯವಾಗಿ ಇಷ್ಟೊತ್ತಿಗೆ ಹಿಂಗಾರು ಬೆಳೆಗಳು ನಳನಳಿಸುತ್ತಿರಬೇಕಿತ್ತು. ಆದರೆ, ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ಹಿಂಗಾರು ಹಂಗಾಮು ಹಿಂದೆ ಬಿದ್ದಿದ್ದು, ರೈತರು ಪದೇ ಪದೇ ಸಂಕಷ್ಟಕ್ಕೆ ಒಳಗಾಗಬೇಕಿದೆ.
ಹವಾಮಾನ ಕೈ ಹಿಡಿದಾಗ ಬೆಳೆದ ಬೆಳೆಗಳಿಗೆ ಬೆಲೆ ಸಿಗುವುದಿಲ್ಲ. ಉತ್ತಮ ಬೆಲೆ ಇದ್ದಾಗ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿ. ಒಟ್ಟಾರೆ, ರೈತರು ಆರ್ಥಿಕವಾಗಿ ಸುಧಾರಿಸಲಾಗದ ಸ್ಥಿತಿ ಉಂಟಾಗುತ್ತಿದೆ. ಇದೀಗ ಕಳೆದ ಮುಂಗಾರು ಹಂಗಾಮಿನ ಆರಂಭದಲ್ಲಿ ಚೆನ್ನಾಗಿ ಮಳೆಯಾಗಿ ಕೊಯ್ಲಿನ ಸಮಯದಲ್ಲಿ ವಿಪರೀತ ಮಳೆಯಾಗಿ ಬೆಳೆ ಹಾನಿ ಆಯಿತು. ಇದೀಗ ಹಿಂಗಾರು ಬಿತ್ತನೆ ಸಮಯದಲ್ಲಿ ಉತ್ತಮ ಮಳೆಯಾಗಿತ್ತು. ಕೆಲವರು ಬಿತ್ತನೆ ಸಹ ಮಾಡಿದ್ದರು. ಮತ್ತದೇ ಅತಿವೃಷ್ಟಿಯಿಂದ ಬಿತ್ತನೆ ಮಾಡಿದ ಬೀಜಗಳು ಕೊಳೆತು ಹೋಗಿವೆ. ಅ. 21ರ ವರೆಗೆ 86.3 ವಾಡಿಕೆ ಪೈಕಿ 186.9 ಮಿ.ಮೀ ಮಳೆಯಾಗಿದ್ದು, ಮುರಿದು ಬಿತ್ತನೆ ಮಾಡಬೇಕೆಂದರೆ ಅತಿಯಾದ ಮಳೆಯಿಂದ ಹೊಲಗಳಲ್ಲಿ ನೀರು ನಿಂತಿದ್ದು ಹದ ಬರುತ್ತಿಲ್ಲ. ಹೀಗಾಗಿ, ಈ ಬಾರಿ ಹಿಂಗಾರು ಒಂದು ತಿಂಗಳಿಗೂ ಹೆಚ್ಚು ಹಿಂದಾಗಲಿದೆ ಎನ್ನುತ್ತಿದ್ದಾರೆ ಕೃಷಿ ತಜ್ಞರು.ಶೇ. 15ರಷ್ಟು ಮಾತ್ರ ಬಿತ್ತನೆ:
ಪ್ರಸ್ತುತ 2 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹಿಂಗಾರು ಬಿತ್ತನೆಗೆ ಕೃಷಿ ಇಲಾಖೆ ಗುರಿ ಹೊಂದಿದೆ. ಈ ಪೈಕಿ ಕಡಲೆ, ಶೇಂಗಾ, ಗೋಧಿ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ, ಪ್ರಸ್ತುತ ಶೇ. 15ರಷ್ಟು ಮಾತ್ರ ಬಿತ್ತನೆಯಾಗಿದ್ದು, ಅದೂ ಹಾನಿಯಾಗಿದೆ. ಬಹುತೇಕ ಎಲ್ಲ ಹೊಲಗಳಲ್ಲಿ ನೀರು ನಿಂತಿದ್ದು, ಹದ ಬರಲು ಇನ್ನೂ ಸಮಯ ಹಿಡಿಯಲಿದೆ. ತಡವಾದರೂ ನವೆಂಬರ್ 15ರ ವರೆಗೆ ಸಮಯಾವಕಾಶ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.ಏನೇನು ಹಾನಿ:
ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅ. 21ರ ವರೆಗಿನ ವರದಿಯಂತೆ ನವಲಗುಂದ ತಾಲೂಕಿನಲ್ಲಿ 123 ಹೆಕ್ಟೇರ್ ಪ್ರದೇಶದ ಶೇಂಗಾ, 3633 ಹೆಕ್ಟೇರ್ ಗೋವಿನಜೋಳ ಹಾಗೂ 7791 ಹೆಕ್ಟೇರ್ ಹತ್ತಿ ಸೇರಿ ಒಟ್ಟು 11,547 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಅಣ್ಣಿಗೇರಿಯಲ್ಲಿ 200 ಹೆಕ್ಟೇರ್ ಶೇಂಗಾ, 100 ಹೆಕ್ಟೇರ್ ಗೋವಿನಜೋಳ, 500 ಹೆಕ್ಟೇರ್ ಹತ್ತಿ ಸೇರಿ ಒಟ್ಟು 800 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಹಾನಿಯಾಗಿದೆ. ಕುಂದಗೋಳದಲ್ಲಿ 3 ಸಾವಿರ ಹೆಕ್ಟೇರ್ ಶೇಂಗಾ, 2 ಸಾವಿರ ಹೆಕ್ಟೇರ್ ಗೋವಿನಜೋಳ, 5200 ಹೆಕ್ಟೇರ್ ಹತ್ತಿ ಹಾಗೂ 800 ಹೆಕ್ಟೇರ್ ಪ್ರದೇಶದ ಸೊಯಾಬೀನ್ ಸೇರಿ ಒಟ್ಟು 11 ಸಾವಿರ ಹೆಕ್ಟೇರ್ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.ಹುಬ್ಬಳ್ಳಿಯಲ್ಲಿ 1800 ಹೆಕ್ಟೇರ್ ಶೇಂಗಾ, 4950 ಹೆಕ್ಟೇರ್ ಗೋವಿನಜೋಳ ಹಾಗೂ 5250 ಹೆಕ್ಟೇರ್ ಹತ್ತಿ ಸೇರಿ ಒಟ್ಟು 12 ಸಾವಿರ ಹೆಕ್ಟೇರ್ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ. ಇನ್ನು, ಕಲಘಟಗಿಯಲ್ಲಿ 4066 ಹೆಕ್ಟೇರ್, ಧಾರವಾಡ ತಾಲೂಕಿನಲ್ಲಿ 10042 ಹೆಕ್ಟೇರ್ ಕೃಷಿ ಬೆಳೆಗಳು ಹಾನಿಯಾಗಿವೆ.
ತೋಟಗಾರಿಕೆ ಬೆಳೆ ಹಾನಿ ಪೈಕಿ ಒಟ್ಟಾರೆ ಜಿಲ್ಲೆಯಲ್ಲಿ 5,422 ಹೆಕ್ಟೇರ್ ಮೆಣಸಿನಕಾಯಿ, 2380 ಹೆಕ್ಟೇರ್ ಈರುಳ್ಳಿ, 85 ಹೆಕ್ಟೇರ್ ಹೂ ಹಾಗೂ 45 ಹೆಕ್ಟೇರ್ ವಿವಿಧ ತರಕಾರಿ ಬೆಳೆ ಸೇರಿ ಒಟ್ಟು 7972 ಹೆಕ್ಟೇರ್ ಬೆಳೆಯು ಮಳೆಯಿಂದ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈತರು ಅಕಾಲಿಕ ಮತ್ತು ಅತಿಯಾದ ಮಳೆಯಿಂದ ಆಗುವ ನಷ್ಟದಿಂದ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಮಾಡಿಸಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬೆಳೆ ಆ್ಯಪ್ ಹಾಗೂ ಬೆಳೆ ವಿಮೆ ಕುರಿತು ವ್ಯಾಪಕ ಪ್ರಚಾರ ಮಾಡುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕು. ಈ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಮತ್ತೊಮ್ಮೆ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ಕೊಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.