ಸಾರಾಂಶ
ಭತ್ತದ ದರ ಏಕಾಏಕಿ ಪಾತಳಕ್ಕೆ ಕುಸಿಯುತ್ತಿದೆ. ಈಗಿರುವ ದರದಲ್ಲಿ ಭತ್ತ ಮಾರಾಟ ಮಾಡಿದರೆ ಮಾಡಿದ ಖರ್ಚು ಬರಲ್ಲ. ಆದರೆ ಬೆಳೆದ ಬೆಳೆ ಮಾರಾಟ ಮಾಡೋಣ ಎಂದರೆ ಮಾರುಕಟ್ಟೆಯಲ್ಲಿಯೇ ಭತ್ತ ಕೇಳುವವರೇ ಇಲ್ಲ.
ಕೊಪ್ಪಳ ಭತ್ತದ ದರ ಏಕಾಏಕಿ ಪಾತಳಕ್ಕೆ ಕುಸಿಯುತ್ತಿದೆ. ಈಗಿರುವ ದರದಲ್ಲಿ ಭತ್ತ ಮಾರಾಟ ಮಾಡಿದರೆ ಮಾಡಿದ ಖರ್ಚು ಬರಲ್ಲ. ಆದರೆ ಬೆಳೆದ ಬೆಳೆ ಮಾರಾಟ ಮಾಡೋಣ ಎಂದರೆ ಮಾರುಕಟ್ಟೆಯಲ್ಲಿಯೇ ಭತ್ತ ಕೇಳುವವರೇ ಇಲ್ಲ.
ಹೌದು, ಭತ್ತದ ದರ ರೈತರ ಒಕ್ಕಲು ಪ್ರಾರಂಭಿಸುತ್ತಿದ್ದಂತೆ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಭತ್ತದ ದರ ₹500ರಿಂದ ಸಾವಿರದವರೆಗೆ ಕುಸಿದಿದೆ. 75 ಕೆಜಿಗೆ ₹2500 ಇದ್ದ ದರ ಈ ವರ್ಷ ₹1500ಗೆ (ಬೇರೆ ಬೇರೆ ತಳಿ ದರ ಬೇರೆ ಬೇರೆಯಾಗಿದೆಯೇ ಇದೆ.) ಕುಸಿದಿದೆ.
ಹೀಗಾಗಿ, ಮಾಡಿದ ಖರ್ಚು ಸಹ ಬರಲ್ಲ ಎನ್ನುವುದು ರೈತರ ಅಂಬೋಣ. ಭತ್ತವನ್ನು ರಸ್ತೆಯಲ್ಲಿ, ಕಣದಲ್ಲಿ ಎಲ್ಲೆಂದರಲ್ಲಿ ಹಾಕಿಕೊಂಡು, ಇಂದು ಖರೀದಿದಾರರು ಬರುತ್ತಾರೆ, ನಾಳೆ ಬರುತ್ತಾರೆ ಎಂದು ರೈತರು ಕಾಯುತ್ತಿರುವ ದೃಶ್ಯ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸರ್ವೆ ಸಾಮಾನ್ಯವಾಗಿದೆ.
ಭತ್ತ ಬೆಳೆದ ಯಾವ ರೈತರ ಮುಖದಲ್ಲಿಯೂ ಕಳೆ ಇಲ್ಲ. ಹೇಗಾದರೂ ಮಾಡಿ, ಮಾರಿ ಕೈತೊಳೆದುಕೊಳ್ಳೋಣ ಎನ್ನುತ್ತಿದ್ದಾರೆ.
ಕಾರಣವೇನು:
ಸಾಮಾನ್ಯವಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಅಭಾವ ಆಗಿ ಬೇಸಿಗೆಯಲ್ಲಿ ಭತ್ತ ಬೆಳೆಯಲು ನೀರಿಲ್ಲದಂತೆ ಆಗುತ್ತಿದ್ದಂತೆ ಭತ್ತದ ದರ ಏರಿಕೆಯಾಗುತ್ತಿತ್ತು. ಆದರೆ, ಈ ವರ್ಷ ತುಂಗಭದ್ರಾ ಜಲಾಶಯ ಈಗಲೂ ಭರ್ತಿಯಾಗಿರುವುದರಿಂದ ಬೇಸಿಗೆಯ ಬೆಳೆ ಸಮೃದ್ಧವಾಗಿ ಬರುತ್ತದೆ ಎನ್ನುವುದೇ ಭತ್ತದ ದರ ಕುಸಿಯಲು ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ. ಬೇಸಿಗೆಯಲ್ಲಿ ಭತ್ತ ಸಿಗಲ್ಲ ಎಂದು ಮಧ್ಯವರ್ತಿಗಳು ತುಂಬಿಟ್ಟುಕೊಳ್ಳುತ್ತಿದ್ದರು. ಆದರೆ, ಈ ವರ್ಷ ಬೇಸಿಗೆಯಲ್ಲಿಯೂ ಭತ್ತ ಬರುವ ವಿಶ್ವಾಸ ಬಂದಿರುವುದರಿಂದ ಸಂಗ್ರಹ ಮಾಡುವುದರಿಂದ ಮಧ್ಯವರ್ತಿಗಳು ಹಿಂದೆ ಸರಿದಿದ್ದಾರೆ.
ವಿದೇಶದಲ್ಲಿಲ್ಲ ಬೇಡಿಕೆ:
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಭತ್ತಕ್ಕೆ ಅತಿಯಾದ ರಸಾಯನ ಬಳಕೆ ಮಾಡುತ್ತಿರುವುದರಿಂದ ಅಕ್ಕಿಯಲ್ಲಿ ರಸಾಯನಿಕ ಪ್ರಮಾಣ ಅಧಿಕವಾಗಿರುತ್ತದೆ ಎನ್ನುವ ವೈಜ್ಞಾನಿಕ ವರದಿಯೂ ಸಹ ಪರಿಣಾಮ ಬೀರಿದೆ. ಹೀಗಾಗಿ, ಗಲ್ಫ್ ರಾಷ್ಟ್ರಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಭತ್ತಕ್ಕೆ ಬೇಡಿಕೆ ಕಡಿಮೆಯಾಗಿರುವುದರಿಂದ ದರ ಕುಸಿಯಲು ಕಾರಣವಾಗಿರಬಹುದು ಎಂದು ಅಂದಾಜಿಸಲಾಗುತ್ತದೆ.
ಭತ್ತ ರಫ್ತು ಮೇಲೆ ನಿಯಂತ್ರಣ ಸೇರಿದಂತೆ ಮೊದಲಾದ ಅಂಶಗಳಿಂದ ಭತ್ತದ ದರ ಕುಸಿದಿದ್ದು, ಬೆಂಬಲ ಬೆಲೆಯಲ್ಲಿಯಾದರೂ ಖರೀದಿ ಮಾಡಲಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಭತ್ತ (75 ಕೆಜಿ) ಈ ವರ್ಷ ಕಳೆದ ವರ್ಷ
ಸೋನಾಮಸೂರಿ 1500 - 2300
ಆರ್ ಎನ್ ಆರ್ 1850 - 2500
ಗಂಗಾಕಾವೇರಿ 1400- 1800