ಸಾರಾಂಶ
ಬ್ಯಾಡಗಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೈತರಿಗೆ ಮೆಣಸಿನಕಾಯಿ ಮಾರಾಟಕ್ಕೆ ಮುಕ್ತ ಅವಕಾಶವಿದೆ, ಮೊನ್ನೆ ನಡೆದ ಘಟನೆ ಅತ್ಯಂತ ದುರದೃಷ್ಟಕರ. ಸುಳ್ಳು ವದಂತಿಗಳಿಗೆ ವಿಚಲಿತಗೊಳ್ಳದೇ ಕರ್ನಾಟಕ ಸೇರಿದಂತೆ ಆಂಧ್ರ, ತೆಲಂಗಾಣದ ರೈತರು ಎಂದಿನಂತೆ ನಮ್ಮ ಜೊತೆ ಸಹಕಾರ ನೀಡುವಂತೆ ವರ್ತಕರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ ಪಾಟೀಲ ಮನವಿ ಮಾಡಿದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ನಡೆದ ವರ್ತಕರ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬ್ಯಾಡಗಿ ಮಾರುಕಟ್ಟೆಗೆ ಹೆಸರು ಕೆಡಿಸುವಂತಹ ಕೆಲಸಕ್ಕೆ ಕೆಲವರು ಕೈಹಾಕಿದ್ದಾರೆ, ಪೂರ್ಣ ವಿಷಯ ಅರಿಯದೇ ಅಮಾಯಕ ರೈತರು ತಮಗರಿವಿಲ್ಲದಂತೆ ಪಾಲ್ಗೊಂಡಿದ್ದಾರೆ, ತನಿಖೆಯ ಬಳಿಕ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಶಿಕ್ಷೆಯಾಗಲಿದೆ ಎಂದರು.ಸುಳ್ಳು ವದಂತಿ ನಂಬಬೇಡಿ: ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ ನಿಶ್ಚಿತ ಆದರೆ ಮೆಣಸಿನಕಾಯಿ ಮಾರಾಟಕ್ಕೆಂದು ಬ್ಯಾಡಗಿ ಮಾರುಕಟ್ಟೆಗೆ ಹೋಗುವ ರೈತರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಾರೆ ಎಂಬ ಸುಳ್ಳು ವದಂತಿಯೊಂದು ಹರಿಯ ಬಿಟ್ಟಿದ್ದು ಮುಗ್ಧ ರೈತರು ಇಂತಹ ಊಹಾಪೋಹಗಳಿಗೆ ಕಿವಿಗೊಳದೇ ಬ್ಯಾಡಗಿ ಮಾರುಕಟ್ಟೆಗೆ ಬಂದು ಮುಕ್ತವಾಗಿ ವ್ಯವಹರಿಸುವಂತೆ ಕರೆ ನೀಡಿದರು.
ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಸಹಕರಿಸಿ:ಸಿಪಿಐ ಮಹಾಂತೇಶ ಲಂಬಿ ಮಾತನಾಡಿ, ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಸರ್ಕಾರಿ ಆಸ್ತಿಪಾಸ್ತಿ ಹಾನಿ ಮಾಡಿ ಆತಂಕ ಸೃಷ್ಟಿ ಮಾಡಿದ್ದ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ವರ್ತಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.ಘಟನೆ ಕುರಿತಂತೆ ಹಲವರು ತೆಗೆದಂತಹ ವಿವಿಧ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ. ಯಾವುದಾದರೂ ವಿಡಿಯೋಗಳಿದ್ದರೇ ಅಥವಾ ನಿಮಗೆ ಸಿಕ್ಕಿರುವ ವಿಡಿಯೋ ಹಾಗೂ ನಿಮ್ಮ ಅಂಗಡಿಗಳಲ್ಲಿನ ಸಿಸಿಟಿವಿ ದೃಶ್ಯದಲ್ಲಿ ನಿಮ್ಮ ಅಂಗಡಿಗೆ ಬಂದಿದ್ದ ರೈತರಾಗಲಿ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಗುರ್ತಿಸಿ ವಿಡಿಯೋ ದೃಶ್ಯಾವಳಿ ಪೊಲೀಸ್ ಇಲಾಖೆ ನೀಡಿ ತನಿಖೆಗೆ ಸಹಕರಿಸಿ ಎಂದರು.
ದಾಖಲೆ ಒದಗಿಸಿ: ಪ್ರತಿಭಟನೆಯಲ್ಲಿ ಮಾರುಕಟ್ಟೆಯಲ್ಲಿನ ವರ್ತಕರೊಬ್ಬರ ಅಂಗಡಿಗೂ ನುಗ್ಗಿದ ದುಷ್ಕರ್ಮಿಗಳು ಹಣ ದೋಚಿದ ಘಟನೆ ನಡೆದಿರುವ ಕುರಿತು ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಸಿಸಿ ಟಿವಿ ದೃಶ್ಯ ಹಾಗೂ ದಾಖಲೆಗಳಿದ್ದಲ್ಲಿ ಒದಗಿಸಬೇಕು, ಯಾವುದೇ ಕಾರಣಕ್ಕೂ ಅಮಾಯಕರಿಗೆ ಇಲಾಖೆ ತೊಂದರೆ ನೀಡಲ್ಲ ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎ.ಆರ್. ನದಾಫ್, ಗೌರವ ಕಾರ್ಯದರ್ಶಿ ರಾಜು ಮೋರಿಗೇರಿ. ಬಸವರಾಜ ಛತ್ರದ. ಎನ್.ಎಂ.ಕೆಂಬಿ. ಹಾಗೂ ಉಳಿವೆಪ್ಪ ಕಬ್ಬೂರ ಸೇರಿದಂತೆ ಹಲವು ವರ್ತಕರು ಭಾಗವಹಿಸಿದ್ದರು.