ಸಾರಾಂಶ
ವಚನ ಸಂಪತ್ತು ಬೆಳಕಿಗೆ ಬರುವ ಮುನ್ನವೇ ಬಸವಣ್ಣನವರ ಕೀರ್ತಿ ಲೋಕ ಪ್ರಸಿದ್ಧವಾಗಿತ್ತು.
ಬಳ್ಳಾರಿ: ವಚನ ಸಂಪತ್ತು ಬೆಳಕಿಗೆ ಬರುವ ಮುನ್ನವೇ ಬಸವಣ್ಣನವರ ಕೀರ್ತಿ ಲೋಕ ಪ್ರಸಿದ್ಧವಾಗಿತ್ತು. ಜನಪದರು ಬಸವಣ್ಣನ ಬದುಕು ಮತ್ತು ಸಾಧನೆ ಸಿದ್ದಿಗಳನ್ನು ಸ್ಮರಣೆ ಮಾಡಿಕೊಳ್ಳುವ ಮೂಲಕ ಚಿರಸ್ಥಾಯಿಗೊಳಿಸಿದ್ದಾರೆ ಎಂದು ಲೇಖಕಿ ಡಾ.ಎ.ಎನ್. ಸಿದ್ದೇಶ್ವರಿ ತಿಳಿಸಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಗರದ ಡಾ.ವೈ.ನಾಗೇಶಶಾಸ್ತ್ರಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 312ನೇ ಮಹಾಮನೆ ಲಿಂ.ಫಕೀರಪ್ಪ ತೋಟಪ್ಪ ಗಡ್ಡಿ ದತ್ತಿ ಕಾರ್ಯಕ್ರಮದಲ್ಲಿ ಜನಪದರು ಕಂಡ ಬಸವಣ್ಣ ವಿಷಯ ಕುರಿತು ಅವರು ಮಾತನಾಡಿದರು.ಅಕ್ಷರ ಜ್ಞಾನವಿಲ್ಲದ ಜನಪದರು ಬಸವಣ್ಣನವರ ಬದುಕು ಮತ್ತು ಸಾಧನೆ ಸಿದ್ದಿಗಳನ್ನು ತಮ್ಮ ದೈನಂದಿನ ಬದುಕಿನ ಕುಟ್ಟುವ, ಬೀಸುವ, ಹರಗುವ, ಕಣ ಮಾಡುವ ಪ್ರತಿಕ್ಷಣಗಳಲ್ಲಿ ಸ್ಮರಣೆ ಮಾಡಿಕೊಳ್ಳುತ್ತಿದ್ದರು. ಜನಪದ ಸಾಹಿತ್ಯ ಬೆಳೆದಂತೆ ಬಸವಣ್ಣನವರ ಜೀವನದರ್ಶನ ಜನರಿಗಾಯಿತು. ಬಸವಣ್ಣನವರು ಸಮ ಸಮಾಜದ ನಿರ್ಮಾಣಕ್ಕಾಗಿ ತೆಗೆದುಕೊಂಡ ಕ್ರಾಂತಿಕಾರಿ ನಿಲುವುಗಳು, ದಾಸೋಹ ಪರಿಕಲ್ಪನೆ, ಶ್ರಮ ಶಕ್ತಿಯ ಮಹತ್ವ ಕುರಿತು ಬಸವಣ್ಣನವರಿಗಿದ್ದ ಸ್ಪಷ್ಟತೆ ಹೀಗೆ ಬಸವಾದಿ ಶರಣರ ಅನೇಕ ಧಾರ್ಮಿಕ ಹಾಗೂ ಸಮಾಜಮುಖಿ ಕೈಂಕರ್ಯಗಳನ್ನು ಜನಪದರು ತಮ್ಮ ಹಾಡುಗಳ ಮೂಲಕ ಕೊಂಡಾಡಿದರು. ಹೀಗಾಗಿ ಬಸವಣ್ಣನವರ ಆಡಳಿತ ನೀತಿಗಳು ಜನಸಾಮಾನ್ಯರಲ್ಲಿ ಹೆಚ್ಚು ಪ್ರಚುರಗೊಂಡವು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ದತ್ತಿ ದಾಸೋಹಿ ಡಾ.ಸೋಮೇಶ್ವರ ಎಫ್. ಗಡ್ಡಿ, ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಿರಂತರವಾಗಿ ನಗರದಲ್ಲಿ ಹಮ್ಮಿಕೊಳ್ಳುತ್ತಿರುವ ನಾನಾ ಉಪನ್ಯಾಸ ಕಾರ್ಯಕ್ರಮಗಳ ಕುರಿತು ಸ್ಮರಿಸಿಕೊಂಡರು.
ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಟಿ. ನರೇಂದ್ರಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಸವಣ್ಣನವರ ಸಾಮಾಜಿಕ ಕಾಳಜಿ ಇಂದಿನ ನಾಯಕರಿಗೆ ಆದರ್ಶವಾಗಬೇಕು. ವಿದ್ಯಾರ್ಥಿಗಳಿಗೆ ಬಸವ, ಬುದ್ಧ, ಅಂಬೇಡ್ಕರ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ಮಾದರಿಯಾಗಬೇಕೇ ವಿನಃ, ಸಿನಿಮಾ ನಟರಲ್ಲ ಎಂದರು.
ಶಾಲೆಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಜೋಳದರಾಶಿ ಪ್ಯಾಟ್ಯಾಳ್ ಬಸವರಾಜ, ವಿ.ಜಿ. ವಿಕ್ರಮ್, ಎಸ್.ಚಂದ್ರಶೇಖರ್, ಮುಖ್ಯಗುರು ಎಂ.ಗಿರಿಜಾ, ಎಸ್.ತಿಪ್ಪೇರುದ್ರ, ಎಂ.ನಾಗಭೂಷಣ ಉಪಸ್ಥಿತರಿದ್ದರು.ಪರಿಷತ್ತಿನ ಅಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪ ದತ್ತಿ ದಾನಿಗಳನ್ನು ಪರಿಚಯಿಸಿದರು. ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.