ಕೌಟುಂಬಿಕ ಹಾಕಿ ಮೊದಲ ದಿನದ ಪಂದ್ಯಾವಳಿ: ವಚನ್‌ ಹ್ಯಾಟ್ರಿಕ್‌ ಗೋಲು ಹೆಗ್ಗಳಿಕೆ

| Published : Dec 07 2024, 12:34 AM IST

ಸಾರಾಂಶ

ಮೊದಲ ಪಂದ್ಯದಲ್ಲಿ ಕಂಜಿತಂಡ ತಂಡವು ಕುಪ್ಪಂಡ (ನಾಂಗಾಲ) ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಉಜ್ವಲ್ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಗೋಲು ಬಾರಿಸಿ ಖಾತೆ ತೆರೆದರೆ, ಮತ್ತೋರ್ವ ಅತಿಥಿ ಆಟಗಾರ ವಚನ್ 10ನೇ, 29ನೇ ಮತ್ತು 32ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿದರು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಮೊದಲ ದಿನದ ಪಂದ್ಯಾವಳಿಯಲ್ಲಿ ಒಟ್ಟು ಐದು ತಂಡಗಳು ಮುನ್ನಡೆ ಸಾಧಿಸಿವೆ. ಶುಕ್ರವಾರ ಪಂದ್ಯವಾಡಿದ ಕಂಜಿತಂಡ, ಕಡೇಮಾಡ, ತೀತಿಮಾಡ, ಮುರುವಂಡ ಮತ್ತು ಚೊಟ್ಟೆಪಂಡ ತಂಡಗಳು ಎದುರಾಳಿಗಳನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.

ಮೊದಲ ಪಂದ್ಯದಲ್ಲಿ ಕಂಜಿತಂಡ ತಂಡವು ಕುಪ್ಪಂಡ (ನಾಂಗಾಲ) ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಉಜ್ವಲ್ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಗೋಲು ಬಾರಿಸಿ ಖಾತೆ ತೆರೆದರೆ, ಮತ್ತೋರ್ವ ಅತಿಥಿ ಆಟಗಾರ ವಚನ್ 10ನೇ, 29ನೇ ಮತ್ತು 32ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿ ತಂಡದ ಗೆಲವಿನ ಅಂತರ ಹೆಚ್ಚಿಸಿದರು. ಪರಾಜಿತ ತಂಡದ ಪರ ಅತಿಥಿ ಆಟಗಾರ ದೇವಯ್ಯ 27ನೇ ನಿಮಿಷದಲ್ಲಿ ಗೋಲು ಬಾರಿಸಿದರು.

2ನೇ ಪಂದ್ಯದಲ್ಲಿ ಕಡೇಮಾಡ ತಂಡವು ಅಮ್ಮಣಿಚಂಡ ತಂಡವನ್ನು 4-2 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರ ಅತಿಥಿ ಆಟಗಾರ ಮೊಣ್ಣಪ್ಪ 5ನೇ ನಿಮಿಷದಲ್ಲಿ, ಮತ್ತೋರ್ವ ಅತಿಥಿ ಆಟಗಾರ ಗೌತಮ್ 16ನೇ ಮತ್ತು 36ನೇ ನಿಮಿಷದಲ್ಲಿ ಹಾಗೂ ಕಾವೇರಪ್ಪ 31ನೇ ನಿಮಿಷದಲ್ಲಿ ಗೋಲು ಬಾರಿಸಿದರೆ ಪರಾಜಿತ ತಂಡದ ಪರ ಅತಿಥಿ ಆಟಗಾರರಾದ ನಾಚಪ್ಪ 11ನೇ ನಿಮಿಷದಲ್ಲಿ ಹಾಗೂ ಚೇತನ್ ಚಿಣ್ಣಪ್ಪ 40ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

3ನೇ ಪಂದ್ಯದಲ್ಲಿ ಮೇಚಿಯಂಡ ತಂಡ ಗೈರು ಹಾಜರಾದ ಹಿನ್ನೆಲೆಯಲ್ಲಿ ತೀತಿಮಾಡ ತಂಡ ವಾಕ್ ಓವರ್ ಮೂಲಕ ಮುನ್ನಡೆ ಸಾಧಿಸಿತು. 4ನೇ ಪಂದ್ಯದಲ್ಲಿ ಮುರುವಂಡ ತಂಡವು ಕೊಲ್ಲಿರ ತಂಡವನ್ನು 3-1 ಗೋಲುಗಳಿಂದ ಪರಾಭವಗೊಳಿಸಿತು. ವಿಜೇತ ತಂಡದ ಪರವಾಗಿ ವಿವಿದ್ ಉತ್ತಪ್ಪ 17ನೇ ನಿಮಿಷದಲ್ಲಿ, ಕಾರ್ಯಪ್ಪ 24ನೇ ನಿಮಿಷದಲ್ಲಿ ಮತ್ತು ಅತಿಥಿ ಆಟಗಾರ ಉತ್ತಪ್ಪ 39ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಪರಾಜಿತ ತಂಡದ ಪರವಾಗಿ ಅತಿಥಿ ಆಟಗಾರ ಮಿತೇಶ್ ಬಿದ್ದಪ್ಪ 30ನೇ ನಿಮಿಷದಲ್ಲಿ ಗೋಲು ಹೊಡೆದರು.

ದಿನದ ಕೊನೆಯ ಪಂದ್ಯದಲ್ಲಿ ಚೊಟ್ಟೆಪಂಡ ತಂಡವು ನಾಮೇರ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಜಿತನ್ 9ನೇ, 15ನೇ ಮತ್ತು 23ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ ಮತ್ತೋರ್ವ ಅತಿಥಿ ಆಟಗಾರ ನಿಲನ್ 25ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಅಂತರ ಹೆಚ್ಚಿಸಿದರು. ಪರಾಜಿತ ನಾಮೆರ ತಂಡದ ಪರವಾಗಿ ಕರಣ್ ಚಿಣ್ಣಪ್ಪ 41ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.

.................

ಇಂದಿನ ಪಂದ್ಯಾವಳಿಗಳು

ಪೂರ್ವಾಹ್ನ 8.30ಕ್ಕೆ: ಅಮ್ಮೇಕಂಡ ಮತ್ತು ತೀತಮಾಡ (ಕುಂದ)

ಪೂರ್ವಾಹ್ನ 9.30ಕ್ಕೆ: ಕೋಲತಂಡ ಮತ್ತು ಮಳವಂಡ

ಪೂರ್ವಾಹ್ನ 10.30ಕ್ಕೆ: ಚೇಂದಿರ ಮತ್ತು ಕಡೇಮಾಡ

ಪೂರ್ವಾಹ್ನ 11.30ಕ್ಕೆ: ಚೇಂದಂಡ ಮತ್ತು ನಂಬುಡುಮಾಡ

ಅಪರಾಹ್ನ 12.30ಕ್ಕೆ: ಕರ್ತಮಾಡ ಮತ್ತು ಮುರುವಂಡ

ಅಪರಾಹ್ನ 1.30ಕ್ಕೆ: ಚೊಟ್ಟೇಪಂಡ ಮತ್ತು ಚಂದೂರ

ಅಪರಾಹ್ನ 2.30ಕ್ಕೆ: ಕೊಂಗಂಡ ಮತ್ತು ತೀತಿಮಾಡ