ಸಾರಾಂಶ
ನವದೆಹಲಿ : ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರಗಳು ನ್ಯಾಯಾಲಯದ ಮೆಟ್ಟಿಲೇರುವ ಪ್ರಕರಣಗಳು ಹೆಚ್ಚುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್, ‘ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷ ಇರಬಾರದು'''' ಎಂದು ಕಿವಿಮಾತು ಹೇಳಿದೆ. ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಸಲಹೆ ನೀಡಿದೆ.
ಸೋಮವಾರ ಕರ್ನಾಟಕದ ಅರ್ಜಿಗೆ ಸಂಬಂಧಿಸಿ ನಡೆದ ಮೊದಲ ವಿಚಾರಣೆ ವೇಳೆ ನ್ಯಾ.ಬಿ.ಆರ್.ಗವಾಯಿ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ಸುಪ್ರೀಂಕೋರ್ಟ್ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಮುಂದಾಯಿತು. ಆಗ ಸಾಲಿಸಿಟರ್ ಜನರಲ್ ಅವರು ಎರಡು ವಾರದೊಳಗೆ ಕೋರ್ಟ್‌ಗೆ ಕೇಂದ್ರದ ಪ್ರತಿಕ್ರಿಯೆ ಸಲ್ಲಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ ಬಳಿಕ ಈ ಸಂಬಂಧ ನ್ಯಾಯಾಲಯದ ಹೊರಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ರಾಜ್ಯದ ವಾದಕ್ಕೆ ಸುಪ್ರೀಂಕೋರ್ಟ್ ಮಣೆಹಾಕಿದೆ. ಎರಡು ವಾರದಲ್ಲಿ ಈ ವಿಚಾರ ಬಗೆಹರಿಸುತ್ತೇವೆಂದು ಕೇಂದ್ರ ಸರ್ಕಾರ ಕೂಡ ಹೇಳಿದೆ ಎಂದು ಹೇಳಿದರು.
ಪರಿಹಾರ ನೀಡಲು ಸೂಚಿಸಿ:
ಬರ ಪರಿಹಾರಕ್ಕೆ ಸಂಬಂಧಿಸಿ ಕೇಂದ್ರದ ಜತೆಗೆ ಸಂಘರ್ಷಕ್ಕಿಳಿದಿರುವ ಕರ್ನಾಟಕ ಸರ್ಕಾರ, ರಾಜ್ಯವು ಭೀಕರ ಬರದಿಂದ ತತ್ತರಿಸಿದ್ದು ಎನ್‌ಡಿಆರ್‌ಎಫ್ ನಿಧಿಯಡಿ ರಾಜ್ಯದ ಪಾಲಿನ ಪರಿಹಾರ ಬಿಡುಗಡೆ ಮಾಡಲು ಕೇಂದ್ರಕ್ಕೆ ಸೂಚನೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆ ಅರ್ಜಿ ಸಂಬಂಧ ಸೋಮವಾರ ಮೊದಲ ವಿಚಾರಣೆ ನಡೆಯಿತು.
ವಿಚಾರಣೆ ವೇಳೆ ನ್ಯಾಯಾಲಯವು, ಕರ್ನಾಟಕ ಮಾತ್ರವಲ್ಲದೆ ಇತರೆ ರಾಜ್ಯಗಳೂ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದ ಕದ ತಟ್ಟುತ್ತಿರುವುದನ್ನು ಪ್ರಸ್ತಾಪಿಸಿತು. ಆಗ ರಾಜ್ಯಗಳು ಈ ರೀತಿ ಯಾಕೆ ನ್ಯಾಯಾಲಯದ ಮೆಟ್ಟಿಲೇರುತ್ತಿವೆ ಎಂದು ಹೇಳಲು ನಾನು ಇಚ್ಛಿಸುವುದಿಲ್ಲ, ಆದರೆ ಈ ರೀತಿಯ ನಡೆಯಂತೂ ಹೆಚ್ಚಾಗುತ್ತಿದೆ ಎಂದು ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಆಗ ಪೀಠವು ಕರ್ನಾಟಕದ ಅರ್ಜಿಗೆ ಸಂಬಂಧಿಸಿ ನೋಟಿಸ್ ನೀಡುವುದಾಗಿ ಮೌಖಿಕವಾಗಿ ಹೇಳಿತಾದರೂ ಮಧ್ಯಪ್ರವೇಶಿಸಿದ ಸಾಲಿಸಿಟರ್ ಜನರಲ್ ಅವರು, ಆ ರೀತಿ ಮಾಡದಂತೆ ಮನವಿ ಮಾಡಿದರು. ''''ನೀವು ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಬೇಡಿ, ಆ ರೀತಿಯೇನಾದರೂ ಮಾಡಿದರೆ ಅದು ಕೂಡ ಸುದ್ದಿಯಾಗುತ್ತದೆ. ನಾವು ಇಲ್ಲೇ ಇದ್ದೇವೆ'''' ಎಂದರು.
ಜತೆಗೆ, ಒಂದು ವೇಳೆ ರಾಜ್ಯಗಳು ಸಂಬಂಧಪಟ್ಟವರ ಜತೆಗೆ ಮಾತುಕತೆ ನಡೆಸಿದ್ದೇ ಆಗಿದ್ದರೆ ಈ ಸಮಸ್ಯೆ ಇಷ್ಟೊತ್ತಿಗೆ ಪರಿಹಾರ ಸಿಗುತ್ತಿತ್ತು ಎಂದು ಕೋರ್ಟ್ ಮುಂದೆ ಹೇಳಿದರು.
ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಬ್ಬರೂ ವಿಚಾರಣೆ ವೇಳೆ ಖುದ್ದು ಉಪಸ್ಥಿತರಿದ್ದದ್ದು ಹಾಗೂ ಎರಡು ವಾರದೊಳಗೆ ಕೇಂದ್ರದ ಜತೆಗೆ ಚರ್ಚಿಸಿ ಕರ್ನಾಟಕದ ಅರ್ಜಿಗೆ ಸಂಬಂಧಿಸಿ ಕೋರ್ಟ್ ಮುಂದೆ ವಿವರಣೆ ನೀಡುವುದಾಗಿ ಹೇಳಿದ್ದನ್ನು ಪರಿಗಣಿಸಿದ ನ್ಯಾಯಾಲಯವು, ಯಾವುದೇ ನೋಟಿಸ್ ನೀಡದೆ ವಿಚಾರಣೆಯನ್ನು ಮುಂದೂಡಿತು.
ಈ ಸಂದರ್ಭದಲ್ಲಿ ಕರ್ನಾಟಕದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಆಕ್ಷೇಪ ವ್ಯಕ್ತಪಡಿಸಿ, ಈ ಪ್ರಕ್ರಿಯೆ ಹಲವು ತಿಂಗಳ ಹಿಂದಿನಿಂದ ನಡೆದಿದೆ. ಈಗ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಬೇಕು ಎಂದು ಪೀಠವನ್ನು ಆಗ್ರಹಿಸಿದರು.
ಕೋರ್ಟ್ ಹಾಲ್‌ನಲ್ಲಿ ಮಂತ್ರಿ:
ಬರಪರಿಹಾರ ಬಿಡುಗಡೆಗೆ ಆಗ್ರಹಿಸಿ ಸುಪ್ರೀಂಕೋರ್ಟ್‌ಗೆ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿದ್ದು, ಅಗತ್ಯ ದಾಖಲೆಗಳನ್ನು ವಕೀಲರ ತಂಡಕ್ಕೆ ಒದಗಿಸಲು ಖುದ್ದು ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಇತರೆ ಹಿರಿಯ ಅಧಿಕಾರಿಗಳು ಸುಪ್ರೀಂಕೋರ್ಟ್ ಹಾಲ್‌ನಲ್ಲಿ ಹಾಜರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್ ನಮ್ಮ ವಾದಕ್ಕೆ ಮಣೆಹಾಕಿದೆ. ಈ ವಿಚಾರವನ್ನು ಬಗೆಹರಿಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಪೀಠದ ಮುಂದೆ ಹೇಳಿದೆ. ರಾಜ್ಯಗಳು ಈ ಮಾದರಿಯ ಅರ್ಜಿಗಳನ್ನು ಹಿಡಿದುಕೊಂಡು ಸುಪ್ರೀಂಕೋರ್ಟಿಗೆ ಬರುತ್ತಿರುವುದನ್ನು ಕೂಡ ನ್ಯಾಯಪೀಠ ಗಮನಿಸಿದೆ. ಎರಡು ವಾರಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೇಂದ್ರ ಹೇಳಿದೆ. ಈಗ ಬರಪರಿಹಾರ ಬಿಡುಗಡೆಯಾದರೆ ಕನಿಷ್ಠ ನೊಂದ ರೈತರ ಖಾತೆಗೆ ಕನಿಷ್ಠ 13 ರಿಂದ 15 ಸಾವಿರ ಜಮೆಯಾಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಈ ಸಮಸ್ಯೆ ನವೆಂಬರ್ ತಿಂಗಳಲ್ಲೇ ಇತ್ಯರ್ಥ ಆಗಬೇಕಿತ್ತು. ಆದರೆ ಇದೀಗ ಏಪ್ರಿಲ್ ತಿಂಗಳು ನಡೆಯುತ್ತಿದೆ. ಕರ್ನಾಟಕದ ಕಡತಗಳನ್ನು ಕೇಂದ್ರ ಸರ್ಕಾರ ಮುಚ್ಚಿಟ್ಟು ಕೂತಿದೆ. ಚುನಾವಣೆ ಸಮಯ ಬಂದಿದೆ ಅಂದರೆ ಜನರಿಗೆ ಬರಗಾಲ ತಪ್ಪಿದೆಯಾ? ಕರ್ನಾಟಕದಿಂದ ಬಂದು ನಿಮ್ಮ ಕದತಟ್ಟಿದ್ದೇವೆ. ಪೇಟ ಹಾಕಿದ್ದೇವೆ, ಶಾಲು ಹೊದಿಸಿದ್ದೇವೆ. ಹಾರ ಹಾಕಿ, ಕೈ ಜೋಡಿಸಿ ಬರಪರಿಹಾರ ಕೊಡಿ ಅಂಥ ಕೇಳಿದ್ದೇವೆ. ಆಗ ಕೊಡದೇ ಈಗ ಬೇರೆ ಬೇರೆ ಕಥೆ ಹೇಳುವುದು ಸರಿ ಅಲ್ಲ. ಅದನ್ನು ಬಿಟ್ಟು, ಪರಿಹಾರ ಬಿಡುಗಡೆ ಮಾಡುವ ಕಡೆ ಕೇಂದ್ರ ಸರ್ಕಾರ ಗಮನಹರಿಸಿದರೆ ಒಳ್ಳೆಯದು ಎಂದು ಕಿಡಿಕಾರಿದರು.