ಸಾರಾಂಶ
ಬಿ.ಎಸ್. ಸುನೀಲ್
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ವಾರ್ಷಿಕ ೧೫ ಲಕ್ಷ ರು.ಗೂ ಹೆಚ್ಚು ಲಾಭ ಗಳಿಸುವ ಮೂಲಕ ಕೃಷಿ ಲಾಭದಾಯಕ ಕ್ಷೇತ್ರ ಎಂಬುವುದನ್ನು ಬೊಪ್ಪಸಮುದ್ರದ ಪ್ರಗತಿಪರ ಕೃಷಿಕ ಬಿ.ಎಂ.ನಂಜೇಗೌಡ ಸಾಬೀತು ಪಡಿಸಿದ್ದಾರೆ.
ಕೃಷಿಯಲ್ಲಿ ಹೊಸ ಹೊಸ ಪದ್ಧತಿಗಳು ಹಾಗೂ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಅದಾಯ ತರಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಎಂ.ಎ.ಪದವೀಧರರಾಗಿರುವ ಇವರು ಪ್ರತಿಷ್ಠಿತ ಭಾರತೀ ವಿದ್ಯಾ ಸಂಸ್ಥೆ ಟ್ರಸ್ಟ್ ಮತ್ತು ಮಂಡ್ಯದ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಕೆಲಸ ನಿರ್ವಹಿಸಿಕೊಂಡು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಮಾದರಿ ಬೇಸಾಯ ಪದ್ಧತಿಯನ್ನು ಅನುಸರಿಸಿ ತಮಗಿರುವ ೨೦ ಎಕರೆಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ಸಹಜ ಬೇಸಾಯ ಮಾಡುತ್ತಾ ಮರದಿಂದ ಉದುರುವ ಎಲೆ, ತೆಂಗಿನ ಗರಿ, ಕಾಯಿ ಸಿಪ್ಪೆಗಳನ್ನು ಗೊಬ್ಬರವಾಗಿ ಮಾರ್ಪಡಿಸಿ ವ್ಯವಸಾಯ ಮಾಡುವುದರೊಂದಿಗೆ ಉತ್ತಮ ಇಳುವರಿ ತೆಗೆಯುತ್ತಾ ಬಂದಿದ್ದಾರೆ.ಜಮೀನಿನ ಸುತ್ತ ಬೇಲಿ ನಿರ್ಮಾಣ ಮಾಡಿ ಬೇಲಿಯ ಸುತ್ತ ಎಲೆ ಬಳ್ಳಿಗಳು, ಕಾಫೀ ಬೆಳೆಯನ್ನು ಬೆಳೆಯುತ್ತಾರೆ. ತಮಗಿರುವ ೨೦ ಎಕರೆ ಜಮೀನಿನಲ್ಲಿ ೧೭ ವರ್ಷಗಳ ಹಿಂದೆ ಬೆಳೆದ ತೇಗ, ತೆಂಗು, ಸೀಬೆ, ಮಾವು, ಸಪೋಟ ಸೇರಿದಂತೆ ಇತರೆ ಮರಗಳಿಂದ ಲಕ್ಷಾಂತರ ಆದಾಯ ಪಡೆಯುತ್ತಿದ್ದಾರೆ.
ಇವರ ಹೊಲದಲ್ಲಿ ಸುಮಾರು ೬೦೦ ಸಿಒಡಿ ಆರೆಂಜ್ ತೆಂಗು ಬೆಳೆದು ಒಂದು ತೆಂಗಿನ ಕಾಯಿ ೪೦ ರು. ಮಾರಾಟವಾಗುತ್ತಿದೆ. ಈ ತೆಂಗಿನ ಮರಗಳಿಂದ ವಾರ್ಷಿಕ ೫ ಲಕ್ಷಕ್ಕೂ ಹೆಚ್ಚು ಆದಾಯ ದೊರಕುತ್ತಿದೆ. ಇವರಿಗಿರುವ ೨೦ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ ಆರಂಭಿಸಿ ೩೦೦ ನಾಟಿ ತೆಂಗು, ೨೦೦೦ ಅಡಕೆ, ೫೦೦ ಮೆಣಸು, ೩೦೦ ಕಾಫೀ ಬೆಳೆ, ೧೦೦ ಮಾವು, ೨೫ ಸಪೋಟ, ೧೦ ಜಾಯಿಕಾಯಿ, ೧೦ ಹಲಸು, ೨೦ ಡ್ರ್ಯಾಗನ್ ಪ್ರೂಟ್, ಕಿತ್ತಳೆ, ನಿಂಬೆ, ಮೂಸಂಬೆಗಳನ್ನು ಬೆಳೆಯುತ್ತಿದ್ದು ಇದರಿಂದ ಹೆಚ್ಚೆಚ್ಚು ಆದಾಯ ಗಳಿಸುತ್ತಿದ್ದಾರೆ.ಒಂದು ಎಕರೆ ಕೃಷಿ ಭೂಮಿಗೆ ೨೦೦ ಲೀಟರ್ ಜೀವಾಮೃತ ಸಾಕಾಗುತ್ತದೆ. ರಾಸಾಯನಿಕ ಔಷಧಗಳ ಬದಲಿಗೆ ನೈಸರ್ಗಿಕವಾಗಿ ತಯಾರಿಸಲಾದ ಈ ದ್ರಾವಣವನ್ನು ಬೆಳೆಗೆ ಸಿಂಪಡಿಸುವುದರಿಂದ ಸಸ್ಯಗಳಿಗೆ ಪೋಷಕಾಂಶ ಸಿಗುವ ಜತೆ ಬ್ಯಾಕ್ಟೀರೀಯ, ಶಿಲಿಂದ್ರಗಳಿಗೆ ಬರುವ ರೋಗವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ರೈತ ನಂಜೇಗೌಡ.
ನಾನು ಮೊದಲಿನಿಂದಲೂ ಸಾವಯವ ಕೃಷಿ ಪಿತಾಮಹಾ ಸುಭಾಷ್ ಪಾಳೇಕರ್ ಹಾಗೂ ಜಪಾನಿನ ಮಸನೊಬು ಫುಕುವೊಕ ಅವರ ಪುಸ್ತಕಗಳನ್ನು ಓದಿಕೊಂಡು ಬರುತ್ತಿದ್ದು, ಶೂನ್ಯ ಬಂಡವಾಳದಿಂದ ಆದಾಯ ತೆಗೆಯುವುದು ಹೇಗೆ ಎಂದು ತಿಳಿದು ಇಂದು ವಾರ್ಷಿಕ ೧೫ ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಾ ಬಂದಿದ್ದೇನೆ.- ಬಿ.ಎಂ.ನಂಜೇಗೌಡ, ಸಾವಯುವ ಕೃಷಿಕ
ಮೇ ೩ರಂದು ಟಿ.ತಿಮ್ಮೇಗೌಡ ಪ್ರತಿಷ್ಠಾನದಿಂದ ಪ್ರಶಸ್ತಿ ಪ್ರದಾನ ಸಮಾರಂಭಕನ್ನಡಪ್ರಭ ವಾರ್ತೆ ಮಂಡ್ಯ
ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದಿಂದ ಪ್ರಶಸ್ತಿ ಪ್ರದಾನ ಸಮಾರಂಭ ಮೇ ೩ರ ಸಂಜೆ ೫ ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್ ತಿಳಿಸಿದರು.ಸಮಾರಂಭದಲ್ಲಿ ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ, ಶ್ರೀಮತಿ ಲಿಂಗಮ್ಮ ದೊಡ್ಡತಿಮ್ಮೇಗೌಡ ಕೃಷಿಕ ಪ್ರಶಸ್ತಿ, ಶ್ರೀಮತಿ ಎಂ.ಆರ್.ಶಶಿಕಲಾ ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಮಾಡಲಿದ್ದು, ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವ ವಿದ್ಯಾಲಯ ತರುವಲ್ಲಿ ಯಶಸ್ವಿಯಾದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಗೌರವಿಸಿ ಅಭಿನಂದಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವಮಾನವ ಕ್ಷೇತ್ರದ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯದ ಕಾರ್ಯಕ್ರಮವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿ, ಅಭಿನಂದನೆ ಸ್ವೀಕರಿಸುವರು ಎಂದು ನುಡಿದರು.ಜನಮುಖಿ ಐಎಎಸ್ ಅಧಿಕಾರಿ ಪ್ರಶಸ್ತಿಯನ್ನು ನೋಂದಣಿ ಮಹಾಪರಿವೀಕ್ಷಕ ಮತ್ತು ಮುದ್ರಣ ಆಯುಕ್ತ ಡಾ.ಕೆ.ಎ. ದಯಾನಂದ ಅವರಿಗೆ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಪ್ರದಾನ ಮಾಡುವರು, ಶ್ರೀಮತಿ ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ ಬಿ.ಎಂ.ನಂಜೇಗೌಡ ಅವರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಪ್ರದಾನ ಮಾಡುವರು, ಶ್ರೀಮತಿ ಎಂ.ಆರ್.ಶಶಿಕಲಾ ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರವನ್ನು ಸೌಮ್ಯ ಹಾಗೂ ಮೋನಿಷಾ ಅವರಿಗೆ ಶಾಸಕ ಪಿ.ರವಿಕುಮಾರ್ ನೀಡುವರು ಎಂದು ವಿವರಿಸಿದರು.
ಪ್ರತಿಷ್ಠಾನದ ಸಲಹೆಗಾರ ಡಾ.ಎಚ್.ಎಂ.ವೆಂಕಟಪ್ಪ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಟಿ.ತಿಮ್ಮೇಗೌಡ, ಎಂ.ಆರ್.ಶಶಿಕಲಾ ತಿಮ್ಮೇಗೌಡ ಉಪಸ್ಥಿತರಿರುವರು. ಪ್ರಶಸ್ತಿ ಪುರಸ್ಕೃತರಿಗೆ ೨೫ ಸಾವಿರ ರು. ನಗದು, ಪ್ರತಿಭಾ ಪುರಸ್ಕಾರಕ್ಕೆ ತಲಾ ೫೦೦೦ ರು. ನಗದು ನೀಡಲಾಗುವುದು ಎಂದು ಮಾಹಿತಿ ನೀಡಿದರು.ಗೋಷ್ಠಿಯಲ್ಲಿ ಪ್ರತಿಷ್ಠಾನದ ಜಂಟಿ ಕಾರ್ಯದರ್ಶಿ ಕನ್ನಿಕಾ, ಡಿ.ಎಲ್.ದೇವರಾಜು, ಶಂಕರೇಗೌಡ, ಟ್ರಸ್ಟಿಗಳಾದ ಲಂಕೇಶ್, ಕೃಷ್ಣೇಗೌಡ ಇದ್ದರು.