ಸಾಲ ಬಾಧೆ ಮತ್ತು ಬೆಳೆ ನಷ್ಟದಿಂದ ಮನನೊಂದಿದ್ದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಬುಧವಾರ ನಸುಕಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಸಾಲ ಬಾಧೆ ಮತ್ತು ಬೆಳೆ ನಷ್ಟದಿಂದ ಮನನೊಂದಿದ್ದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಬುಧವಾರ ನಸುಕಿನಲ್ಲಿ ನಡೆದಿದೆ.

ತಿಮ್ಮೇನಹಳ್ಳಿ ಗ್ರಾಮದ ಸೋಮನಗೌಡ ನಿಂಗನಗೌಡ ಮುದಿಗೌಡ್ರ (47) ನೇಣಿಗೆ ಶರಣಾದ ರೈತ. ರೈತ ತಮ್ಮದೇ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಅವರ ಪತ್ನಿ ರೂಪಾ ಮುದಿಗೌಡ್ರ ಗುತ್ತಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

4 ವರ್ಷಗಳ ಹಿಂದೆ ಅಗಡಿಯ ಕೆವಿಜಿ ಬ್ಯಾಂಕ್‌ನಿಂದ ₹6 ಲಕ್ಷ ಬೆಳೆ ಸಾಲ ಪಡೆದು ಜಮೀನಿನಲ್ಲಿ ಮೆಣಸಿನ ಗಿಡ, ಮೆಕ್ಕೆಜೋಳ ಮತ್ತು ಇತರೆ ಬೆಳೆಗಳನ್ನು ಬೆಳೆದಿದ್ದರು. ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಮತ್ತೆ ಸಾಲ ಮಾಡಿದ್ದರು. ಆದರೆ ಕಳೆದ 2 ವರ್ಷಗಳಿಂದ ಸತತ ಮಳೆಯಿಂದ ಬೆಳೆಗಳು ಹಾನಿಯಾಗಿ ಸರಿಯಾದ ಇಳುವರಿ ಬಾರದ ಕಾರಣ ಸಾಲ ತೀರಿಸಲು ಆಗಿರಲಿಲ್ಲ. ಸಾಲದ ಬಗ್ಗೆ ಚಿಂತೆ ಮಾಡುತ್ತಿದ್ದರು. ಆದರೀಗ ಅಸಲು ಬಡ್ಡಿ ಸೇರಿ ಸುಮಾರು ₹8,94,526 ಗಳಷ್ಟು ಆಗಿದೆ. ಇದನ್ನು ತೀರಿಸುವುದು ಹೇಗೆ ಎಂದು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೂಪಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಶವವಿಟ್ಟು ಪ್ರತಿಭಟನೆ:

ಮಳೆ ಇಲ್ಲದೆ ಬೆಳೆ ಇಲ್ಲ. ಆದಾಯವೂ ಇಲ್ಲ. ಆದರೆ ಸಾಲ ಕಟ್ಟುವಂತೆ ಬ್ಯಾಂಕಿನವರು ನೋಟಿಸ್ ನೀಡಿ ಒತ್ತಡ ಹಾಕಿದ್ದಾರೆಂದು ಆರೋಪಿಸಿ ತಿಮ್ಮೇನಹಳ್ಳಿ ಗ್ರಾಮದ ರೈತರು ಹಾಗೂ ಮೃತರ ಕುಟುಂಬಸ್ಥರು ಅಗಡಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು. ತಿಮ್ಮೇನಹಳ್ಳಿ ಗ್ರಾಮದಲ್ಲೇ 15ಕ್ಕೂ ಹೆಚ್ಚು ರೈತರಿಗೆ ಇದೇ ರೀತಿಯ ಕೋರ್ಟ್ ನೋಟಿಸ್ ಜಾರಿಯಾಗಿದೆ ಎಂದು ರೈತರು ಆರೋಪಿಸಿದರು.

ಬ್ಯಾಂಕ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ನ್ಯಾಯ ಸಿಗುವವರೆಗೂ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಬ್ಯಾಂಕ್ ಬಂದ್ ಮಾಡಿಸಿ ಬಿಗಿ ಭದ್ರತೆ ಕಲ್ಪಿಸಿದ್ದರು.

ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದರು. ಬೀಜ, ಗೊಬ್ಬರ, ಔಷಧಕ್ಕಾಗಿ ಸಾಲ ಮಾಡಿಕೊಂಡಿದ್ದೇವೆ. ಪ್ರಕೃತಿಯೇ ಕೈಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಕೋರ್ಟ್ ನೋಟಿಸ್ ನೀಡಿ ಮಾನಸಿಕ ಒತ್ತಡ ತಂದರೆ ರೈತ ಬದುಕುವುದು ಹೇಗೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ, ಮೃತ ರೈತನ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು. ಬಳಿಕ ಪೊಲೀಸರು ರೈತರೊಂದಿಗೆ ಮಾತನಾಡಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.