ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮೀಣ ರೈತರಿಗೆ ರೈತ ಸಂಪರ್ಕ ಕೇಂದ್ರಗಳು ಕಲ್ಪವೃಕ್ಷವಿದ್ದಂತೆ. ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆ ಮೂಲಕ ದೊರಕುವ ಸರ್ಕಾರದ ಸೌಲಭ್ಯ ಹಾಗೂ ಯಾವುದೇ ಬೆಳೆ ಬೆಳೆಯಲು ಸಲಹೆ ಮಾರ್ಗದರ್ಶನಗಳನ್ನು ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.ತಾಲೂಕಿನ ಬೆಳ್ಳೂರಿನಲ್ಲಿ 2 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸ್ವಾತಂತ್ರ್ಯ ನಂತರ ಇಡೀ ರಾಜ್ಯದಲ್ಲಿ ಕೇವಲ ಬೆರಳೆಣಿಕೆಯಷ್ಟು ರೈತ ಸಂಪರ್ಕ ಕೇಂದ್ರಗಳಿದ್ದವು. ಕಳೆದ ಮೂರು ವರ್ಷದಲ್ಲಿ 200ಕ್ಕೂ ಹೆಚ್ಚು ರೈತ ಸಂಪರ್ಕ ಕೇಂದ್ರ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದರು.
ಈ ಹಿಂದೆ ನಾನು ಆರೋಗ್ಯ ಸಚಿವನಾಗಿದ್ದ ಅವಧಿಯಲ್ಲಿ ಇಡೀ ರಾಜ್ಯಕ್ಕೆ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೊಟ್ಟು ನಮ್ಮ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ 15 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿತ್ತು ಎಂದರು.ಜಿಲ್ಲೆಯಲ್ಲಿ ಸ್ವಂತ ನಿವೇಶನ ಹೊಂದಿರುವ ಎಲ್ಲಾ ಹೋಬಳಿ ಕೇಂದ್ರಗಳಿಗೂ ಆದ್ಯತೆ ಮೇರೆಗೆ ರೈತ ಸಂಪರ್ಕ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿರುವ 8 ರೈತ ಸಂಪರ್ಕ ಕೇಂದ್ರಗಳು ಉದ್ಘಾಟನೆಗೆ ಸಿದ್ಧವಾಗಿವೆ ಎಂದರು.
ಅಧಿಕಾರ ನಮ್ಮೊಂದಿಗೆ ಶಾಶ್ವತವಾಗಿ ಇರುವುದಿಲ್ಲ. ಸಿಕ್ಕ ಅವಕಾಶದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂಬುದು ನನ್ನ ಮುಖ್ಯ ಉದ್ದೇಶ. ಬೆಳ್ಳೂರು ಹೋಬಳಿಯ ಜನರು ರಾಜಕೀಯವಾಗಿ ಪ್ರತಿ ಹಂತದಲ್ಲಿಯೂ ನನಗೆ ಹೆಚ್ಚು ಶಕ್ತಿ ನೀಡಿದ್ದಾರೆ. ಹಾಗಾಗಿ ಈ ಹೋಬಳಿಯ ಸರ್ವತೋಮುಖ ಅಭಿವೃದ್ಧಿಗೆ ಕಳೆದ ಮೂರು ವರ್ಷದಲ್ಲಿ 1 ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದರು.
ಇಷ್ಟು ಮಾತ್ರವಲ್ಲದೆ 30 ಕೋಟಿ ರು. ವೆಚ್ಚದಲ್ಲಿ ಬೆಳ್ಳೂರು ಪಟ್ಟಣದ ಕುಡಿಯುವ ನೀರಿನ ಯೋಜನೆ, ದಾಸನಕೆರೆ ಅಭಿವೃದ್ಧಿಗೆ 25 ಕೋಟಿ, ನೀರಾವರಿ ಇಲಾಖೆಯಿಂದ ರಸ್ತೆ ಅಭಿವೃದ್ಧಿಗೆ 6 ಕೋಟಿ ಸೇರಿದಂತೆ 24 ಕೋಟಿಗೂ ಅಧಿಕ ವೆಚ್ಚದಲ್ಲಿ ಒಳಚರಂಡಿ, ಹಾಸ್ಟೆಲ್, ಅಂಬೇಡ್ಕರ್ ಭವನ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಹಾಸ್ಟೆಲ್, ಪೌರಕಾರ್ಮಿಕರ ವಸತಿ ಗೃಹ, ಪಟ್ಟಣ ಪಂಚಾಯ್ತಿ ಕಟ್ಟಡ ಮತ್ತು ಶಾದಿಮಹಲ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದ್ಯಾವ ಪುಣ್ಯಾತ್ಮರು ಇಷ್ಟೊಂದು ಕೆಲಸಗಳನ್ನು ಮಾಡಿದ್ದಾರೋ ಹೇಳಲಿ ಎಂದು ಬಿಜೆಪಿ ಜೆಡಿಎಸ್ ನಾಯಕರನ್ನು ಜರಿದರು.
2018ರ ಚುನಾವಣೆಯಲ್ಲಿ ನಾನು ಸೋತು 5 ವರ್ಷದವರೆಗೆ ಬೆಳ್ಳೂರು ಕ್ರಾಸ್‌ನಿಂದ ಹೊಸಮನೆ ಗೇಟ್ ವರೆಗೆ ಗುಂಡಿಬಿದ್ದಿದ್ದ ರಸ್ತೆಗೆ ಡಾಂಬರೀಕರಣ ಮಾಡಲಾಗಲಿಲ್ಲವೆಂದರೆ ನನ್ನ ವಿರುದ್ಧ ಮಾತನಾಡುವವರಿಗೆ ನಾಚಿಕೆಯಾಗಬೇಕು. ಈಗ ನಾನು ಆ ರಸ್ತೆ ಅಭಿವೃದ್ಧಿಗೆ 2 ಕೋಟಿ ರು. ಮಂಜೂರು ಮಾಡಿಸಿದ್ದೇನೆ. ಬೆಳ್ಳೂರು ಕ್ರಾಸ್ ಮೂಲಕ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಯ್ದು ಹೋಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಲು 4 ಕೋಟಿ ರು. ಮಂಜೂರು ಮಾಡಿಸಲಾಗಿದೆ ಎಂದರು.ಈ ವೇಳೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಪಾಂಡವಪುರ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಕೆಆರ್‌ಐಡಿಎಲ್‌ನ ಇಇ ಸೋಮಶೇಖರ್, ಎಇಇ ಚೈತ್ರ, ಮುಖಂಡರಾದ ಸುನಿಲ್ ಲಕ್ಷ್ಮೀಕಾಂತ್, ಎಚ್.ಟಿ.ಕೃಷ್ಣೇಗೌಡ, ಕನ್ನಾಘಟ್ಟ ವೆಂಕಟೇಶ್, ಕೆ.ವಿ.ದಿನೇಶ್, ರಂಗೇಗೌಡ, ಪಾಪಣ್ಣ, ಶಿವಣ್ಣ, ಯಾಸೀನ್, ಯಶೋಧಮ್ಮ ಸೇರಿದಂತೆ ಹಲವರು ಇದ್ದರು.
150 ಕೋಟಿ ರು.ವೆಚ್ಚದಲ್ಲಿ ನೆಲ್ಲಿಗೆರೆ ಕ್ರಾಸ್ ಅಭಿವೃದ್ಧಿ: ಚಲುವರಾಯಸ್ವಾಮಿನಾಗಮಂಗಲ:ತಾಲೂಕಿನ ನೆಲ್ಲಿಗೆರೆ ಕ್ರಾಸ್ ಅನ್ನು 150 ಕೋಟಿಗೂ ಅಧಿಕ ವೆಚ್ಚದಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.ಬೆಳ್ಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಿಂದ ಹಾಸನ ಹಾಗೂ ಆದಿಚುಂಚನಗಿರಿಯಿಂದ ಮೈಸೂರು ಕಡೆಗೆ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕಾಗಿ ಬೆಂಗಳೂರು, ದೆಹಲಿ, ಮುಂಬೈನಂತಹ ದೊಡ್ಡ ನಗರ ಪ್ರದೇಶಗಳಲ್ಲಿರುವಂತೆ ನೆಲ್ಲಿಗೆರೆ ಕ್ರಾಸ್ ಅಭಿವೃದ್ಧಿ ಮಾಡಲಾಗುವುದು ಎಂದರು.ಇದಕ್ಕೂ ಮುನ್ನ ಬೆಳ್ಳೂರು ಪಪಂ ವ್ಯಾಪ್ತಿಯ ಒಳಚರಂಡಿ ನೀರನ್ನು ಶುದ್ಧೀಕರಿಸಲು ತಾವರೆಕೆರೆ ಬಳಿ 4.5 ಕೋಟಿ ರು. ವೆಚ್ಚದಲ್ಲಿ ಕ್ಯಾಮಸ್ ತಂತ್ರಜ್ಞಾನ ಆಧಾರಿತ 2.46 ಎಂಎಲ್‌ಡಿ ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕ, ಬೆಳ್ಳೂರಿನಲ್ಲಿ 3.25 ಕೋಟಿ ರು. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಭವನ ಹಾಗೂ ನಿವೃತ್ತ ಸರ್ಕಾರಿ ನೌಕರರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಬೆಳ್ಳೂರು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ನಾಗಲಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು.