ಲಕ್ಷ್ಮೇಶ್ವರದಲ್ಲಿ ಪ್ರತಿಭಟನೆ ವೇಳೆ ರೈತ ಅಸ್ವಸ್ಥ, ಆಸ್ಪತ್ರೆಗೆ ದಾಖಲು

| Published : Nov 19 2025, 01:15 AM IST

ಸಾರಾಂಶ

ಪ್ರತಿಭಟನೆ ವೇಳೆ ಆದರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ಮಾತನಾಡಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಹನೆ ಪರೀಕ್ಷೆ ಮಾಡುತ್ತಿದ್ದಾರೆ ಎಂದರು.

ಲಕ್ಷ್ಮೇಶ್ವರ: ಬೆಂಬಲ ಬೆಲೆಯಲ್ಲಿ ಗೋವಿನಜೋಳ ಖರೀದಿಸುವಂತೆ ಆಗ್ರಹಿಸಿ ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ 4ನೇ ದಿನಕ್ಕೆ ಕಾಲಿಟ್ಟಿದೆ. ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರೊಬ್ಬರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಂದ್ರು ಮಾಗಡಿ ಎಂಬವರೇ ಪ್ರತಿಭಟನೆ ವೇಳೆ ಅಸ್ವಸ್ಥರಾದ ರೈತ. ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ರೈತ ಚಂದ್ರು ಮಾಗಡಿ ಅವರನ್ನು ಕೂಡಲೇ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲೋ ಬಿಪಿಯಿಂದ ಚಂದ್ರು ಮಾಗಡಿ ಅವರು ಅಸ್ವಸ್ಥರಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಪ್ರತಿಭಟನೆ ವೇಳೆ ಆದರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ಮಾತನಾಡಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಹನೆ ಪರೀಕ್ಷೆ ಮಾಡುತ್ತಿದ್ದಾರೆ. ರಾಜಕೀಯ ಮುಖಂಡರಿಗೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯ ರೈತರು ಕಳೆದ ನಾಲ್ಕು ದಿನಗಳಿಂದ ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿದ್ದಾರೆ. ಅವರು ಯಾಕೆ ಹೋರಾಟ ಮಾಡುತ್ತಿದ್ದಾರೆ? ಅವರ ಗೋಳು ಏನು? ಎಂದು ಕೇಳುವ ಸೌಜನ್ಯ ಆಡಳಿತ ನಡೆಸುವ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಸಚಿವರಿಗೆ ಹಾಗೂ ಕ್ಷೇತ್ರದ ಶಾಸಕರಿಗೆ ಇಲ್ಲ. ಹೀಗಾಗಿ ಅವರೆಲ್ಲ ಇತ್ತ ಮುಖ ಮಾಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರೈತರು ನಡೆಸುತ್ತಿರುವ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ. ರೈತರ ಹೋರಾಟಕ್ಕೆ ಜಯ ಸಿಗುವ ವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ರೈತರು ಪಾಳಾ- ಬಾದಾಮಿ ರಸ್ತೆಯನ್ನು ಬಂದ್ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ರೈತರ ಮನವೊಲಿಸಿ ರಸ್ತೆ ತೆರವುಗೊಳಿದರು.

ಜಿಲ್ಲೆಯ ವಿವಿಧ ರೈತ ಮುಖಂಡರು ಹಾಗೂ ರಾಜಕೀಯ ಮುಖಂಡರು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಆದ್ರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು, ಬಸಣ್ಣ ಬೆಂಡಿಗೇರಿ, ಮಂಜುನಾಥ ಮಾಗಡಿ, ಪೂರ್ಣಾಜಿ ಕರಾಟೆ, ಟಾಕಪ್ಪ ಸಾತಪೂತೆ, ಸುಜಾತಾ ದೊಡ್ಡಮನಿ, ನಾಗರಾಜ ಮಡಿವಾಳರ, ಎಂ.ಎಸ್. ದೊಡ್ಡಗೌಡರ, ಸೋಮಣ್ಣ ಡಾಣಗಲ್ಲ, ರವಿಕಾಂತ ಅಂಗಡಿ, ಭರಮಣ್ಣ ರೊಟ್ಟಿಗವಾಡ, ನಾಗರಾಜ ಚಿಂಚಲಿ, ಚನ್ನಪ್ಪ ಷಣ್ಮುಖಿ, ಜಯಕ್ಕ ಕಳ್ಳಿ, ನೀಲಪ್ಪ ಶೆರಸೂರಿ, ಶಿವಾನಂದ ದೇಸಾಯಿ, ಬಸಣ್ಣ ಹಂಜಿ, ಬಸವರಾಜ ಹಿರೇಮನಿ, ಬಸವರಾಜ ಮೇಲ್ಮುರಿ, ನೀಲಪ್ಪ ಕರ್ಜಕ್ಕಣ್ಣವರ, ದೊಡ್ಡ ವೀರಪ್ಪ ಕುಂಬಾರ, ರಮೇಶ ಹಂಗನಕಟ್ಟಿ, ಪ್ರಕಾಶ ಕೊಂಚಿಗೇರಿಮಠ, ಶೇಖಣ್ಙ ಕಾಳೆ, ದಾದಾಪೀರ್ ಮುಚ್ಚಾಲೆ, ಉಮೇಶ ನಾಯ್ಕ್, ಮೋಹನ್ ನಂದೆಣ್ಣನವರ, ತಿಪ್ಪಣ್ಣ ಸಂಶಿ ಹಾಗೂ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಪ್ರದವಾಗದ ಅಧಿಕಾರಿಗಳ ಭೇಟಿ

ಲಕ್ಷ್ಮೇಶ್ವರ: ಗೋವಿನಜೋಳದ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸುವಂತೆ ಕಳೆದ ನಾಲ್ಕು ದಿನಗಳಿಂದ ವಿವಿಧ ರೈತಪರ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ವೇದಿಕೆಗೆ ಮಂಗಳವಾರ ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ ಕೆ.ಆರ್. ಅವರು ಭೇಟಿ ನೀಡಿ ಹೋರಾಟಗಾರರ ಜತೆ ಚರ್ಚಿಸಿದರು.ಈ ವೇಳೆ ಮಾತನಾಡಿದ ಅವರು, ಸಚಿವ ಸಂಪುಟದ ಉಪಸಮಿತಿಯಲ್ಲಿ ಖರೀದಿ ಕೇಂದ್ರದ ಕುರಿತು ಚರ್ಚೆ ಆಗಬೇಕು. ನಂತರ ಕ್ಯಾಬಿನೇಟ್ ನಿರ್ಧಾರದ ನಂತರ ಕೇಂದ್ರ ತೆರೆಯಲು ಅವಕಾಶ ಇದೆ. ಇದಕ್ಕೆ ಎರಡ್ಮೂರು ದಿನ ಬೇಕಾಗುತ್ತದೆ. ಸರ್ಕಾರದಿಂದ ಸಿಹಿ ಸುದ್ದಿ ಬರುತ್ತದೆ. ಕಾರಣ ಧರಣಿ ಸತ್ಯಾಗ್ರಹ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ರೈತರು ಒಪ್ಪದೆ ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಆಗುವ ವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮುಂದುವರಿಸಿದರು.

ಉಪವಿಭಾಗಾಧಿಕಾರಿ ಗಂಗಪ್ಪ, ಡಿವೈಎಸ್‌ಪಿ ಮುರ್ತುಜಾ ಖಾಜಿ, ತಹಸೀಲ್ದಾರ್ ಕೆ. ರಾಘವೇಂದ್ರ, ಸಿಪಿಐ ಡಿ.ವಿ. ನೇಮಗೌಡ ಇದ್ದರು.ನಾಳೆ ಲಕ್ಷ್ಮೇಶ್ವರ ಬಂದ್‌ಗೆ ಕರೆ

ಗೋವಿನಜೋಳ ಖರೀದಿ ಕೇಂದ್ರ ತೆರೆಯುವ ಕುರಿತು ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸದ ಹಿನ್ನೆಲೆ ಗುರುವಾರ ಲಕ್ಷ್ಮೇಶ್ವರ ಬಂದ್ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ತಿಳಿಸಿದರು. ಸಾರ್ವಜನಿಕರು ಬಂದ್‌ಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.