- ಜು.೪ರಂದು ಸಭೆ ನಡೆಸಿ ಸಮಸ್ಯೆಗಳ ಚರ್ಚೆ: ಡಿಸಿ ಭರವಸೆ

- - -

ಮಲೇಬೆನ್ನೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಮುಖಂಡರು ಸೋಮವಾರ ಸಮೀಪದ ಹಾಲಿವಾಣ, ಮಲೇಬೆನ್ನೂರು ಮೂಲಕ ರಸ್ತೆ ತಡೆ ನಡೆಸಿ, ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್‍ಯಾಲಿ ನಡೆಸಿದರು.

ಬೆಳಗ್ಗೆ ಹಾಲಿವಾಣ ಗ್ರಾಮದ ಕರಿಯಮ್ಮ ದೇವಾಲಯ ಆವರಣದಲ್ಲಿ ಜಮಾವಣೆಗೊಂಡ ರೈತ ಮುಖಂಡರು, ಅತಿವೃಷ್ಠಿ ಆಲಿಕಲ್ಲು ಮಳೆಯಿಂದ ಕೊಮಾರನಹಳ್ಳಿ, ಕೊಪ್ಪ, ಹಾಲಿವಾಣ, ಮಲೇಬೆನ್ನೂರು, ಸಿರಿಗೆರೆ, ಕುಂಬಳೂರು ಗ್ರಾಮಗಳ ಅನೇಕ ರೈತರ ಭತ್ತ, ಬಾಳೆ, ಮತ್ತು ಅಡಕೆ ಬೆಳೆಗೆ ಹಾನಿಯಾಗಿದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದರೂ ರೈತರಿಗೆ ಬೆಳೆ ಹಾನಿ ಪರಿಹಾರ ಬಂದಿಲ್ಲ. ಆವರ್ತ ನಿಧಿಯಲ್ಲಿ ಹಣ ಇದೆಯೋ ಇಲ್ಲವೋ ಅಧಿಕಾರಿಗಳು ತಿಳಿಸುತ್ತಿಲ್ಲ ಎಂದರು.

ಬಕರ್‌ಹುಕುಂ ರೈತರಿಗೆ ಸಾಗುವಳಿ ಪತ್ರ ನೀಡದಿರುವ ಕಾರಣ ಬೈಕ್ ರ್‍ಯಾಲಿ ಮೂಲಕ ಮಲೇಬೆನ್ನೂರು ನೀರಾವರಿ ಇಲಾಖೆ ಆವರಣದಲ್ಲಿ ಸಭೆ ನಡೆಸಿ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಡಿಸಿಗೆ ಮನವಿ ನೀಡಿದ್ದೇವೆ ಎಂದು ರೈತ ಸಂಘದ ರಾಜ್ಯ ಕಾರ್ಯಾದ್ಯಕ್ಷ ಹಾಳೂರು ನಾಗರಾಜ್ ಈ ಸಂದರ್ಭ ತಿಳಿಸಿದರು.


ಮನವಿ ಸ್ವೀಕರಿಸಿದ ಡಿಸಿ ಗಂಗಾಧರ ಸ್ವಾಮಿ ಅವರು, ಜುಲೈ ೪ರಂದು ಬೆಳಗ್ಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮತ್ತು ರೈತ ಮುಖಂಡರ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸೋಣ ಎಂದು ಭರವಸೆ ನೀಡಿದ್ದಾರೆ ಎಂದರು.

ನಂದಿತಾವರೆ ನಂದೀಶ್ ಮಾತನಾಡಿ, ವಿದ್ಯುತ್‌ ವಲಯ ಖಾಸಗೀಕರಣ ಮಾಡುವ ಸರ್ಕಾರದ ಹುನ್ನಾರಕ್ಕೆ ಲಕ್ಷಾಂತರ ರೈತರ ವಿರೋಧವಿದೆ. ಯಾವುದೋ ಖಾಸಗಿ ಕಂಪನಿ ಮನವಿಗೆ ಸೊಪ್ಪು ಹಾಕದೇ ಯಥಾಸ್ಥಿತಿಯಲ್ಲಿ ಬೆಸ್ಕಾಂ ಉಳಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಈರಣ್ಣ, ರಂಗನಗೌಡ, ತಿಪ್ಪೇಶ್, ಹಾಲೇಶ್, ತಿಪ್ಪೇಸ್ವಾಮಿ, ರುದ್ರೇಶ್, ಸಂತೋಷ್, ನಾಗೇಂದ್ರಪ್ಪ, ಕರಿಸಬಪ್ಪ, ಗದಿಗೆಪ್ಪ, ವೀರಪ್ಪ, ಚಿಕ್ಕಪ್ಪ, ಮಹಂತೇಶ್, ಬಸವರಾಜ್, ದೇವೆಂದ್ರಪ್ಪ ಮತ್ತಿತರರು ರ್‍ಯಾಲಿಯಲ್ಲಿ ಇದ್ದರು.

- - -

-ಚಿತ್ರ೧: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಬೈಕ್ ರ್‍ಯಾಲಿ ನಡೆಸಿದರು.