ಸಾರಾಂಶ
ಎಸ್.ಜಿ.ತೆಗ್ಗಿನಮನಿ ನರಗುಂದ
ದೇಶವನ್ನೇ ನಡುಗಿಸಿದ ರಾಜ್ಯದಲ್ಲಿ ಹೊಸ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾದ 1990 ರ ನರಗುಂದ ರೈತ ಬಂಡಾಯದ ಹುತಾತ್ಮ ದಿನಾಚರಣೆಗೆ 44 ವರ್ಷವಾಗಿದ್ದರೂ ಇನ್ನೂ ರೈತರ ಬದುಕು ಹಸನಾಗಿಲ್ಲ, ಅಂದಿನ ರೈತ ಹೋರಾಟದ ಸಾಫಲ್ಯತೆ ಇನ್ನೂ ಬಂದಿಲ್ಲ, ರೈತರ ಸಮಸ್ಯೆಗಳು ಬದಲಾಗಿಲ್ಲ, ಹೋರಾಟ ನಿಂತಿಲ್ಲ, ಅಂತಹ ಸಂದರ್ಭದಲ್ಲೇ ಮತ್ತೊಂದು ಹುತಾತ್ಮ ದಿನಾಚರಣೆ ಬಂದಿದೆ.1990 ರ ರೈತ ಹೋರಾಟ ಸಂದರ್ಭದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಚಿಕ್ಕ ನರಗುಂದದ ಹುತಾತ್ಮ ರೈತ ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲು ಇಲ್ಲಿನ ಕೋರ್ಟ್ ಸರ್ಕಲ್ ಬಳಿಯ ಖಾಸಗಿ ಜಮೀನಿನಲ್ಲಿದೆ. ಇದನ್ನು ಸರ್ಕಾರಿ ಜಮೀನಿನಲ್ಲಿ ಭವ್ಯ ಹುತಾತ್ಮ ಸ್ಮಾರಕವಾಗಿ ನಿರ್ಮಿಸಬೇಕೆಂಬ ರೈತ ಸಂಘಟನೆಗಳ ಬಹುದಿನಗಳ ಬೇಡಿಕೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಕಳಸಾ ಬಂಡೂರಿ- ಮಹಾದಾಯಿ ಯೋಜನೆ, ಬೆಲೆ ನಿಯಂತ್ರಣ, ಅತಿವೃಷ್ಟಿ, ಅನಾವೃಷ್ಟಿಗೆ ಸೂಕ್ತ ಪರಿಹಾರ ಸೇರಿದಂತೆ ರೈತರ ಬಹುತೇಕ ಬೇಡಿಕೆ ಆಳರಸರ ಕಣ್ಣು ತೆರೆಸಿಲ್ಲ.
ಅಂದು ನಡೆದಿದ್ದೇನು?: 1980ರ ಅಂದಿನ ಗುಂಡುರಾವ್ ಸರ್ಕಾರ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಜಮೀನುಗಳ ಮೇಲೆ ನೀರಿನ ಕರ ವಿಧಿಸಿತ್ತು. ಆಗ ಸರ್ಕಾರಕ್ಕೆ ನೀರಿನ ಕರ ಮನ್ನಾ ಮಾಡುವಂತೆ ಬೇಡಿಕೊಂಡರೂ ಸ್ಪಂದಿಸದೇ ರೈತನ ಜಮೀನು ಕಬ್ಜಾ ಕಾಲಂನಲ್ಲಿ ಸರ್ಕಾರವೆಂದು ನಮೂದಿಸಲಾಗುವುದು ಎಂದು ಹೇಳಿದ್ದರಲ್ಲದೇ, ರೈತರ ಹೊಲಗಳ ಮೇಲೆ ಖಬ್ಜಾ ಕೂರಿಸಿದ್ದರು.ಇದರಿಂದ ಈ ಭಾಗದ ರೈತರು ಆಡಳಿತರೂಢ ಸರ್ಕಾರದ ವಿರುದ್ಧ ರೊಚ್ಚಿಗೆದ್ದು 1980 ಜು.21ರಂದು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ನರಗುಂದದಲ್ಲಿ ನೀರಿನ ಕರ ವಿರುದ್ಧ ಹೋರಾಟಕ್ಕೆ ಅಣಿಯಾದರು. ಹಲವಾರು ಗ್ರಾಮಗಳಿಂದ ನೂರಾರು ಟ್ರ್ಯಾಕ್ಟರ್ ಮೂಲಕ ಸಾವಿರಾರು ರೈತರು ಆಗಮಿಸಿ ಹಳೇ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಜಮಾಯಿಸಿ ಕಚೇರಿಗೆ ಬೀಗ ಹಾಕಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದರು.
ಆ ಸಮಯದಲ್ಲಿ ಕಚೇರಿಗೆ ಹೋಗುತ್ತಿದ್ದ ತಹಸೀಲ್ದಾರನ್ನು ತಡೆದಿದ್ದರಿಂದ ರೈತರು ಹಾಗೂ ಅಧಿಕಾರಿಗಳ ಮಧ್ಯ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಆಗ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರಿಗೆ ಗುಂಡು ಹಾರಿಸಲು ಆದೇಶ ಮಾಡಿದರು. ಅಶ್ರುವಾಯು ಪ್ರಯೋಗಿಸಿದರು, ಲಾಠಿ ಚಾರ್ಜ ಮಾಡಿ ಗುಂಡು ಹಾರಿಸಲು ಪ್ರಾರಂಭಿಸಿದರು.ಇದರಿಂದ ರೊಚ್ಚಿಗೆದ್ದ ರೈತರು ತಹಸೀಲ್ದಾರ್ ಕಾರ್ಯಾಲಯಕ್ಕೆ ಬೆಂಕಿ ಹಚ್ಚಿದರು. ಈ ವೇಳೆ ಪೊಲೀಸರು ಗೋಲಿಬಾರ್ ಮಾಡಿದ ಹಿನ್ನೆಲೆ ಚಿಕ್ಕನರಗುಂದ ಗ್ರಾಮದ ಯುವರೈತ ಈರಪ್ಪ ಕಡ್ಲಿಕೊಪ್ಪ ಅವರ ಎದೆಗೆ ಗುಂಡು ತಗುಲಿ ಹೋರಾಟದಲ್ಲಿ ಸಾವನಪ್ಪಿದ್ದರು. ನಂತರ ರೈತರು ಹಾಗೂ ಪೊಲೀಸರ ಮಧ್ಯ ದೊಡ್ಡ ಹೋರಾಟವೇ ನಡೆದು ಹೋಯಿತು.
ಇದೇ ವೇಳೆ ನವಲಗುಂದದಲ್ಲಿಯೂ ನೀರಿನ ಕರ ವಿರೋಧಿಸಿ ಹೋರಾಟ ಮಾಡಲಾಗುತ್ತಿತ್ತು. ನರಗುಂದದಲ್ಲಿ ರೈತ ಸಾವು ಸುದ್ದಿ ತಿಳಿದು ಅಲ್ಲಿಯೂ ಹೋರಾಟ ತೀವ್ರಗೊಳಿಸಿದ ಹಿನ್ನೆಲೆ ಅಳಗವಾಡಿ ರೈತ ಬಸಪ್ಪ ಲಕ್ಕುಂಡಿ ಪೊಲೀಸರ ಗುಂಡೇಟಿಗೆ ಬಲಿಯಾದರು. ನಂತರ ಅಂದಿನ ಗುಂಡುರಾವ್ ನೇತೃತ್ವದ ಸರ್ಕಾರ ರೈತರ ಹೋರಾಟಕ್ಕೆ ಪತನವಾಯಿತು.ಸಮಸ್ಯೆಗಳ ಸರಮಾಲೆ:ಈ ಭಾಗದಲ್ಲಿ ದೊಡ್ಡ ರೈತ ಹೋರಾಟ ನಡೆದರೂ ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿಯಾಗುತ್ತಿಲ್ಲ. ಕೆಳಭಾಗದ ನೀರಾವರಿ ಜಮೀನುಗಳಿಗೆ ಕಾಲುವೆ ನೀರು ಸಿಗದೇ ರೈತರು ಪ್ರತಿ ವರ್ಷ ಸಮಸ್ಯೆ ಎದುರಿಸುವಂತಾಗಿದೆ. ಈ ಭಾಗದ ಜನಪ್ರತಿನಿಧಿಗಳು ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದರೂ ಯಾವ ಸರ್ಕಾರ ರೈತರ ಸಮಸ್ಯೆ ಹಾಗೂ ಯೋಜನೆ ಜಾರಿಗೆ ಮನಸ್ಸು ಮಾಡುತ್ತಿಲ್ಲ.
ಆಚರಣೆಗೆ ಸಿಮೀತ:ಪ್ರತಿ ವರ್ಷ ಜು. 21ರಂದು ರೈತ ಹುತಾತ್ಮ ದಿನಾಚರಣೆಗೆ ವಿವಿಧ ಪ್ರದೇಶಗಳಿಂದ ಬಂದು ವೀರಗಲ್ಲಿಗೆ ಮಾಲೆ ಹಾಕಿ ಸರ್ಕಾರದ ವಿರುದ್ಧ ಹಾಗೇ, ಹೀಗೆ ಹೋರಾಟ ಮಾಡೋಣ ಎಂದು ಹೇಳುವದಕ್ಕೆ ಮಾತ್ರ ರೈತ ಹುತಾತ್ಮ ದಿನಾಚರಣೆ ಸಿಮೀತವಾಗಿದೆ ಎನ್ನಲಾಗುತ್ತಿದೆ.ಇಂದಿನ ಕಾರ್ಯಕ್ರಮ: ನರಗುಂದ ಪಟ್ಟಣದ ಕೋರ್ಟ ಸರ್ಕಲ್ ಬಳಿ ನಿರ್ಮಾಣ ಮಾಡಲಾದ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿನ ಬಳಿಯೇ ರೈತ ಹುತಾತ್ಮ ದಿನ ಆಚರಣೆ ಮಾಡಲು ಸಮಯ ನಿಗದಿ ಮಾಡಲಾಗಿದೆ. ಮುಖಂಡರು ಮಾಲಾರ್ಪಣೆ ಮಾಡಲಿದ್ದಾರೆ. ಭಾನುವಾರ ಬೆಳಗ್ಗೆ 9ರಿಂದ 9.30ರ ವರೆಗೆ ರೈತ ಸಂಘಟನೆ, 9-30ರಿಂದ 10.00ವರೆಗೆ ರೈತ ಸಂಘ, ಕರವೇ, ಸ್ವಾಭಿಮಾನ ವೇದಿಕೆ, ನಮ್ಮ ಕರ್ನಾಟಕ ಸೇನೆ, 10ರಿಂದ10.30ರ ವರೆಗೆ ಮಹದಾಯಿ, ಕಳಸಾ ಬಂಡೂರಿ ಹೋರಾಟ ಸಮಿತಿ, ಡಾ.ಸಂಗಮೇಶ ಕೊಳ್ಳಿ ಅಭಿಮಾನಿಗಳ ಬಳಗ, 11ರಿಂದ11-30ವರೆಗೆ ಬಿಜೆಪಿ, 11-30ರಿಂದ 12-00ವರೆಗೆ ಜೆಡಿಎಸ್, ಕಾಂಗ್ರೆಸ್ ಹಾಗೂ ಮಲಪ್ರಭಾ ಅಚ್ಚುಕಟ್ಟು ಹೋರಾಟ ಸಮಿತಿ, ರೈತರ ಸಂತ್ರಸ್ತರ ಶ್ರಮೀಕರ ಪಕ್ಷಾತೀತ ಒಕ್ಕೂಟ 12 ರಿಂದ 12-30ವರಗೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆ 12-30ರಿಂದ 1ರ ವರೆಗೆ ಬಂದು ವೀರಗಲ್ಲಿಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದು ತಹಸೀಲ್ದಾರರು ತಿಳಿಸಿದ್ದಾರೆ.
ಕಳೆದು ಹಲವು ವಷ೯ಗಳಿಂದ ವೀರಗಲ್ಲನ್ನು ಸಕಾ೯ರಿ ಜಾಗೆಯಲ್ಲಿ ಸ್ಥಾಪನೆ ಮಾಡುವಂತೆ ಆಡಳಿತರೂಢ ಸರ್ಕಾರಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ ತಿಳಿಸಿದ್ದಾರೆ.ರೈತ ಸಮುದಾಯ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮಾತ್ರ ರೈತರ ಬೇಡಿಕೆಗಳಾದ ಸರ್ಕಾರಿ ಜಾಗೆಯಲ್ಲಿ ವೀರಗಲ್ಲು ಸ್ಥಾಪನೆ, ಕಳಸಾ ಬಂಡೂರಿ ಯೋಜನೆ ಜಾರಿಯಾಗುತ್ತದೆ ಎಂದು ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು, ವಿವಿಧ ಸಂಘಟನೆ ಮುಖಂಡರು ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲು ಸ್ಥಾಪಿಸುವಂತೆ ಮನವಿ ಸಲ್ಲಿದ್ದು, ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಾನೆ ಮಾಡಲಾಗುವುದು ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ಹೇಳಿದ್ದಾರೆ.