ಸಾರಾಂಶ
ಶಿರಸಿ: ರೈತ ಉತ್ಪಾದಕ ಕಂಪನಿಗಳಿಗೆ ಸರ್ಕಾರ ನೀಡುವ ಸೌಲಭ್ಯ ಮತ್ತು ಅನುದಾನಗಳನ್ನು ಸರಿಯಾಗಿ ಬಳಸಿಕೊಂಡು ಕಂಪನಿಗಳನ್ನು ಆರ್ಥಿಕವಾಗಿ ಬಲವರ್ಧನೆಗೊಳಿಸಬೇಕು ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಟಿ.ಎಚ್. ನಟರಾಜ್ ತಿಳಿಸಿದರು.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ರೂಟ್ಸ್ ಗೂಡ್ಸ್ ಮತ್ತು ಸೆಲ್ಕೊ ಫೌಂಡೇಶನ್ ಸಹಯೋಗದಲ್ಲಿ ರೈತ ಉತ್ಪಾದಕ ಕಂಪನಿಗಳಿಗೆ ಮಾರುಕಟ್ಟೆ ಸಂಪರ್ಕ ಹಾಗೂ ಲೆಕ್ಕ ಪುಸ್ತಕಗಳ ನಿರ್ವಹಣೆ ಕುರಿತು ಒಂದು ದಿನದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಕೇವಲ ಇಲಾಖೆಗಳಿಂದ ನೀಡುವ ಅನುದಾನವನ್ನು ಅವಲಂಬಿಸದೇ ಕಂಪನಿಗಳು ಸ್ವಾವಲಂಬನೆ ಕಡೆ ನಡೆಯಲು ವಿವಿಧ ಮಾರುಕಟ್ಟೆ ಸಂಪರ್ಕ ಅತ್ಯವಶ್ಯಕವಾಗಿದೆ ಎಂದರು.ಎಲ್ಲರೂ ಉತ್ತಮ ಮಾರುಕಟ್ಟೆ ಸಂಪರ್ಕ ಹೊಂದಿ ರೈತರಿಗೆ ಉತ್ತಮ ರೀತಿಯ ಸೇವೆ ನೀಡಬೇಕು ಮತ್ತು ರೈತ ಉತ್ಪಾದಕ ಕಂಪನಿಗಳ ಉತ್ಪನ್ನಗಳನ್ನು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ಗಳಲ್ಲಿ ಮಾರಾಟ ಮಾಡುವ ಮೂಲಕ ಉತ್ತಮ ಮಾರುಕಟ್ಟೆ ಕಲ್ಪಿಸಿಕೊಳ್ಳುವ ಮೂಲಕ ಹೆಚ್ಚಿನ ಆದಾಯ ಪಡೆಯಬಹುದು ಎಂದರು.
ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾತನಾಡಿ, ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ರೈತ ಉತ್ಪಾದಕ ಕಂಪನಿಗಳು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.ಐದು ಹಂತಗಳಲ್ಲಿ ವಿಭಾಗಿಸಲಾದ ಕಾರ್ಯಕ್ರಮದಲ್ಲಿ ಮೊದಲನೆಯದಾಗಿ ಕೃಷಿ ಸೆಂಟ್ರಲ್ ಸ್ಥಾಪಕರಾದ ವಿನಯ್ ಶಿವಪ್ಪ ಅವರು ಕೃಷಿ ಸೆಂಟ್ರಲ್ ಅಪ್ಲಿಕೇಶನ್‌ನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಸಿ ಈ ಅಪ್ಲಿಕೇಶನ್ ರೈತರಿಗೆ ದಿನನಿತ್ಯದ ಕೃಷಿ ವಸ್ತುಗಳ ಬಳಕೆಗೆ ಹೇಗೆ ನೆರವಾಗುತ್ತದೆ ಮತ್ತು ರೈತರು ಖರೀದಿ ಮತ್ತು ಮಾರಾಟವನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಅಪ್ಲಿಕೇಶನ್ ಮೂಲಕ ಸಹಾಯ ಪಡೆಯಬಹುದು ಎಂದು ಈ ಅಪ್ಲಿಕೇಶನ್ ಮೂಲಕ ತಿಳಿಸಿಕೊಟ್ಟರು.
ರೂಟ್ಸ್ ಗೂಡ್ಸ್ ಕಂಪನಿ ಆಪರೇಷನ್ ಮ್ಯಾನೇಜರ್ ವಿಶ್ವನಾಥ್ ಎಸ್.ಯು. ಕಂಪನಿ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿಸಿದರು. ಮೂರನೇ ಕಂಪನಿಯಾದ ವಿಶ್ರುತ್ ಅಗ್ರೋ ಇಂಡಸ್ಟ್ರಿಸ್ ಕುಂದಾಪುರ ಇವರು ಮೀನಿನ ತ್ಯಾಜ್ಯಗಳನ್ನು ಬಳಸಿ ತಯಾರಿಸಿದ ವಿವಿಧ ಸಾವಯವ ಗೊಬ್ಬರಗಳನ್ನು ಪ್ರದರ್ಶಿಸಿ ಅದರ ಪ್ರಯೋಜನಗಳ ಬಗ್ಗೆ ರೈತರಿಗೆ ತಿಳಿಸಿದರು. ನಂತರ ಸಿಎ ಪವನ್‌ಕುಮಾರ್ ಭಟ್ ಅವರು ರೈತ ಉತ್ಪಾದಕ ಕಂಪನಿಗಳು ಲೆಕ್ಕ ಪುಸ್ತಕಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಹಾಗೂ ಕಂಪನಿಗಳು ಪಾಲಿಸುವ ಕೆಲವು ಕಾಯ್ದೆ- ಕಾನೂನು,ಕಂಪನಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಲ್ಲಿ ವಿಧಿಸುವ ದಂಡ, ಕಂಪನಿಯ ವಾರ್ಷಿಕ ಸಭೆ, ನಿದೇಶಕರ ಸಭೆಗಳ ಮಾಹಿತಿ, ಕಂಪನಿಯ ಸಿಇಒ ಹಾಗೂ ನಿರ್ದೇಶಕರ ಜವಾಬ್ದಾರಿಗಳನ್ನು ವಿವರಿಸಿದರು.ಸ್ವಸಹಾಯ ಮತ್ತು ಎಫ್‌ಪಿಒ ಸದಸ್ಯರಿಗೆ ಮಾರಾಟ ಮತ್ತು ಸಾಲ ಸೌಲಭ್ಯಗಳ ಬಗ್ಗೆ ಸೆಲ್ಕೊ ಸೋಲಾರ್ ಶಿರಸಿಯ ಸೀನಿಯರ್ ಮ್ಯಾನೇಜರ್ ಸುಬ್ರಾಯ್ ಹೆಗಡೆ ಹಾಗೂ ರಾಜೇಂದ್ರ ಗೀತೆ ಪ್ರಾಜೆಕ್ಟ್ ಮ್ಯಾನೇಜರ್ ಮಾತನಾಡಿದರು. ಸ್ಕೊಡ್‌ವೆಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ನಿರೂಪಿಸಿ, ವಂದಿಸಿದರು.