ಕನ್ನಡಪ್ರಭ ವಾರ್ತೆ ಮದ್ದೂರು

ಕೇಂದ್ರ ಸ್ಥಳದಲ್ಲಿ ವಾಸವಿದ್ದು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡದ ಸೆಸ್ಕ್ ಇಇ, ಎಇಇಗಳು ಸೇರಿದಂತೆ ಅಧಿಕಾರಿಗಳ ವಿರುದ್ಧ ರೈತರು, ಗ್ರಾಹಕರು ಶಾಸಕ ಕೆ.ಎಂ.ಉದಯ್ ಅವರಿಗೆ ದೂರು ನೀಡಿದರು.

ನಗರದ ಸೆಸ್ಕ್ ಕಚೇರಿ ಆವರಣದಲ್ಲಿ ನಡೆದ ವಿದ್ಯುತ್ ಇಲಾಖೆಯ ಗ್ರಾಹಕರು, ರೈತರು ಉದ್ಯಮಿಗಳು ಮತ್ತಿತರರ ಕುಂದುಕೊರತೆ ಸಮಲೋಚನೆ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ರೈತರು, ಗ್ರಾಹಕರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ವಿವಿಧ ದೂರುಗಳ ಸಂಬಂಧ ಅರ್ಜಿ ಸಲ್ಲಿಸಿದರು.

ಮಂಜೂರಾದ ವಸತಿ ಗೃಹಗಳಲ್ಲಿ ವಾಸವಿರದೆ ದಿನನಿತ್ಯ ಮಂಡ್ಯ ಮತ್ತು ಮೈಸೂರು ಭಾಗದಿಂದ ಬಂದು ಹೋಗುವ ಇಇ, ಎಇಇಗಳು ಸೇರಿದಂತೆ ಇತರೆ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ವಾಸವಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಶಾಸಕ ಕೆ.ಎಂ.ಉದಯ್ ಮಾತನಾಡಿ, ಸಾರ್ವಜನಿಕರ ದೂರವಾಣಿ ಕರೆ ಸ್ವೀಕರಿಸದ ಸೆಸ್ಕ್ ಅಧಿಕಾರಿಗಳು ಮತ್ತು ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದ ದೂರುಗಳ ಕುರಿತು ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಿದ್ದೇನೆ. ಮುಂದೆ ಸರಿಪಡಿಸಿಕೊಳ್ಳುವ ವಿಶ್ವಾಸವಿದೆ. ತಪ್ಪಿದ್ದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವ ಎಚ್ಚರಿಕೆ ನೀಡಿದರು.


ಕ್ಷೇತ್ರದ ಜನರ ದೂರಿನ ಮೇರೆಗೆ ತಾವು ಈಗಾಗಲೇ ತಾಲೂಕು ಕಚೇರಿ, ನಗರಸಭೆ ಕಚೇರಿಗಳಲ್ಲಿ ಸಾರ್ವಜನಿಕ ಕುಂದು ಕೊರತೆಗಳ ನಿವಾರಣೆಗೆ ಖುದ್ದು ಭೇಟಿ ಮತ್ತು ಸಮಸ್ಯೆ ಪರಿಹಾರ ಸಂಬಂಧ ಈಗಾಗಲೇ ಕ್ರಮ ವಹಿಸಲಾಗಿದೆ. ಸೆಸ್ಕ್ ಅಧಿಕಾರಿಗಳ ಮತ್ತು ಇಲಾಖೆ ಅವ್ಯವಸ್ಥೆಗಳ ದೂರಿನ ಹಿನ್ನೆಲೆಯಲ್ಲಿ ಸೆಸ್ಕ್ ಕಚೇರಿಯಲ್ಲಿ ಇಂದು ಅಹವಾಲು ಸ್ವೀಕಾರ ಮಾಡುತ್ತಿರುವುದಾಗಿ ವಿವರಿಸಿದರು.

ಸೋಮನಹಳ್ಳಿ ಬಳಿ ಸಬ್ ಟೇಷನ್ ಕಾಮಗಾರಿ ಪ್ರಾರಂಭಿಸಲಾಗಿದೆ. ಕೆಲವೇ ದಿನಗಳಲ್ಲಿ ಮುಗಿಯಲಿದೆ. ಕೂಳಗೆರೆ ಸಮೀಪದಲ್ಲಿ ಪೂಜೆ ನಡೆಯಲಿದೆ. ಅಲ್ಲೂ ಸಹ ಶೀಘ್ರ ಕೆಲಸ ಮುಗಿದು ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ರೀತಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಶಾಸಕ ಕೆ.ಎಂ.ಉದಯ ಅಧ್ಯಕ್ಷತೆಯಲ್ಲಿ ಸತತ 3 ಗಂಟೆಗಳ ಸಭೆ ನಡೆಯಿತು. ವಿದ್ಯುತ್ ಸಮಸ್ಯೆ ಕುರಿತು ಗ್ರಾಹಕರು

ತಮ್ಮ ಅಹವಾಲು ಅರ್ಪಿಸಿದರು. ಇಂದು ಸಲ್ಲಿಕೆಯಾದ ಅರ್ಜಿಗಳ ಪೈಕಿ 40ಕ್ಕೂ ಹೆಚ್ಚು ಗ್ರಾಹಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಮತ್ತಷ್ಟು ದೂರುಗಳನ್ನು ಮುಂದಿನ ಒಂದು ತಿಂಗಳೊಳಗೆ ಬಗೆಹರಿಸಲು ಸೆಸ್ಕ್ ಅಧಿಕಾರಿಗಳಿಗೆ

ಸೂಚಿಸಿರುವುದಾಗಿ ಶಾಸಕರು ಹೇಳಿದರು.

ಅಹವಾಲು ಸ್ವೀಕಾರ ಸಭೆ ವೇಳೆ ಮದ್ದೂರು ನಗರಸಭೆ ವ್ಯಾಪ್ತಿ ಸೇರಿದಂತೆ ತಾಲೂಕಿನ ಆತಗೂರು, ಸಿಎ ಕೆರೆ, ಕಸಬಾ

ಮತ್ತು ಕೊಪ್ಪ ಹೋಬಳಿ ವ್ಯಾಪ್ತಿಯ ರೈತರು ಸೋಮನಹಳ್ಳಿ ಕೈಗಾರಿಕ ವಲಯದ ಉದ್ಯಮಿಗಳು ಹಾಜರಿದ್ದು ಕುಂದುಕೊರತೆಗಳ ಕುರಿತಾದ ಅರ್ಜಿ ಸಲ್ಲಿಸಿದರು.

ಸಭೆಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಹಿರಿಯ ಮುಖಂಡ ಅಜ್ಜಹಳ್ಳಿ ರಾಮಕೃಷ್ಣ, ವೃತ್ತ ನಿರೀಕ್ಷಕ ನವೀನ್, ಸೆಸ್ಕ್ ಇಇ ಶಿವಕುಮಾರ್, ಎಇಇಗಳು ಹಾಜರಿದ್ದರು.