ಬಿತ್ತನೆ ಬೀಜ ಬೆಲೆ ಏರಿಕೆಯಿಂದ ರೈತರಿಗೆ ಗಾಯ

| Published : May 31 2024, 02:16 AM IST

ಸಾರಾಂಶ

ಬರಗಾಲದಿಂದ ತತ್ತರಿಸಿರುವ ರೈತರು ಕೃಷಿ ಚಟುವಟಿಕೆ ಮಾಡಲು ಸಂಕಷ್ಟ ಪಡುತ್ತಿರುವಾಗಲೇ ರಾಜ್ಯ ಸರ್ಕಾರ ಸಹಾಯಧನ ರೂಪದಲ್ಲಿ ನೀಡುವ ಬಿತ್ತನೆ ಬೀಜದ ಬೆಲೆಗಳನ್ನು ದುಪ್ಪಟ್ಟು ಏರಿಕೆ ಮಾಡಿ ಅಂಗಡಿಗಳಲ್ಲಿ ಸಿಗುವ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆ ನಿಗದಿ ಮಾಡಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರ್ ಶಾಂತಕುಮಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬರಗಾಲದಿಂದ ತತ್ತರಿಸಿರುವ ರೈತರು ಕೃಷಿ ಚಟುವಟಿಕೆ ಮಾಡಲು ಸಂಕಷ್ಟ ಪಡುತ್ತಿರುವಾಗಲೇ ರಾಜ್ಯ ಸರ್ಕಾರ ಸಹಾಯಧನ ರೂಪದಲ್ಲಿ ನೀಡುವ ಬಿತ್ತನೆ ಬೀಜದ ಬೆಲೆಗಳನ್ನು ದುಪ್ಪಟ್ಟು ಏರಿಕೆ ಮಾಡಿ ಅಂಗಡಿಗಳಲ್ಲಿ ಸಿಗುವ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆ ನಿಗದಿ ಮಾಡಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರ್ ಶಾಂತಕುಮಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತನ ಮಗ. ರೈತ ಸಂಘದ ಕಾರ್ಯಕರ್ತ ಎಂದು ಹೇಳುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಮೇಲೆ ಸಂಕಷ್ಟದಲ್ಲಿರುವ ರೈತರ ಹಿತ ಕಾಯಬೇಕಾದ ಸರ್ಕಾರ ಪದೇ ಪದೇ ಗಾಯದ ಮೇಲೆ ಬರೆ ಎಳೆದು ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡಿ ಈಗ ಸಮರ್ಥನೆ ಮಾಡಿಕೊಳ್ಳುತ್ತಿದೆ. ಸರ್ಕಾರದ ನಿರ್ಧಾರ ವಾಪಾಸ್ ಪಡೆಯದಿದ್ದರೆ ರೈತರು ಜಾಗೃತರಾಗಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರ ನೀಡುತ್ತಿದ್ದ ನಾಲ್ಕು ಸಾವಿರ ಕಿಸಾನ್ ಸಮ್ಮಾನ ಯೋಜನೆ ನಿಲ್ಲಿಸಿದರು. ರೈತರ ಮಕ್ಕಳ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಿದರು. ಕಳೆದ ಎಂಟು ತಿಂಗಳಿಂದ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹ ಧನ 750 ಕೋಟಿ ಇನ್ನೂ ಬಿಡುಗಡೆ ಮಾಡಿಲ್ಲ. ಕೃಷಿ ಪಂಪ್ ಸೆಟ್‌ಗಳಿಗೆ ಸಂಪರ್ಕ ಪಡೆಯಲು 2 ಲಕ್ಷ ರೂಪಾಯಿ ಖರ್ಚು ಮಾಡಬೇಕಾದ ನಿಯಮ ಜಾರಿ ಮಾಡಿ ಆಘಾತ ಮಾಡಿದ್ದಾರೆ. 223 ತಾಲೂಕು ಬರಗಾಲ ಘೋಷಣೆ ಮಾಡಿ 70 ಲಕ್ಷ ರೈತರ ಪೈಕಿ 27 ಲಕ್ಷ ರೈತರಿಗೆ 500-1000 ರು. ಭಿಕ್ಷಾ ರೂಪದ ಬರ ಪರಿಹಾರ ನೀಡಿದ್ದಾರೆ ಎಂದರು.

ಅಧಿಕಾರದಲ್ಲಿರುವ ಮಂತ್ರಿಗಳು ವೈಭವಿಕರಿಸಿ ಪರಿಹಾರ ವಿತರಣೆ ಬಗ್ಗೆ ಹೇಳುತ್ತಾರೆ. ಇದು ರೈತರ ಕಣ್ಣಿಗೆ ಮಣ್ಣೆರಚುವ ತಂತ್ರ. ಕೇಂದ್ರ ಸರ್ಕಾರ ಎನ್ ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡಿ ಬೆಳೆ ನಷ್ಟದ ಸಂಪೂರ್ಣ ಹಣ ನೀಡಬೇಕು ಇಲ್ಲದಿದ್ದರೆ ಬರ, ಅತಿವೃಷ್ಟಿ ಮಳೆ ಹಾನಿಗೆ ಒಳಗಾದ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವ ನೀತಿ ಜಾರಿಗೆ ತರಬೇಕು. ಎಲ್ಲಾ ರೈತರ ಬೆಳೆಗಳಿಗೂ ಅನ್ವಯವಾಗುವಂತ ನೀತಿ ಜಾರಿಗೆ ಬರಬೇಕು ಎಂದು ಒತ್ತಾಯಿಸಿದ್ದರು.

ರಾಜ್ಯದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಲೀಟರಿಗೆ ಐದು ರೂಪಾಯಿ ಎಂಟು ತಿಂಗಳಿಂದಲೂ ಬಿಡುಗಡೆಯಾಗಿಲ್ಲ. ಸುಮಾರು 750 ಕೋಟಿ ಹಣ ಕೂಡಲೇ ಬಿಡುಗಡೆ ಮಾಡಿ ಹೈನುಗಾರಿಕೆ ರೈತರನ್ನು ರಕ್ಷಿಸಬೇಕು. ಹಸುಗಳ ತಿಂಡಿ, ಆಹಾರ, ದುಬಾರಿಯಾಗಿದೆ. ಇದರಿಂದ ರೈತರು ಸಂಕಷ್ಟ ಪಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಶೇ.30ರಷ್ಟು ಕಬ್ಬು ಬೆಳೆ ಒಣಗಿ ಹೋಗಿದೆ. ಉತ್ಪಾದನೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಬರ ಪರಿಹಾರ ನಷ್ಟದಲ್ಲಿ ಕಬ್ಬಿನ ಬೆಳೆಯನ್ನ ಪರಿಗಣಿಸಬೇಕು. ಕಬ್ಬು ಬೆಳೆ ನಾಶವಾಗಿರುವ ರೈತರಿಗೂ ಬರ ಪರಿಹಾರ ಸಿಗುವಂತಾಗಬೇಕು ಎಂದರು. ಕಳಪೆ ರಸಗೊಬ್ಬರ ಕೀಟನಾಶಕ ಬಿತ್ತನೆ ಬೀಜ ಮಾರಾಟ ಮಾಡುವ ಮಾರಾಟಗಾರರಿಗೆ ಜಾಮೀನು ರಹಿತ ಬಂಧನ ಮಾಡುವ ಕಠಿಣ ಕಾನೂನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು. ಇದರಿಂದ ರೈತರಿಗೆ ಮೋಸವಾಗುವುದು ತಪ್ಪುತ್ತದೆ. ಮಹದೇಶ್ವರ ಹಾಗೂ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬಿನಿಂದ ಬರುವ ಇಳುವರಿ ಕಡಿಮೆ ತೋರಿಸಲು ಕಬ್ಬಿನ ರಸವನ್ನು ಕಾಕಂಬಿ ಹಾಗೂ ಯಥನಾಲ್ ಉತ್ಪಾದನೆಗೆ ಹೆಚ್ಚು ಬಳಸಿಕೊಳ್ಳುತ್ತಿರುವುದು ರೈತರಿಗೆ ಇಳುವರಿ ಕಡಿಮೆಯಾಗಿ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ನಿಗದಿ ಹೆಚ್ಚುವರಿ ಟನ್‌ಗೆ 150 ರು. ರೈತರಿಗೆ ಪಾವತಿಸಿಲ್ಲ ಕಾರ್ಖಾನೆ ಆರಂಭಕ್ಕೆ ಮುನ್ನ ಹಣ ಪಾವತಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ. ಪ್ರಧಾನ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ. ತಾಲೂಕು ಅಧ್ಯಕ್ಷ ಸತೀಶ್. ಹೆಗ್ಗೂಠಾರ ಶಿವಸ್ವಾಮಿ, ಎಂ ಬಿ ರಾಜು. ಮಾದೇಶ್. ಸುಂದ್ರಪ್ಪ ಇದ್ದರು.