ಜಾನುವಾರು ಮಾರಾಟಕ್ಕೆ ಮುಂದಾದ ರೈತರು

| Published : Mar 30 2024, 12:50 AM IST

ಸಾರಾಂಶ

ಬಂಗಾರಪೇಟೆ ತಾಲೂಕು ಬರಪೀಡಿತ ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ. ಆದರೆ ಬರಪೀಡಿತ ತಾಲೂಕಲ್ಲಿ ಕೈಗೊಳ್ಳಬೇಕಾದ ಪರ್ಯಾಯ ಕಾರ್ಯಗಳು ಮಾತ್ರ ಕೈಗೊಳ್ಳದೆ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಮುಳುಗಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಬರದ ಹೊಡೆತಕ್ಕೆ ಸಿಲುಕಿರುವ ತಾಲೂಕಿನ ಜನರು ಒಂದು ಕಡೆ ರಣ ಬಿಸಿಲು ಮತ್ತೊಂದು ಕಡೆ ಜಾನುವಾರುಗಳಿಗೆ ಮೇವು,ನೀರು ಪೂರೈಸಲಾಗದೆ ವಾರದ ಸಂತೆಗಳಲ್ಲಿ ಜಾನುವಾರುಗಳನ್ನು ಕೈಗೆ ಸಿಕ್ಕ ಬೆಲೆಗೆ ಮಾರಾಟ ಮಾಡುವಂತಹ ಸ್ಥಿತಿ ತಲೆ ದೂರಿದೆ.

ಕೋಲಾರ ಜಿಲ್ಲೆಯಲ್ಲಿ ಹಲವು ತಾಲೂಕುಗಳನ್ನು ರಾಜ್ಯ ಸರ್ಕಾರವೇ ಬರಪೀಡಿತ ತಾಲೂಕೆಂದು ಘೋಷಣೆ ಮಾಡಿದೆ,ಅದರಲ್ಲಿ ಬಂಗಾರಪೇಟೆ ತಾಲೂಕು ಸ್ಥಾನ ಪಡೆದಿದೆ. ಆದರೆ ಬರಪೀಡಿತ ತಾಲೂಕಲ್ಲಿ ಕೈಗೊಳ್ಳಬೇಕಾದ ಪರ್ಯಾಯ ಕಾರ್ಯಗಳು ಮಾತ್ರ ಕೈಗೊಳ್ಳದೆ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ತಲೀಣವಾಗಿರುವುದರಿಂದ ಜನ ಜಾನುವಾರುಗಳು ಮೇವು, ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ.

ಮಳೆ ಕೊರತೆಯಿಂದ ಎಲ್ಲಾ ಕಡೆ ಒಣ ಭೂಮಿ ಕಾಣಿಸಿಕೊಂಡಿದೆ.ಅಂತರ್ಜಲ ಪಾತಾಳಕ್ಕೆ ಕುಸಿದಿರುವುದರಿಂದ ಜನರಿಗೇ ಕುಡಿಯುವ ನೀರಿನ ಅಭಾವ ನಿರ್ಮಾಣವಾಗಿದೆ,ಇನ್ನು ಮೂಖ ಪ್ರಾಣಿಗಳಿಗ ಪಾಡು ಹೇಳ ತೀರದಾಗಿದೆ.

ಸಂತೆಗಳಲ್ಲಿ ದನಗಳ ಮಾರಾಟ

ಜಾನುವಾರುಗಳನ್ನು ಸಾಕಲು ಸಾಧ್ಯವಾಗದೆ ಈಗ ಸಂತೆಗಳಲ್ಲಿ ಕೈಗೆ ಸಿಕ್ಕ ಬೆಲೆಗೆ ಮಾರಾಟ ಮಾಡುವಂತಾಗಿದೆ. ಪಟ್ಟಣದಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತಿದ್ದು ಅಲ್ಲಿ ತಾಲೂಕಿನ ಗ್ರಾಮೀಣ ಭಾಗದ ರೈತರು ನೂರಾರು ತಮ್ಮ ಹಸುಗಳನ್ನು ತಂದು ಕಟುಗರಿಗೆ ಮಾರಾಟ ಮಾಡುತ್ತಿದ್ದರು. ಒಣ ಹುಲ್ಲುಗಿಂತಲೂ ಹಸುಗಳಿಗೆ ಹಸಿ ಹುಲ್ಲು ಹೆಚ್ಚು ಇಷ್ಟ. ಆದರೆ ಹಸಿ ಹುಲ್ಲು ಬೆಳೆಯಲು ಒಂದು ಕಡೆ ವಿದ್ಯುತ್ ಸಮಸ್ಯೆ ಮತ್ತೊಂದು ಕಡೆ ವಿದ್ಯುತ್ ಇದ್ದರೂ ಕೆರೆ,ಕುಂಟೆಗಳಲ್ಲಿ ನೀರಿಲ್ಲದೆ ಒಣಗಿರುವುದರಿಂದ ಬೋರ್ ಮೂಲಕ ನೀರೆತ್ತಲು ಅಂತರ್ಜಲ ಮಳೆ ಕೊರತೆಯಿಂದ ಕುಸಿದಿರುವುದರಿಂದ ಹಸಿ ಹುಲ್ಲು ಬೆಳೆಯಲಾಗುತ್ತಿಲ್ಲ.

ಇನ್ನು ಒಣ ಹುಲ್ಲು ಹಾಕೋನವೆಂದರೆ ಮಳೆ ಇಲ್ಲದೆ ರಾಗಿ, ಹುರಳಿ, ಭತ್ತದ ಒಣ ಹುಲ್ಲನ್ನು ತರಿಸಿಕೊಳ್ಳಬೇಕು. ಆದರೆ ಅಲ್ಲಿಯೂ ಒಣಹುಲ್ಲಿನ ಬೆಲೆ ಗಗನಕ್ಕೇರಿರುವುದರಿಂದ ದುಬಾರಿ ಬೆಲೆ ಕೊಟ್ಟು ಒಣಹುಲ್ಲು ಖರೀದಿಸಲಾಗದೆ ರೈತರು ಮೂಖ ಪ್ರಾಣಿಗಳನ್ನು ಹಸಿವಿನಿಂದ ಸಾಯಿಸಲಾಗದೆ ಕೈಗೆ ಬಂದ ಬೆಲೆಗೆ ಮಾರಾಟ ಮಾಡುವಂತಾಗಿದೆ. ಹೈನೋದ್ಯಮಕ್ಕೆ ಭಾರಿ ಪೆಟ್ಟು

ತಾಲೂಕಿನಲ್ಲಿಯೂ ಬಹುತೇಕ ರೈತರು ಹೈನೋದ್ಯಮವನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ.ಆದರೆ ಮಳೆ ಬೆಳೆ ಇಲ್ಲದ ಕಾರಣ ರೈತರು ಹಸುಗಳಿಗೆ ಕಾಲಕಾಲಕ್ಕೆ ನೀರು,ಮೇವು ಪೂರೈಸಲಾಗದೆ ಹಸುಗಳನ್ನು ಪೋಷಣೆ ಮಾಡುವುದು ದುಬಾರಿಯಾಗಿರುವುದರಿಂದ ಹಸುಗಳನ್ನು ಸಾಕಲಾಗದೆ ಮಾರಾಟಕ್ಕೆ ಮುಂದಾಗಿರುವುದರಿಂದ ಹಾಲು ಉತ್ಪಾದನೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿದೆ.ಸರ್ಕಾರವೇನೋ ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಿ ಸುಮ್ಮನಾಗಿದೆ,ಆದರೆ ಜಾನುವಾರುಗಳಿಗೆ ಮೇವು ಲಭ್ಯತೆಗಾಗಿ ಪರ್ಯಾಯ ವ್ಯವಸ್ಥೆ ಮಾಡಿಲ್ಲ,ಗೋಶಾಲೆಗಳನ್ನು ತೆರೆದಿಲ್ಲ,ಜನರೂ ಸಹ ಕೂಲಿಗಾಗಿ ಗುಳೆ ಹೋಗುವುದನ್ನು ತಪ್ಪಿಸಲಿಲ್ಲ,ಸರ್ಕಾರ ಜನರ ಭವಣೆ ಮರೆತು ಚುನಾವಣೆಯ ಗುಂಗಿನಲ್ಲಿರುವುದರಿಂದ ಜನರು ನಿರಾಶೆಗೊಂಡಿದ್ದಾರೆ.