ಸರ್ಕಾರ ರಾಜ್ಯಾದ್ಯಂತ ಪೌತಿ ಖಾತೆ ಆಂದೋಲನ ಆರಂಭಿಸಿದ್ದರೂ ತಾಲೂಕಿನಲ್ಲಿ ಅದು ನಿರೀಕ್ಷಿತ ಗುರಿ ಮುಟ್ಟಿಲ್ಲ. ಪೌತಿ ಖಾತೆ, ಆರ್.ಟಿ.ಸಿ ತಿದ್ದುಪಡಿಗೂ ರೈತರು ಲಂಚ ಕೊಡಬೇಕಾಗಿದೆ. ಸರ್ಕಾರ ಲಂಚ ಕೇಳುವ ನೌಕರರ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮ ಆಗುತ್ತಿಲ್ಲ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಾಂಡವಪುರ ಉಪ ವಿಭಾಗಾಧಿಕಾರಿಗಳು ವಾರದಲ್ಲಿ ಒಂದು ದಿನ ನಿಗದಿಪಡಿಸಿಕೊಂಡು ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ರೈತರ ಪೌತಿ ಖಾತೆ, ಆರ್.ಟಿ.ಸಿ ತಿದ್ದುಪಡಿ ಮತ್ತಿತರ ಅರ್ಜಿಗಳನ್ನು ವಿಲೇ ಮಾಡುವಂತೆ ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮನವಿ ಮಾಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಸರ್ಕಾರ ರಾಜ್ಯಾದ್ಯಂತ ಪೌತಿ ಖಾತೆ ಆಂದೋಲನ ಆರಂಭಿಸಿದ್ದರೂ ತಾಲೂಕಿನಲ್ಲಿ ಅದು ನಿರೀಕ್ಷಿತ ಗುರಿ ಮುಟ್ಟಿಲ್ಲ. ಪೌತಿ ಖಾತೆ, ಆರ್.ಟಿ.ಸಿ ತಿದ್ದುಪಡಿಗೂ ರೈತರು ಲಂಚ ಕೊಡಬೇಕಾಗಿದೆ. ಸರ್ಕಾರ ಲಂಚ ಕೇಳುವ ನೌಕರರ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಶೀಳನೆರೆ ಹೋಬಳಿಯಲ್ಲಿ ಪೌತಿ ಖಾತೆ ಮಾಡುವಾಗ ನೈಜ ಕುಟುಂಬದ ವಾರಸುದಾರರ ಹೆಸರಿಗೆ ಪೌತಿ ಖಾತೆ ಮಾಡದೆ ರೈತ ಕುಟುಂಬಕ್ಕೆ ಸಂಬಂಧವೇ ಇಲ್ಲದ ಮತ್ಯಾರದೋ ಹೆಸರಿಗೆ ಗ್ರಾಮ ಆಡಳಿತಾಧಿಕಾರಿಗಳು ಪೌತಿ ಖಾತೆ ಮಾಡಿದ್ದ ಪ್ರಕರಣವನ್ನು ರೈತಸಂಘ ದಾಖಲೆ ಸಮೇತ ಬೆಳಕಿಗೆ ತಂದರೂ ತಪ್ಪಿತಸ್ಥ ನೌಕರರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕಿಡಿಕಾರಿದರು.ಪೌತಿ ಖಾತೆ ಮಾಡಿಸಿಕೊಳ್ಳಲು ರೈತ ಕುಟುಂಬಗಳು ಕಡ್ಡಾಯವಾಗಿ ಗ್ರಾಮ ಆಡಳಿತಾಧಿಕಾರಿಗಳಿಗೆ ಲಂಚ ಕೊಡಬೇಕಿದೆ. ಇಲ್ಲದಿದ್ದರೆ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿ ಇದನ್ನು ಸರಿಪಡಿಸಿಕೊಳ್ಳಲು ಎ.ಸಿ ಕೋರ್ಟಿಗೆ ಅಪೀಲು ಹಾಕಿ ಕೊಳ್ಳುವಂತೆ ರೈತರಿಗೆ ಉಚಿತ ಸಲಹೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮ ಆಡಳಿತಾಧಿಕಾರಿಗಳು ಮಾಡಿದ ತಪ್ಪಿಗೆ ರೈತರು ಎಸಿ ಕೋರ್ಟಿಗೆ ಅಲೆಯಬೇಕಾಗಿದೆ. ಇದರಿಂದ ರೈತರ ಹಣ ಮತ್ತು ಅಮೂಲ್ಯ ಸಮಯಗಳು ಹಾಳಾಗುತ್ತಿವೆ. ಆರ್.ಟಿ.ಸಿ ಹೊಂದಿದ ರೈತ ನಿಧನ ಹೊಂದಿದರೆ ಆತನ ಹೆಸರಿನಿಂದ ಅರ್ಹ ಕುಟುಂಬಸ್ಥರ ಹೆಸರಿಗೆ ಖಾತೆ ಮಾಡಬೇಕು. ಎಸಿ ಅವರು ವಾರದಲ್ಲಿ ಒಂದು ದಿನ ನಿಗಧಿ ಮಾಡಿಕೊಂಡು ತಮ್ಮ ಕೇಸ್ ವರ್ಕರ್ ಸಮೇತ ತಾಲೂಕು ಕಚೇರಿ ಕಂದಾಯ ಇಲಾಖೆಗೆ ಆಗಮಿಸಿಕೆಲಸ ಮಾಡಿಕೊಟ್ಟರೆ ರೈತರ ಅಮೂಲ್ಯ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ ಎಂದರು.ಎಸಿ ಡಾ.ಕೆ.ಆರ್.ಶ್ರೀನಿವಾಸ್ ಅವರು ತಾಲೂಕಿನ ರೈತರ ಸೇವೆಗೆ ಒಂದು ದಿನ ಮೀಸಲಿಡಬೇಕು. ಉದ್ದೇಶ ಪೂರ್ವಕ ತಪ್ಪುಗಳನ್ನು ಎಸಗಿ ಕರ್ತವ್ಯ ಲೋಪ ಮಾಡಿ ರೈತರನ್ನು ಅನಗತ್ಯವಾಗಿ ಎ.ಸಿ.ಕೋರ್ಟಿನ ಮೆಟ್ಟಿಲು ಹತ್ತುವಂತೆ ಮಾಡುವ ಕಂದಾಯ ಇಲಾಖೆ ಸಿಬ್ಬಂದಿ ಮೇಲೂ ಶಿಸ್ತಿನ ಕ್ರಮ ಜರುಗಿಸಿ, ತಪ್ಪಿತಸ್ಥ ನೌಕರರಿಂದಲೇ ವಸೂಲಿ ಮಾಡಿಕೊಡುವಂತೆ ಆಗ್ರಹಿಸಿದರು.
ಈ ವೇಳೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಉಪಸ್ಥಿತರಿದ್ದರು.