ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ವಿವಿ ಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳ ಕೆರೆಗಳಿಗೆ ನೀರು ಹರಿಸಲು ಆಗ್ರಹಿಸಿ ವಿವಿ ಪುರದಿಂದ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಲು ರೈತ ಸಂಘದಿಂದ ಬೀರೇನಹಳ್ಳಿಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಯಿತು.ಸಭೆಯನ್ನು ಉದ್ದೇಶಿಸಿ ರೈತಸಂಘದ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನ ಭರಮಗಿರಿ, ಗೌನಹಳ್ಳಿ, ಗುಡಿಹಳ್ಳಿ, ಬೀರೇನಹಳ್ಳಿ, ಕೂನಿಕೆರೆ ಹಾಗೂ ತವಂದಿ ಗ್ರಾಮದ ಕೆರೆಗಳಿಗೆ ವಾಣಿ ವಿಲಾಸ ಜಲಾಶಯದಿಂದ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ಈಗಾಗಲೇ ವಿವಿ ಪುರ ಬಂದ್ ಮಾಡಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದುವರೆಗೂ ಇದರ ಬಗ್ಗೆ ಗಮನ ಹರಿಸದೇ ರೈತರನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.
ಆದ್ದರಿಂದ ರೈತರ ಚಳುವಳಿಯನ್ನು ತೀವ್ರಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸೆ .21ರ ಶನಿವಾರ ಬೆಳಿಗ್ಗೆ 9 ಗಂಟೆಗೆ ವಿವಿ ಪುರದ ಕಣಿವೆ ಮಾರಮ್ಮ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭಿಸಿ, ಹಿರಿಯೂರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.ತಾಲೂಕಿನಲ್ಲಿ 30 ಟಿಎಂಸಿ ನೀರು ಸಂಗ್ರಹವಾಗುವ ವಾಣಿವಿಲಾಸ ಜಲಾಶಯವಿದ್ದರೂ ಸಹ ನಮ್ಮ ತಾಲೂಕಿನ ರೈತರಿಗೆ ನೀರು ಇಲ್ಲದೆ ತೋಟಗಳು ಒಣಗುತ್ತಿವೆ. ಕುಡಿಯಲು ಸಹ ನೀರಿನ ಅಭಾವ ಉಂಟಾಗಿ ಟ್ಯಾಂಕರ್ ಮೂಲಕ ನೀರು ತರುವಂತಾಗಿದೆ. ಹಾಗಾಗಿ ರೈತರು ತಮ್ಮ ಬದುಕುಗಳನ್ನು ಬಿಟ್ಟು ಹೋರಾಟ ನಡೆಸುತ್ತಿದ್ದರೆ ಸರ್ಕಾರ ಕಣ್ಣು ಮುಚ್ಚಿ ಕೂತಿದೆ. ಇದು ರೈತ ವಿರೋಧಿ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪಾದಯಾತ್ರೆಗೆ ಪ್ರತಿ ಹಳ್ಳಿಯಿಂದಲೂ ಮಹಿಳೆಯರು, ರೈತರು ತಂಡೋಪತಂಡವಾಗಿ ಬಂದು ಸೇರಬೇಕು ಎಂದು ಮನವಿ ಮಾಡಿದರುಸಂಘದ ಕಾರ್ಯದರ್ಶಿ ಸಿದ್ದರಾಮಣ್ಣ ಮಾತನಾಡಿ, ತಾಲೂಕಿನಲ್ಲಿ ಇವು ಅತಿ ಹಿಂದುಳಿದ ಗ್ರಾಮಗಳಾಗಿದ್ದು, ಈ ಭಾಗದ ರೈತರು ಜೀವನ ನಡೆಸುವುದು ಕಷ್ಟಕರವಾಗಿದೆ. ಇಲ್ಲಿ ಕೆರೆಗಳೆಲ್ಲಾ ಬತ್ತಿ ಹೋಗಿ ಅಂತರ್ಜಲ ಸಂಪೂರ್ಣ ಕುಸಿತವಾಗಿದೆ. ರೈತರು ಸಂಘಟಿತರಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡ ಪಿಜೆ. ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಕೂಡಲೇ ರೈತರಿಗೆ ಸ್ಪಂದಿಸಬೇಕು. ಈ ಭಾಗಕ್ಕೆ ನೀರು ಹರಿಸುವ ಕೆಲಸಕ್ಕೆ ಡಿಪಿಆರ್ ರೆಡಿ ಮಾಡಿ ಸರ್ಕಾರದಿಂದ ಹಣ ಮಂಜೂರಾತಿ ಮಾಡಿ ಕಾಮಗಾರಿ ಮುಗಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಬೀರೇನಹಳ್ಳಿ ರಾಮಯ್ಯ, ಪುಟ್ಟಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶಯ್ಯ, ಪಾಂಡಪ್ಪ, ಪಾರ್ವತೇಶ್, ರಾಜಪ್ಪ, ಪಾಂಡುರಂಗಪ್ಪ, ಅರುಣ್, ಕಿರಣ್, ಗೌಡ್ರು ಶಿವಣ್ಣ, ತಿಮ್ಮಣ್ಣ, ಭೂತಾಭೋವಿ ಮುಂತಾದವರು ಹಾಜರಿದ್ದರು.