ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ರೈತರ ಸಹಕಾರ ಬ್ಯಾಂಕಿನಲ್ಲಿರುವ ಮತ್ತು ಖಾಸಗಿ ಬ್ಯಾಂಕುಗಳಲ್ಲಿನ ಸಂಪೂರ್ಣ ಸಾಲ ಮನ್ನಾ ಮಾಡಬೇಕು.

ಹೊಸಪೇಟೆ: ವಿಜಯನಗರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಟಿ. ನಾಗರಾಜ ಮಾತನಾಡಿ, ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ರೈತರ ಸಹಕಾರ ಬ್ಯಾಂಕಿನಲ್ಲಿರುವ ಮತ್ತು ಖಾಸಗಿ ಬ್ಯಾಂಕುಗಳಲ್ಲಿನ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ನಗರದಲ್ಲಿನ ಸಕ್ಕರೆ ಕಾರ್ಖಾನೆಯನ್ನು ಪುನರ್‌ ಆರಂಭಿಸಬೇಕು. ಜಿಲ್ಲೆಯಲ್ಲಿ ಸುಮಾರು 7000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ, ಜೋಳ, ಹತ್ತಿ, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ಇನ್ನು ಹಲವಾರು ಬೆಳೆಗಳನ್ನು ಬಿತ್ತನೆ ಮಾಡಿದ್ದು, ಆದರೆ ಮುಂಗಾರು ಮಳೆ ಕೈಕೊಟ್ಟಿರುವುದಿಂದ ಮೊಳಕೆ ಒಡೆಯುವ ಮುನ್ನವೇ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ರೈತರಿಗೆ ನುಂಗಲಾರದ ತುಪ್ಪದ ಪರಿಸ್ಥಿತಿ ಎದುರಾಗಿದೆ ಎಂದರು.

ಈಗಾಗಲೇ ರೈತರು ಒಂದು ಎಕರೆಗೆ ಸುಮಾರು ₹35 ರಿಂದ ₹40 ಸಾವಿರ ಹೆಚ್ಚುವರಿಯಾಗಿ ಖರ್ಚು ಮಾಡಿದ್ದು, ರೈತರಿಗೆ ಭಾಗವಾಗಿ ಪ್ರತಿಯೊಂದು ಎಕರೆಗೆ ₹50 ಸಾವಿರ ರೂ ಬರಪರಿಹಾರ ರೈತರಿಗೆ ನೀಡಬೇಕು. ಸಹಕಾರ ಬ್ಯಾಂಕುಗಳು, ಮತ್ತು ಖಾಸಗಿ ಬ್ಯಾಂಕುಗಳಲ್ಲಿ ರೈತರು ಪಡೆದಂತಹ ಸಾಲವನ್ನು ಸಂಪೂ ರ್ಣವಾಗಿ ತಕ್ಷಣವೇ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಹೊಸಪೇಟೆ ತಾಲೂಕಿನಲ್ಲಿ ಸುಮಾರು 10 ವರ್ಷಗಳಿಂದ ಸಕ್ಕರೆ ಕಾರ್ಖಾನೆ ಮುಚ್ಚಿದ್ದು, ಇದರ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಎಚ್.ಅರ್‌. ಗವಿಯಪ್ಪ ಮತ ಹಾಕಿದಲ್ಲಿ ನಾವು ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭ ಮಾಡುತ್ತೇವೆಂದು ಭರವಸೆ ನೀಡಿದ್ದರು. ಆದರೆ ಚುನಾವಣೆ ಮುಗಿದು ಸರ್ಕಾರ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆದರೂ ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ, ಶಾಸಕರಾಗಲಿ ಸ್ಥಳೀಯ ಅಧಿಕಾರಿಗಳಾಗಲಿ ಇದರ ಬಗ್ಗೆ ಯಾರು ಕ್ರಮಕೊಳ್ಳದೇ ವಚನಭ್ರಷ್ಟರಾಗಿದ್ದಾರೆ. ಈ ಭಾಗದಲ್ಲಿ ಸುಮಾರು 5 ಲಕ್ಷ ಟನ್ ಕಬ್ಬು ಬೆಳೆಯುತ್ತಿದ್ದು, ಮೈಲಾರ, ಮುಂಡರಗಿ ಮತ್ತು ಸಿರುಗುಪ್ಪ ಫ್ಯಾಕ್ಟರಿಗೆ ಮಾರಾಟ ಮಾಡುತ್ತಿದ್ದು, ಪ್ರತಿ ಟನ್‌ಗೆ ₹1200 ​ನಷ್ಟ ಅನುಭವಿಸಿರುತ್ತಾರೆ. ಕೂಡಲೇ ಸರ್ಕಾರ ಸ್ಪಂದಿಸಿ ಇದರ ಬಗ್ಗೆ ಒತ್ತು ಕೊಡಬೇಕೆಂದು ಸರ್ಕಾರವನ್ನು ಅವರು ಒತ್ತಾಯಿಸಿದರು.

ಹೊಸಪೇಟೆಯ ತಾಲೂಕಿನ 23 ಕೆರೆಗೆಳಿಗೆ ನೀರು ತುಂಬಿಸುವ ಕೆಲಸದಲ್ಲಿ ಸರ್ಕಾರ ವಿಫಲವಾಗಿದೆ. ಈಗಾಗಲೇ ಮಳೆ ಇಲ್ಲದೇ ಜನ, ಜಾನುವಾರುಗಳು ನೀರಿಲ್ಲದೇ ಸಂಕಷ್ಟಕ್ಕೆ ಸಿಲುಕಿವೆ. ತಾಲೂಕಿನ ಪಾಪಿನಾಯಕನಹಳ್ಳಿ ಕೆರೆ, ಹಾಕುಬಾಳು ಕೆರೆ, ವಡ್ಡರಹಳ್ಳಿ ಕೆರೆ, ಬೈಲುವ ದ್ವಿಗೇರಿ, ಕೊಟಗಿನಹಾಳ್, ಗುಂಡ್ಲವ ದ್ದಿಗೇರಿ, ಚೆನ್ನಾಪುರ, ನಲ್ಲಾಪುರ, ಇಂಗಳಿಗಿ ಕೆರೆಗಳಿಗೆ ಸರ್ಕಾರ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಜಡೆಯಪ್ಪ, ತಾಲೂಕು ಘಟಕದ ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಮುಖಂಡರಾದ ಖಾಜಾ ಹುಸೇನ್ ನಿಯಾಜಿ, ಕೆ.ಜೈರುದ್ದೀನ್, ತಾಯಪ್ಪ, ಜಾಕೀರ್ ಇದ್ದರು.