ಯಲಬುರ್ಗಾ: ಕೃಷ್ಣಾ ನದಿಯಿಂದ ಕ್ಷೇತ್ರದ ಕೆರೆಗಳನ್ನು ತ್ವರಿತವಾಗಿ ತುಂಬಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಕೆಬಿಜೆಎನ್‌ಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿಯ ಜಿಲ್ಲಾಧ್ಯಕ್ಷ ಸುಖಮುನಿಯಪ್ಪ ಬಡಿಗೇರ್,ತಾಲೂಕಾಧ್ಯಕ್ಷ ಈಶಪ್ಪ ವಕ್ರ ಮಾತನಾಡಿ, ಯಲಬುರ್ಗಾ-ಕುಕನೂರು ತಾಲೂಕಿನಲ್ಲಿ

ಮಳೆಯ ಅಭಾವದಿಂದ ಬಿತ್ತಿದ ಬೆಳೆಗಳು ಒಣಗಿವೆ. ಜನ ಜಾನುವಾರುಗಳಿಗೆ ನೀರಿನ ತೊಂದರೆಯಾಗಿದೆ. ಕೆರೆಗಳಲ್ಲಿನ ನೀರು ಖಾಲಿಯಾಗಿದ್ದು, ಕೊಳವೆಬಾವಿಗಳ ಅಂತರ್ಜಲ ಮಟ್ಟ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ಬಿಸ್ಕೀಂ ನೀರಾವರಿ ಭಾಗವಾಗಿರುವ ಕೆರೆ ತುಂಬಿಸುವ ಯೋಜನೆಯಡಿ ಕ್ಷೇತ್ರದ ಎಲ್ಲ ಕೆರೆಗಳಿಗೆ ತ್ವರಿತವಾಗಿ ನೀರು ತುಂಬಿಸಬೇಕು. ಕೆರೆಗಳಿಗೆ ನೀರು ಬಿಡುವ ವೇಳಾಪಟ್ಟಿ ಸಾರ್ವಜನಿಕರಿಗೆ ಪ್ರಕಟಿಸಬೇಕು. ನೀರಿನ ಹಂಚಿಕೆಯಲ್ಲಿ ಎಲ್ಲ ಗ್ರಾಮಗಳಿಗೆ ಸಮಾನ ಆದ್ಯತೆ ನೀಡಬೇಕು. ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ನೀರು ಹರಿಸುವ ಕುರಿತು ಮಾಹಿತಿ ನೀಡುವುದು ಹಾಗೂ ಬೆಳೆ ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಪ್ರಮಾಣದ ನೀರನ್ನು ಹರಿಸಬೇಕು. ಇಲ್ಲವಾದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರೊಂದಿಗೆ ಶಾಂತಿಯುತ ಹೋರಾಟ ಹಮ್ಮಿಕೊಳ್ಳಲಾಗುವುದು. ಇದರಿಂದ ಉಂಟಾಗುವ ಎಲ್ಲ ಬೆಳವಣಿಗೆಗೆ ಸಂಬಂಧಿಸಿದ ಇಲಾಖೆಯೇ ಹೊಣೆ ಎಂದು ಆಗ್ರಹಿಸಿದರು.

ಈ ಸಂದರ್ಭ ರೈತ ಮುಖಂಡರಾದ ಹನುಮೇಶ ಬಿಂಗಿ, ಮಂಜುನಾಥ ಯಲಿಗಾರ, ಅಣ್ಣಯ್ಯ, ಹನುಮೇಶ ಸಜ್ಜನ, ಅಂದಪ್ಪ ಗೌಡರ, ಶಿವಣ್ಣ ವಣಗೇರಿ, ವಿರೇಶ ಬಂಗಾರಿ ಸೇರಿದಂತೆ ಮತ್ತಿತರರು ಇದ್ದರು.