ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಎಲ್ಲ ಸಿದ್ದತೆಗಳು ನಡೆದಿವೆ. ಆದರೆ, ಸರ್ಕಾರ ವಿಧಿಸಿರುವ ಷರತ್ತುಗಳನ್ನು ಸಡಿಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಹೂವಿನಹಡಗಲಿ: ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಎಲ್ಲ ಸಿದ್ದತೆಗಳು ನಡೆದಿವೆ. ಆದರೆ, ಸರ್ಕಾರ ವಿಧಿಸಿರುವ ಷರತ್ತುಗಳನ್ನು ಸಡಿಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್‌. ಸಿದ್ದಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರ ಹತ್ತಾರು ಷರತ್ತುಗಳನ್ನು ವಿಧಿಸಿದೆ, ಅವುಗಳನ್ನು ಈ ಕೂಡಲೇ ಕೈ ಬಿಡಬೇಕು, ಹೂವಿನಹಡಗಲಿ ತಾಲೂಕು ಕೇಂದ್ರದಿಂದ ಧಾರವಾಡ 200 ಕಿಮೀ ದೂರ ಇದೆ. ಇಲ್ಲಿಂದ ಮೆಕ್ಕೆಜೋಳವನ್ನು ರೈತರೇ ಲಾರಿಯಲ್ಲಿ ತೆಗೆದುಕೊಂಡು ಹೋಗಬೇಕಿದೆ. ಜತೆಗೆ ಹಾಲು ಉತ್ಪಾದಕರ ಸಂಘದ ಉಪ ಕಚೇರಿಗಳಲ್ಲಿ ರೈತರು ನೋಂದಣಿ ಮಾಡಬೇಕು, ನೋಂದಣಿ ಆದ ರೈತರು 1 ಕೆಜಿ ಮೆಕ್ಕೆಜೋಳ ಮಾದರಿಯನ್ನು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳಿಗೆ ಕೊಡಬೇಕು. ಧಾರವಾಡದ ಪಶು ಆಹಾರ ಘಟಕ ತಲುಪಿಸುವ ವ್ಯವಸ್ಥೆಯನ್ನು ರೈತರೇ ಮಾಡಬೇಕಿದೆ. ಹಾಗಾಗಿ, ಇದರಿಂದ ರೈತರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಈ ಕೂಡಲೇ ಷರತ್ತುಗಳನ್ನು ಕೈ ಬಿಟ್ಟು ಸ್ಥಳೀಯ ಮಟ್ಟದಲ್ಲಿ ಸರ್ಕಾರವೇ ಎಲ್ಲ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಎಚ್‌. ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಬಸವರಾಜ, ದುರುಗಪ್ಪ, ದಾವಲ್‌ಸಾಬ್‌, ಜಯರುದ್ರಪ್ಪ, ಎನ್‌.ಎಂ. ಸಿದ್ದೇಶ, ಎಚ್‌. ಸುರೇಶ, ಕಂಠಿ ಬಸಪ್ಪ ಸೇರಿದಂತೆ ಇತರರು ತಹಸೀಲ್ದಾರ್‌ ಜಿ. ಸಂತೋಷಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.