ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ತಲಾ ತಲಾಂತರದಿಂದ ಪಾರಂಪರಿಕವಾಗಿ ಓಡಾಡುತ್ತಿದ್ದ ರಸ್ತೆಯನ್ನು ಅರಣ್ಯ ಇಲಾಖೆ ಜೆಸಿಬಿ ಯಂತ್ರದಲ್ಲಿ ಗುಂಡಿ ತೆಗೆದು ನಿರ್ಬಂಧಿಸಿರುವ ಬಗ್ಗೆ ಗ್ರಾಮಸ್ಥರಿಗೆ ತೊಂದರೆಯಾಗಿದೆ ಕೂಡಲೇ ಗುಂಡಿ ಮೆಚ್ಚಿ ಅನುಕೂಲ ಕಲ್ಪಿಸಬೇಕೆಂದು ರೈತ ಮುಖಂಡ ಮಾದಪ್ಪ ಒತ್ತಾಯಿಸಿದ್ದಾರೆ. ತಾಲೂಕಿನ ಕಡಬೂರು ಗ್ರಾಮದಿಂದ ಮಲೆ ಮಹದೇಶ್ವರ ಬೆಟ್ಟ ಹಾಗೂ ವಿವಿಧ ಗ್ರಾಮಗಳಿಗೆ ಹೋಗಿ ಬರುವ ಸಂಪರ್ಕ ರಸ್ತೆಯನ್ನು ಅರಣ್ಯ ಇಲಾಖೆ ಜನರಿಗೆ ಓಡಾಡಲು ಅನುಕೂಲ ಕಲ್ಪಿಸದೆ ರಸ್ತೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆದಿರುವ ಸ್ಥಳದಲ್ಲಿ ಅರಣ್ಯ ಇಲಾಖೆ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕ ವತಿಯಿಂದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. ಜೂ.3 ರಂದು ಎಲಚಿಕೆರೆ ಅರಣ್ಯ ಪ್ರದೇಶದಲ್ಲಿ ಕಡಬೂರು ಗ್ರಾಮದ ರೈತ ದನಗಾಹಿಯ ಮೇಲೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಂದ ಹಲ್ಲೆ ನಡೆಸಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಸಂಪರ್ಕ ರಸ್ತೆಯನ್ನೇ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆದು ಗ್ರಾಮಸ್ಥರಿಗೆ ಜನ ಜಾನುವಾರುಗಳಿಗೆ ಓಡಾಡಲು ದಾರಿ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಕಡಬೂರು ಹಾಗೂ ವಿವಿಧ ಗ್ರಾಮಗಳ ನಿವಾಸಿಗಳು ಮಲೆಯ ಮಹದೇಶ್ವರ ಬೆಟ್ಟ ಇನ್ನಿತರ ಗ್ರಾಮಗಳಿಗೆ ಹೋಗಿ ಬರುವ ಸಂಪರ್ಕ ರಸ್ತೆಯಲ್ಲಿ ತೆಗೆದಿರುವ ಅರಣ್ಯ ಇಲಾಖೆ ಗುಂಡಿಯನ್ನು ಮುಚ್ಚುವ ಮೂಲಕ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗುಂಡಿ ಮುಚ್ಚದಿದ್ದರೆ ರಸ್ತೆ ತಡೆ ಎಚ್ಚರಿಕೆ:ಓಡಾಡುತ್ತಿದ್ದ ರಸ್ತೆಯಲ್ಲಿ ಬಾರಿ ಗಾತ್ರದ ಗುಂಡಿಯನ್ನು ತೆಗೆದು ಜನ ಜಾನುವಾರಗಳ ಓಡಾಡದಂತೆ ನಿರ್ಬಂಧ ಏರಿರುವ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆ ತಡೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡರಾದ ಜಗದೀಶ್, ಶ್ರೀನಿವಾಸ್, ನಂದೀಶ್ ಉಪಸ್ಥಿತರಿದ್ದರು.