ನರಸಿಂಹರಾಜಪುರಸರ್ಕಾರ ರೂಪಿಸಿರುವ ಹಲವಾರು ಕಾರ್ಯಕ್ರಮವನ್ನು ರೈತರಿಗೆ ತಲುಪಿಸಲು ಕೃಷಿಕ ಸಮಾಜ ಶ್ರಮಿಸುತ್ತಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ತಿಳಿಸಿದರು.

ಕೃಷಿ ಇಲಾಖೆಯ ಸಭಾಂಗಣದಲ್ಲಿ ತಾಲೂಕು ಕೃಷಿಕ ಸಮಾಜದ ದ್ವೈವಾರ್ಷಿಕ ಸಭೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಸರ್ಕಾರ ರೂಪಿಸಿರುವ ಹಲವಾರು ಕಾರ್ಯಕ್ರಮವನ್ನು ರೈತರಿಗೆ ತಲುಪಿಸಲು ಕೃಷಿಕ ಸಮಾಜ ಶ್ರಮಿಸುತ್ತಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ತಿಳಿಸಿದರು.

ಬುಧವಾರ ಕೃಷಿ ಇಲಾಖೆ ಸಭಾಂಗಣದಲ್ಲಿ ತಾಲೂಕು ಕೃಷಿಕ ಸಮಾಜ ಹಮ್ಮಿಕೊಂಡಿದ್ದ ದ್ವೈಮಾಸಿಕ ಸಭೆಯಲ್ಲಿ ಮಾತನಾಡಿ. ರಯತರ ಸರ್ವಾಂಗಣೀಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಕೃಷಿಕ ಸಮಾಜ ನುರಿತ ತಜ್ಞರನ್ನು ಕರೆಸಿ ರೈತರಿಗೆ ಮಾಹಿತಿ ನೀಡಲಾಗುವುದು. ಕೃಷಿಕ ಸಮಾಜಕ್ಕೆ ಸಂಬಂಧಪಟ್ಟ 16 ಸರ್ಕಾರಿ ಇಲಾಖೆಗಳು ಬರುತ್ತಿದ್ದು ಎಲ್ಲಾ ಇಲಾಖೆಗಳು ರೈತರು ಹಾಗೂ ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸರ್ಕಾರದ ಸೌಲಭ್ಯ, ಯೋಜನೆ ಸಮರ್ಪಕವಾಗಿ ತಲುಪಿಸಬೇಕು ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಇಲಾಖೆ ಮುಖ್ಯಸ್ಥರು ರೈತರಿಗೆ ಸಂಬಂಧಪಟ್ಟ ಸರ್ಕಾರದ ಆದೇಶಗಳ ಅನುಷ್ಠಾನಕ್ಕೆ ಆದೇಶಗಳನ್ನು ಅಧ್ಯಯನ ಮಾಡಿ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ಕೃಷಿಕ ಸಮಾಜದ ವ್ಯಾಪ್ತಿಯ ಇಲಾಖೆ ಅಧಿಕಾರಿಗಳು ದ್ವೈಮಾಸಿಕ ಸಭೆ ಗಳಿಗೆ ಮಾಹಿತಿ ಜತೆ ಕಡ್ಡಾಯವಾಗಿ ಆಗಮಿಸಲು ಸೂಚಿಸಿದರು.

ಸಭೆಯಲ್ಲಿ ಪಶು ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಿನಯ್ ಕುಮಾರ್ ಮಾಹಿತಿ ನೀಡಿ ಈ ವರ್ಷ ಬರಗಾಲ ಬಂದಿರುವುದರಿಂದ ನಮ್ಮ ಇಲಾಖೆಯಿಂದ ರೈತರಿಗೆ ಉಚಿತವಾಗಿ ಮೇವಿನ ಬೀಜ ನೀಡಲಾಗುವುದು. ಪಶು ವೈದ್ಯ ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ ಎಂದರು.

ಕೃಷಿ ಇಲಾಖೆ ಅಧೀಕ್ಷಕ ಪ್ರಕಾಶ್ ಮಾಹಿತಿ ನೀಡಿ, ಕೃಷಿ ಇಲಾಖೆಯಿಂದ ರೈತರಿಗೆ 48 ಕ್ವಿಂಟಾಲ್ ಬಿತ್ತನೆ ಬೀಜ ನೀಡಿ ದ್ದೇವೆ. 1750 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟೀ ಆಗಿದೆ. ಈ ವರ್ಷ ಮಳೆ ಕಡಿಮೆಯಾಗಿ ಬರಗಾಲ ಬಂದಿರುವುದರಿಂದ ಸರ್ಕಾರದ ಪರಿಹಾರಕ್ಕೆ ಹಾಗೂ ಬೆಳೆ ವಿಮೆಗೆ ಕ್ರಾಪ್ ಸರ್ವೆ ಅಗತ್ಯ. 57 ಗ್ರಾಮದಲ್ಲಿ 46 ಖಾಸಗಿ ನಿವಾಸಿಗಳು ಬೆಳೆ ಸರ್ವೆ ಮಾಡುತ್ತಿದ್ದಾರೆ ಎಂದರು.

ಸಭೆಯಲ್ಲಿ ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಡಿ.ಜಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ನವೀನ್, ಖಜಾಂಚಿ ಚೇತನ್, ನಿರ್ದೇಶಕರಾದ ಯಡಗೆರೆ ಸುಬ್ರಮಣ್ಯ, ಎನ್.ರಮೇಶ್, ತಿಮ್ಮಣ್ಣ, ಶ್ರೀನಿವಾಸ್, ನಾಗರಾಜ್, ಸುಪ್ರೀತ್ ಇದ್ದರು. ಇದೇ ಸಂದರ್ಭದಲ್ಲಿ ಪಶು ವೈದ್ಯ ಇಲಾಖೆಯಿಂದ ರೇಬೀಸ್ ರೋಗದ ಮಾಹಿತಿ ಇರುವ ಬ್ಯಾನರ್ ನ್ನು ಬಿಡುಗಡೆ ಮಾಡಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.