ಸಾರಾಂಶ
ರಾಮನಗರ: ಜಿಲ್ಲೆಯಲ್ಲಿ ತೆಂಗು ಬೆಳೆ ಅಭಿವೃದ್ಧಿಗಾಗಿ ರೈತರು ಆರ್ಥಿಕವಾಗಿ ಶಕ್ತರಾಗಬೇಕು. ನೀರಾ ಉತ್ಪಾದನೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾಸರಗೋಡು ತೆಂಗು ಬೆಳೆ ಉತ್ಪಾದನೆಯ ಸಂಶೋಧನಾ ವಿಭಾಗ ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ತೆಂಗಿನಲ್ಲಿ ಕಪ್ಪು ತಲೆ ಹುಳು, ಬಿಳಿ ನೊಣದ ನಿಯಂತ್ರಣ ಹಾಗೂ ತೆಂಗು ಬೆಳೆಯ ಅಭಿವೃದ್ಧಿ ಕುರಿತು ವಿಜ್ಞಾನಿಗಳ ತಂಡ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಪ್ಲಾಂಟೆಷನ್ ಮಾಡಲು ಕ್ರಮವಹಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದೆ. ಬೆಂಗಳೂರು ಮೈಸೂರು ಹೆದ್ದಾರಿ ಚನ್ನಪಟ್ಟಣ ಮತ್ತು ರಾಮನಗರ ರೈತರಿಗೆ ಅನುಕೂಲವಾಗಿರುವುದರಿಂದ ನೀರಾ ವ್ಯಾಪಾರಕ್ಕೆ ಸಹಾಯವಾಗಲಿದೆ. ತೆಂಗು ಬೆಳೆಗಾರರಿಗೆ ವಿಮೆ ಮಾಡಿಸಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸಂಶೋಧನಾಧಿಕಾರಿ ಡಾ.ವಿನಾಯಕ ಹೆಗಡೆ ಮಾತನಾಡಿ, ತುಮಕೂರು, ಮೈಸೂರು, ಮಂಡ್ಯ, ಹಾಸನ ಪ್ರದೇಶಗಳಲ್ಲಿ ತೆಂಗು ಬೆಳೆ ಕೀಟಬಾಧೆ ಇದ್ದು ಇವುಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ, ನಿಯಂತ್ರಿಸಿದರೆ ತೆಂಗು ಬೆಳೆಯಲ್ಲಿ ವೃದ್ಧಿ ಕಾಣಬಹುದು. ಜಿಲ್ಲೆಯಲ್ಲಿ ಕೃಷಿಯು ಶೇ.20ರಷ್ಟು ತೇವಾಂಶದಿಂದ ಹಾಗೂ ಶೇ.80ರಷ್ಟು ಮಳೆ ನೀರಿನಿಂದ ಅವಲಂಭಿತವಾಗಿದೆ. ತೆಂಗು ಬೆಳೆಯಲ್ಲಿ ಕೆಲವು ಬಾರಿ ಪ್ರಾರಂಭಿಕವಾಗಿ ರೋಗವನ್ನು ಪತ್ತೆ ಹಚ್ಚಿ ನಿಯಂತ್ರಿಸಬಹುದು ಹಾಗೂ ಕೆಲವು ಬಾರಿ ರೋಗ ಹರಿಡಿದ ನಂತರ ಸೂಕ್ತ ಔಷಧಿಕರಣದಿಂದ ರೋಗವನ್ನು ನಿಯಂತ್ರಿಸಬಹುದು.ತೆಂಗು ಬೆಳೆಯಲ್ಲಿ ಸುಳಿಕೊರೆ, ಕಾಂಡಸೋರುವ ರೋಗ ಮತ್ತು ಅಣಬೆ ರೋಗ ಸಾಮಾನ್ಯವಾಗಿ ಕಾಣಬಹುದು ಕಾಂಡಸೋರುವ ರೋಗವು ಶಿಲೀಂದ್ರದಿಂದ ಬರುವಂತಹುದು ಈ ರೋಗವು ಎಲ್ಲಾ ಪ್ರದೇಶದಲ್ಲಿ ಕಾಣಬಹುದು ಮಣ್ಣಿನಿಂದ ಬರುವ ಶಿಲೀಂದ್ರ ರೋಗ ಕಾಂಡದೊಳಗೆ ಪ್ರವೇಶಿಸಲ್ಪಡುತ್ತದೆ ಈ ರೋಗದಿಂದ ಮರವು ಸಣ್ಣದಾಗಿ ಇವುಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದಲ್ಲಿ ನಿಧಾನವಾಗಿ ರೋಗವು ಕಾಣೆಯಾಗುತ್ತದೆ ಎಂದು ಹೇಳಿದರು.
ಸಂಶೋಧನಾಧಿಕಾರಿ ಡಾ. ರವಿ ಭಟ್ ಮಾತನಾಡಿ, ತೆಂಗು ಬೆಳೆಯು ನಾಟಿಯಲ್ಲಿ ಕ್ರಮಬದ್ಧವಾಗಿರಬೇಕು ನೀರು, ವಾತಾವರಣ, ಮಣ್ಣು ಪೋಷಕಾಂಶಗಳ ನಿರ್ವಹಣೆ ಬಹಳ ಮುಖ್ಯ ತೆಂಗು ನಿರಂತರ ಕೃಷಿಯಾಗಿದೆ ಸಾಧ್ಯವಾದಷ್ಟು ಮಣ್ಣಿನ ಪರೀಕ್ಷೆ ಮಾಡಿಸಿ ತೆಂಗಿನ ಮರಕ್ಕೆ ಸಾವಯವ ಗೊಬ್ಬರ ಬಳಸಿ ರಾಸಾಯನಿಕ ಗೊಬ್ಬರ ಕಡಿಮೆ ಉಪಯೋಗಿಸಬೇಕು ಒಂದು ಬಾರಿ ತೆಂಗು ಬೆಳೆಯಲ್ಲಿ ವ್ಯತ್ಯಾಸ ಉಂಟಾದಲ್ಲಿ ಮೂರು ವರ್ಷ ಕಾಯಬೇಕಾಗುತ್ತದೆ ಹನಿ ನೀರಾವರಿ ಉಪಯೋಗಿಸಿದಲ್ಲಿ ಗೊಬ್ಬರ ಉಳಿತಾಯವಾಗುತ್ತದೆ ತೆಂಗು ಬೆಳೆ ಮಧ್ಯೆ ಹಣ್ಣು ತರಕಾರಿ ಹಾಗೂ ಇತರೆ ಬೆಳೆಗಳನ್ನು ತಜ್ಞರ ಸಲಹೆ ಪಡೆದು ಬೆಳೆಯಬಹುದು ಇದರಿಂದ ಕೀಟ ರೋಗಗಳ ಬಾದೆ ಕಡಿಮೆ ಆಗುತ್ತದೆ ಎಂದು ತಿಳಿಸಿದರು.ತೆಂಗು ಬೆಳೆ ಸಂಸ್ಥೆಯ ನಿರ್ದೇಶಕ ಡಾ. ಹೆಬ್ಬಾರ್ ಮಾತನಾಡಿ, ತೆಂಗಿನಿಂದ ನೀರಾ (ಕಲ್ಪರಸ), ಎಳೆನೀರು ಮತ್ತು ತೆಂಗಿನ ಕಾಯಿ ಯಿಂದ 200 ರಿಂದ 300 ಬಗೆಯ ಪಾದಾರ್ಥಗಳನ್ನು ತಯಾರಿಸಬಹುದು ಒಂದು ಮರದ ನೀರಾದಿಂದ ಒಂದು ವರ್ಷಕ್ಕೆ ಇಪ್ಪತ್ತು ಸಾವಿರಗಳಷ್ಟು ಹಣ ಗಳಿಸಬಹುದು ಎಂದರು.
ತೋಟಗಾರಿಕೆ ಉಪನಿರ್ದೇಶಕ ಮುನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿ ತೆಂಗು ಮತ್ತು ಮಾವುವನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಅದರಲ್ಲಿ 28 ಸಾವಿರ ಕುಟುಂಬಗಳು ತೆಂಗು ಬೆಳೆಗೆ ಅವಲಂಬಿತವಾಗಿದ್ದು, ತೆಂಗು ಬೆಳೆಯು ಮಹತ್ವದ ಬೆಳೆಯಾಗಿದೆ ಎರಡು ವರ್ಷಗಳಲ್ಲಿ ತೆಂಗು ಬೆಳೆ ಕುಂಟಿತಗೊಂಡಿದೆ. ಮೊದಲು 100 ರಿಂದ 150 ಕಾಯಿ ಬಿಡುತ್ತಿದ್ದು ತೆಂಗಿನ ಮರವು ಪ್ರಸ್ತುತ 15 ರಿಂದ 20 ಕಾಯಿ ಪ್ರತಿ ಗೊಂಚಲಿಗೆ ಬಿಡುತ್ತಿದೆ. ಇದಕ್ಕೆ ಕಾರಣ ತೆಂಗು ಮರದಲ್ಲಿ ಕಾಣಿಸುವ ರೋಗಗಳಾಗಿದೆ. ಚನ್ನಪಟ್ಟಣದಲ್ಲಿ ತೆಂಗು ಪ್ರಾಯೋಗಿಕ ಕೇಂದ್ರ ಇದ್ದು ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳವಂತೆ ತಿಳಿಸಿದರು.ಜಿಪಂ ಸಿಇಒ ಅನ್ಮೊಲ್ ಜೈನ್, ಸಂಶೋಧನಾಧಿಕಾರಿಗಳಾದ ಡಾ ಜೋಸೇಪ್ ರಾಜ್ ಕುಮಾರ್, ಡಾ. ಚಂದ್ರಶೇಖರ್, ಯೋಜನಾ ನಿರ್ದೇಶಕರಾದ ಚಿಕ್ಕಸುಬ್ಬಯ್ಯ, ತೆಂಗು ಬೆಳೆಯ ಸಂಶೋನಾಧಿಕಾರಿಗಳು, ಪ್ರಗತಿ ಪರ ರೈತರು, ರೈತ ಸಂಘಗಳ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ ಭಾಗವಹಿಸಿದ್ದರು.3ಕೆಆರ್ ಎಂಎನ್ 4.ಜೆಪಿಜಿ
ರಾಮನಗರದಲ್ಲಿ ತೆಂಗಿನಲ್ಲಿ ಕಪ್ಪು ತಲೆ ಹುಳು, ಬಿಳಿ ನೊಣದ ನಿಯಂತ್ರಣ ಹಾಗೂ ತೆಂಗು ಬೆಳೆಯ ಅಭಿವೃದ್ಧಿ ಕುರಿತು ವಿಜ್ಞಾನಿಗಳ ತಂಡದ ಸಭೆ ನಡೆಯಿತು.