ಸಾರಾಂಶ
ಸಾಂಪ್ರದಾಯಿಕ ಕೃಷಿ ಜತೆಗೆ ಹೈನುಗಾರಿಕೆ ಅಗತ್ಯವಿದೆ. ಇದರಿಂದ ದನಕರುಗಳ ಸೆಗಣಿಯಿಂದ ಉಚಿತವಾಗಿ ರೈತರಿಗೆ ಗೊಬ್ಬರವು ದೊರಕಲಿದೆ. ಆರ್ಥಿಕವಾಗಿಯೂ ರೈತರು ಸದೃಢರಾಗಬಹುದು.
ಧಾರವಾಡ:
ಹೈನುಗಾರಿಕೆಯ ಕೌಶಲ ರೈತರು ರೂಢಿಸಿಕೊಂಡರೆ ಜೀವನ ಲಾಭದಾಯಕ ಆಗಲಿದೆ ಎಂದು ಕರ್ನಾಟಕ ಹಾಲು ಒಕ್ಕೂಟ ಮಂಡಳಿ ನಿರ್ದೇಶಕ ಡಾ. ವೀರೇಶ ತರಲಿ ಹೇಳಿದರು.ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ವತಿಯಿಂದ ತಾಲೂಕಿನ ಮುಗದ ಗ್ರಾಮದಲ್ಲಿ ಮೂರು ದಿನ ನಡೆದ ಹೈನುಗಾರಿಕೆ ತರಬೇತಿ ಸಮಾರೋಪ ಧಾರವಾಡ ಹಾಲು ಒಕ್ಕೂಟದ ಆವರಣದಲ್ಲಿ ನಡೆಯಿತು. ಈ ವೇಳೆ
ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿದ ಅವರು, ಸಾಂಪ್ರದಾಯಿಕ ಕೃಷಿ ಜತೆಗೆ ಹೈನುಗಾರಿಕೆ ಅಗತ್ಯವಿದೆ. ಇದರಿಂದ ದನಕರುಗಳ ಸೆಗಣಿಯಿಂದ ಉಚಿತವಾಗಿ ರೈತರಿಗೆ ಗೊಬ್ಬರವು ದೊರಕಲಿದೆ. ಆರ್ಥಿಕವಾಗಿಯೂ ರೈತರು ಸದೃಢರಾಗಬಹುದು ಎಂದರು.ತರಬೇತಿ ಪಡೆದ ಸುಮನ್ ಹೆಬ್ಳಿಕರ, ತರಬೇತಿಯಿಂದ ಸಾಕಷ್ಟು ಹೊಸ ಅಂಶ ತಿಳಿದುಕೊಳ್ಳಲು ಸಹಕಾರಿಯಾಯಿತು ಎಂದರು. ಕೆಂಚಪ್ಪ ಸಿರಿಮಣ್ಣವರ, ರವಿಕುಮಾರ್ ಕೋರಿ, ಬಸವ್ವ ಮುದ್ದಿ, ಶಂಕರಗೌಡ ನೀರಲಕಟ್ಟಿ ತರಬೇತಿಯ ಅನುಭವ ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ ಡಾ. ಗೋಪಾಲಕೃಷ್ಣ ಕಮಲಾಪುರ ಮಾತನಾಡಿದರು. ಪ್ರಾದೇಶಿಕ ಮುಖ್ಯಸ್ಥ ಜಯಂತ್ ಕೆ.ಎಸ್, ಕೆಎಂಎಫ್ ವ್ಯವಸ್ಥಾಪಕ ಡಾ. ರಾಕೇಶ ತಲ್ಲೂರ, ಮಲ್ಲಪ್ಪ ಹಂಪಣ್ಣವರ, ಮಯೂರ ಜೋಳದ ಇದ್ದರು. ತರಬೇತಿ ಪಡೆದ 37 ಮಹಿಳೆಯರು ಹಾಗೂ ಏಳು ಪುರುಷರು ಸೇರಿದಂತೆ ಒಟ್ಟು 44 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ರಾಘವೇಂದ್ರ ಹೊನ್ನಳ್ಳಿ ನಿರೂಪಿಸಿದರು.