ಸಾರಾಂಶ
ಕನ್ನಡಪ್ರಭ ವಾರ್ತೆ ನವಲಗುಂದ
ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಮಾಡುವಂತೆ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಘೇರಾವ್ ಹಾಕಿದ ರೈತರು ಲೋಕಸಭೆ ಚುನಾವಣಾ ಪೂರ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳದಿದ್ದರೆ ಕ್ಷೇತ್ರ ಪ್ರವೇಶ ಮಾಡಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ ಘಟನೆ ಶನಿವಾರ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆಯಿತು.ಸರ್ಕಾರಿ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಜೋಶಿ ಹಾಗೂ ಶಾಸಕ ಕೋನರಡ್ಡಿ ಆಗಮಿಸಿದ್ದರು. ಈ ವೇಳೆ ಕೇಂದ್ರ ಸಚಿವ ಜೋಶಿ ಅವರಿಗೆ ಘೇರಾವ್ ಹಾಕಿದ ರೈತ ಮುಖಂಡರು ಕಳೆದ ಹಲವಾರು ವರ್ಷಗಳಿಂದ ಮಹದಾಯಿ ಯೋಜನೆ ಅನುಷ್ಠಾನದ ಆಸೆ ತೋರಿಸಿಯೇ ಅಧಿಕಾರ ಅನುಭವಿಸಿದ್ದು ಸಾಕು. ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಆರೋಪಗಳನ್ನು ಮಾಡುವುದನ್ನು ಬಿಟ್ಟು ಲೋಕಸಭೆ ಚುನಾವಣೆ ಪೂರ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡದಿದ್ದಲ್ಲಿ ರೈತರಿಂದ ನಡೆಯುವ ಹೋರಾಟ ಎದುರಿಸಲು ಸಿದ್ಧರಾಗಬೇಕು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ, ಯೋಜನೆ ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಕೆಲವೊಂದು ತಾಂತ್ರಿಕ ತೊಂದರೆಗಳಿಗೆ ರಾಜ್ಯ ಸರ್ಕಾರ ಉತ್ತರ ನೀಡಬೇಕಿದ್ದು, ಇವೆಲ್ಲ ಕೆಲಸಗಳು ಎಷ್ಟು ಬೇಗನೇ ಮುಗಿಯುತ್ತವೆಯೋ ಅಷ್ಟೇ ಶೀಘ್ರ ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡಲಿದೆ ಎಂದು ರೈತರನ್ನು ಸಮಾಧಾನ ಪಡಿಸಿದರು.ಸಚಿವರ ಮಾತಿಗೆ ತೃಪ್ತರಾಗದ ರೈತ ಮುಖಂಡ ಶಂಕರ ಅಂಬಲಿ, ಇಷ್ಟು ವರ್ಷ ಮಹದಾಯಿ ಮೇಲೆ ಅಧಿಕಾರಿ ಅನುಭವಿಸಿದ್ದು ಸಾಕು. ಅಧಿಕಾರಸ್ಥರು ಪರಸ್ಪರ ಆರೋಪ ಬಿಟ್ಟು ಅನುಷ್ಠಾನಕ್ಕೆ ಬದ್ಧರಾಗಿ. ಇಲ್ಲವೇ ರೈತ ಹೋರಾಟಗಾರರೇ ಮಹದಾಯಿ ಯೋಜನೆ ಬಿಟ್ಟು, ಮಲಪ್ರಭಾ ಉಳಿಸಿ ಆಂದೋಲನದ ಮೂಲಕ ಮತ್ತೊಂದು ಹೋರಾಟ ಆರಂಭಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ನವಲಗುಂದದಿಂದ ಬಂದಿದ್ದ ರೈತ ಮುಖಂಡರು ಘೇರಾವ್ ಹಾಕಲು ಯತ್ನಿಸಿದಾಗ ಗ್ರಾಮದ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಮುಖಂಡರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಲ್ಲದೇ ನಮ್ಮ ಗ್ರಾಮದ ಕೆಲವು ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ ಸಚಿವರಿಗೆ ಘೇರಾವ್ ಹಾಕುವುದು ಸರಿಯಲ್ಲ. ಬೇಕಾದರೆ ನಿಮ್ಮ ಊರಿಗೆ ಬಂದಾಗ ಇಂತಹ ಕೆಲಸ ಮಾಡಿ ಎಂದು ಈ ವೇಳೆ ವಾಗ್ವಾದ ನಡೆಯಿತು. ನಂತರ ಸಚಿವ ಜೋಶಿ ಅವರೇ ಹೋರಾಟಗಾರರನ್ನು ಸಮಾಧಾನ ಪಡಿಸಿದರು.ಈ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ, ರೈತ ಮುಖಂಡ ರಘುನಾಥ ನಡುವಿನಮನಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))