ಶಿಕಾರಿಪುರ ತಾಲೂಕಲ್ಲಿ ಭೂಮಿ ಹುಣ್ಣಿಮೆ ಸಂಭ್ರಮಿಸಿದ ರೈತರು
KannadaprabhaNewsNetwork | Published : Oct 29 2023, 01:01 AM IST
ಶಿಕಾರಿಪುರ ತಾಲೂಕಲ್ಲಿ ಭೂಮಿ ಹುಣ್ಣಿಮೆ ಸಂಭ್ರಮಿಸಿದ ರೈತರು
ಸಾರಾಂಶ
ಮಣ್ಣಿನ ಮಕ್ಕಳು ಗರ್ಭಿಣಿಗೆ ಸೀಮಂತ ಕಾರ್ಯ ಮಾಡಿದಂತೆ ಭೂ ತಾಯಿಗೂ ಸೀಮಂತ ಮಾಡಿ ಸಂಭ್ರಮಿಸುತ್ತಾರೆ.
ಕನ್ನಡಪ್ರಭ ವಾರ್ತೆ, ಶಿಕಾರಿಪುರ ತಾಲೂಕಿನಾದ್ಯಂತ ಶನಿವಾರ ಸಡಗರ, ಸಂಭ್ರಮದಿಂದ ಭೂಮಿ ಹುಣ್ಣಿಮೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಶೀಗೆ ಹುಣ್ಣಿಮೆಯ ಹೊತ್ತಿಗೆ ಭೂಮಿ (ಗದ್ದೆ, ತೋಟ) ಮುಂಗಾರು ಫಸಲಿನಿಂದಲೂ ಎಳ್ಳಮವಾಸ್ಯೆಯ ಹೊತ್ತಿಗೆ ಹಿಂಗಾರಿನ ಫಸಲಿನಿಂದಲೂ ಕಾಳು ಕಟ್ಟಿಕೊಂಡು ನಿಂತಿರುತ್ತವೆ. ಗರ್ಭಿಣಿ ಗರ್ಭದಲ್ಲಿ ಮಗುವನ್ನು ಹೊತ್ತು, ಮುಂದೆ ಮಗುವನ್ನು ಹೆರುವ, ಮನೆ ತುಂಬುವ ನಿರೀಕ್ಷೆಯಲ್ಲಿರುವಂತೆ ಇಲ್ಲಿ ಭೂಮಿ ಕೂಡ ಬೆಳೆಗಳನ್ನು ಹೊತ್ತು, ಮಣ್ಣಿನ ಮಕ್ಕಳಿಗೆ ಫಸಲು ಕೊಟ್ಟು ಅವನ ಕಣಜ ತುಂಬುವ ಕಾತುರದಲ್ಲಿರುತ್ತಾಳೆ. ಹೀಗಾಗಿ ಗರ್ಭಿಣಿ ಹೆಂಗಸನ್ನು, ಭೂ ತಾಯಿಯನ್ನು ಒಂದೇ ದೃಷ್ಠಿಕೋನದಿಂದ ನೋಡಬಯಸುವ ಮಣ್ಣಿನ ಮಕ್ಕಳು ಗರ್ಭಿಣಿಗೆ ಸೀಮಂತ ಕಾರ್ಯ ಮಾಡಿದಂತೆ ಭೂ ತಾಯಿಗೂ ಸೀಮಂತ ಮಾಡಿ ಸಂಭ್ರಮಿಸುತ್ತಾರೆ. ಗರ್ಭಿಣಿಯಲ್ಲಿ ಹೇಗೆ ಬಯಕೆಗಳಿರುತ್ತವೆಯೋ, ಹಾಗೆಯೇ ಭೂಮಿ ತಾಯಿಗೂ ಬಯಕೆಗಳ ಇರುತ್ತವೆ ಎಂಬುದು ಅವರ ಗಟ್ಟಿಯಾದ ನಂಬುಗೆ. ಅವರ ದೃಷ್ಠಿಯಲ್ಲಿ ಬಸಿರು ಹೆಂಗಸು, ಕಾಳುಕಟ್ಟಲು ಸಿದ್ಧವಾಗಿ ನಿಂತ ಭೂತಾಯಿ ಎರಡು ಒಂದೇ. ಇಂಥ ಸಂಬ್ರಮದ ಭೂಮಿ ಹುಣ್ಣಿಮೆಯನ್ನು ತಾಲೂಕಿನಲ್ಲೂ ರೈತರು ಆಚರಿಸಿದರು. ವಿವಿಧ ಬಗೆಯ ಅಡುಗೆಗಳನ್ನು ಮಾಡಿ, ಬಂಧು ಬಾಂಧವರೊಡನೆ ಚಕ್ಕಡಿ ಕಟ್ಟಿಕೊಂಡು ಹೊಲಗದ್ದೆ, ತೋಟಗಳಿಗೆ ಹೋಗಿ ಭೂದೇವಿಯನ್ನು ಪೂಜಿಸಿದರು. ಭಕ್ತಿಯಿಂದ ತಯಾರಿಸಿದ ಚರಗಾವನ್ನು (ವಿವಿಧ ಸೊಪ್ಪು, ತರಕಾರಿ, ಹಣ್ಣು ಮುಂತಾದವುಗಳಿಂದ ತಯಾರಿಸಿದ ಭಕ್ಷ್ಯ) ಹೂಲ್ ಗ್ಯಾ, ಹೂಲ್ ಗ್ಯಾ ಎನ್ನುತ್ತಾ ತಮ್ಮ ಹೊಲ-ಗದ್ದೆ, ತೋಟಗಳಲ್ಲಿ ಬೀರಿದರು. ಪೈರು ಹುಲುಸಾಗಿ ಬೆಳೆದ ಭೂ ತಾಯಿಯ ಸೀಮಂತ ಕಾರ್ಯಕ್ರಮವನ್ನು ಶ್ರದ್ಧೆ-ಭಕ್ತಿಯಿಂದ ನೆರವೇರಿಸಿದರು. - - - ಬಾಕ್ಸ್ ಚರಗ ಚೆಲ್ಲುವ ವಿಶೇಷ ಆಚರಣೆ ಚರಗ ಚೆಲ್ಲುವುದೆಂದರೆ ಅದು ಕಾಟಾಚಾರದ ಆಚರಣೆಯಲ್ಲ. ವಾರಗಟ್ಟಲೇ ಮನೆಯಲ್ಲಿ ಅದಕ್ಕೆ ಸಿದ್ಧತೆ ನಡೆದಿರುತ್ತದೆ. ಎಳ್ಳು ಹಚ್ಚಿ ಮಾಡಿದ ಸಜ್ಜಿರೊಟ್ಟಿ, ಹುರಿಯಕ್ಕಿ, ಕರ್ಚಿಕಾಯಿ. ಶೇಂಗಾ ಹೋಳಿಗೆ, ಶೇಂಗಾ ಚಟ್ನಿ, ಗುರೆಳ್ಳ ಹಿಂಡಿ, ಅಗಸೆ ಹಿಂಡಿ ಇವೆಲ್ಲವುಗಳನ್ನು ಭೂಮಿ ಹುಣ್ಣಿಮೆ ಆಚರಣೆಗಾಗಿ ಮೊದಲೇ ಸಿದ್ಧಪಡಿಸಿರುವುದು ಹಬ್ಬದ ವೈಶಿಷ್ಟತೆಗೆ ಸಾಕ್ಷಿ. ಇಂಥ ಚರಗ ಚಲ್ಲುವ ಉದ್ದೇಶ ದುಷ್ಟಶಕ್ತಿಗಳಿಂದ ಬೆಳೆಗಳನ್ನು ರಕ್ಷಿಸುವುದು, ಉತ್ತಮ ಬೆಳೆಗಾಗಿ ಪ್ರಾರ್ಥಿಸುವುದಾಗಿದೆ. ಚರದ ಚೆಲ್ಲಿದ ನಂತರ ಕುಟುಂಬ ಸಮೇತ ರೈತರು ಭೋಜನ ಮಾಡಿ ನೆಮ್ಮದಿ, ಸಂತೃಪ್ತಿ ಕಾಣುವುದು ಹಬ್ಬದ ವಿಶೇಷ. - - - -28ಕೆಎಸ್.ಕೆಪಿ2: ಶಿಕಾರಿಪುರದಲ್ಲಿ ಶನಿವಾರ ಪುರಸಭಾ ಸದಸ್ಯ ನಾಗರಾಜಗೌಡ ಕುಟುಂಬ ಭೂಮಿ ಹುಣ್ಣಿಮೆ ಹಬ್ಬವನ್ನು ಸಂಪ್ರದಾಯದಂತೆ ಸಂಭ್ರಮ, ವಿಜೃಂಭಣೆಯಿಂದ ಆಚರಿಸಿದರು.